May students possess the determination to reach the goal of success.

- ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಎಸ್.ಎಸ್.ಸ್ನೇಹಾ ಶಾನುವಳ್ಳಿ ಸಲಹೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗೆಲುವಿನ ಕಡೆಗೆ ಗುರಿ ಮುಟ್ಟುವ ಛಲವಿರಬೇಕು ಎಂದು ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಎಸ್.ಎಸ್.ಸ್ನೇಹಾ ಶಾನುವಳ್ಳಿ ಹೇಳಿದರು.

ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಸರ್ಕಾರಿ ಪ್ರೌಢಶಾಲೆ ಆತಿಥ್ಯದಲ್ಲಿ ಆರಂಭಗೊಂಡ ಚಿಕ್ಕಮ ಗಳೂರು ಜಿಲ್ಲಾ ಮಟ್ಟದ 14/17 ವಯೋಮಿತಿ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಪರ್ಧಿಸಿ ಗೆಲುವಿನ ಗುರಿ ಮುಟ್ಟುವ ಶ್ರೇಷ್ಠ ಛಲ ಇಟ್ಟುಕೊಂಡಿರಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಎಂದು ತಿಳಿದಿರಬೇಕು.

ಸ್ಪರ್ಧೆಗಳಲ್ಲಿ ಭಾಗವಹಿಸಿದವರು ಇಂದು ಗೆಲುವು ಸಾಧಿಸದಿದ್ದರೂ ಸಹ ಮುಂದೊಂದು ದಿನ ಗೆಲುವು ಸಾಧಿಸುವುದು ಖಚಿತ. ಬಹುಮಾನ ಬಂದವರು ಹೆಚ್ಚು ಬೀಗದೆ ಮುಂದಿನ ಸಾಧನೆ ಕಡೆಗೆ ಗಮನಹರಿಸಬೇಕು. ನಾನು ಸಹ ಇಲ್ಲಿನ ವಿದ್ಯಾರ್ಥಿಗಳ ರೀತಿಯಲ್ಲಿಯೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಇಂದು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಬಾಳೆಹೊನ್ನೂರಿನಲ್ಲಿ ಉತ್ತಮ ರೀತಿಯಲ್ಲಿ ವ್ಯವಸ್ಥಿತ ಕ್ರೀಡಾಕೂಟ ಆಯೋಜನೆ ಮಾಡಿದ್ದು, ಸ್ಪರ್ಧಿಗಳು ಕ್ರೀಡಾ ಸ್ಫೂರ್ತಿ ಯಿಂದ ಭಾಗವಹಿಸಿ ಬಹುಮಾನ ಪಡೆಯಬೇಕು. ತೀರ್ಪುಗಾರರು ನ್ಯಾಯಯುತ, ನಿಪಕ್ಷಪಾತ ತೀರ್ಪು ನೀಡಬೇಕು.

ಏಷ್ಯನ್ ಗೇಮ್ಸ್ನಲ್ಲಿ ಸಾಧನೆ ಮಾಡಿದ ಸ್ನೇಹಾ ಅವರ ಸಾಧನೆ ಕ್ರೀಡಾ ಸ್ಪರ್ಧಿಗಳಿಗೆ ಮಾದರಿ. ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಇಂದು ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಕ್ರೀಡೆಯ ಕೋಟಾದಲ್ಲಿ ಶೇ.೩ ಮೀಸಲಾತಿ ಯನ್ನು ಸರ್ಕಾರಿ ಉದ್ಯೋಗಕ್ಕೆ ಮೀಸಲಿಟ್ಟಿರುವುದು ಶ್ಲಾಘನೀಯ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಸ್ಪರ್ಧಿಗಳು ಹಾಗೂ ಕ್ರೀಡಾ ಸಾಧಕರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಬಾಳೆಹೊನ್ನೂರಿನಲ್ಲಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಸ್ಪರ್ಧಿಗಳು ಕ್ರೀಡಾ ಮನೋಭಾವ ದೊಂದಿಗೆ ಸ್ಪರ್ಧಿಸಬೇಕು ಎಂದರು.

ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಕ್ರೀಡೆಯಿಂದ ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ, ದಕ್ಷಿಣ ವಲಯ ಹ್ಯಾಮರ್ ಥ್ರೋನಲ್ಲಿ ಚಿನ್ನದ ಪದಕ ಪಡೆದ ಸಾಲೀಮ್ ಅವರನ್ನು ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ, ಡಿಡಿಪಿಐ ಸಿದ್ದರಾಜು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಬಿಇಓ ಶಬನಾ ಅಂಜುಮ್, ಪ್ರಮುಖರಾದ ಜ್ಞಾನಮೂರ್ತಿ, ಮಹಮ್ಮದ್ ಹನೀಫ್, ಎಂ.ಎಸ್.ಜಯಪ್ರಕಾಶ್, ಎಂ.ಎಸ್. ಅರುಣೇಶ್, ಹಿರಿಯಣ್ಣ, ಸನತ್ ಶೆಟ್ಟಿ, ಯೋಗೀಶ್‌ಗೌಡ, ಇಬ್ರಾಹಿಂ ಶಾಫಿ, ಓ.ಡಿ.ಸ್ಟೀಫನ್, ಮನುಕುಮಾರ್, ಕೆ.ಎಸ್. ಚನ್ನಗಿರಿ, ಎಚ್.ಎಸ್.ಕೌಶಿಕ್ ಪಟೇಲ್, ಚನ್ನಕೇಶವ ಬರಗಲ್, ಡಾ.ಪ್ರೀತಮ್, ಕೊಟ್ರೇಶಪ್ಪ, ಲಿಲ್ಲಿ ಪಾಯ್ಸ್ ಮತ್ತಿತರರು ಹಾಜರಿದ್ದರು. ೨೭ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ ಶಾನುವಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್.ಚನ್ನಕೇಶವ್, ಚಂದ್ರಮ್ಮ, ಎಂ.ಜೆ.ಮಹೇಶ್, ಶಬನಾ ಅಂಜುಮ್, ಮನುಕುಮಾರ್, ಮಹಮ್ಮದ್ ಹನೀಫ್ ಇದ್ದರು.೨೭ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ, ಹ್ಯಾಮರ್ ಥ್ರೋ ಚಿನ್ನದ ಪದಕ ವಿಜೇತ ಸಾಲೀಮ್ ಅವರ ಮೆರವಣಿಗೆಗೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು.