ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾವು ಮಾಡುವ ಕೃಷಿ ಪರಿಸರ, ಮಾರುಕಟ್ಟೆ ಸ್ನೇಹಿಯಾಗುವುದರ ಜೊತೆಗೆ ಆರೋಗ್ಯ ಸ್ನೇಹಿಯಾಗಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶ್ರೀ ಹರ್ಷ ಸಮಾಜಸೇವಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ನನ್ನ ಆಹಾರ- ನನ್ನ ಆರೋಗ್ಯ- ನನ್ನ ಜವಾಬ್ದಾರಿ ಕುರಿತ ಚಿಂತನ- ಮಂಥನ, ಸಂವಾದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನೀರನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿರುವುದರಿಂದ ಮಣ್ಣು ಬರಡಾಗುತ್ತಿದೆ. ನೀರಿನ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಕ್ಯಾನ್ಸರ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೂಡಲೇ ಎಲ್ಲರೂ ಜಾಗೃತರಾಗಿ ಮಣ್ಣಿನ ಆರೋಗ್ಯ ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ನೀರಿದ್ದರೂ ಕೃಷಿಯಲ್ಲಿ ಅದನ್ನು ಬಳಕೆ ಮಾಡುವ ರೀತಿ ಗೊತ್ತಿಲ್ಲ. ಮಣ್ಣನ್ನು ಸಾಯಿಸಿದರೆ ಸಮಾಜವೂ ಇರುವುದಿಲ್ಲ. ಜನರೂ ಇರುವುದಿಲ್ಲ. ಮಣ್ಣಿನ ಆರೋಗ್ಯವನ್ನು ಯಾರೂ ನಿರ್ಲಕ್ಷಿಸಬಾರದು. ರಾಸಾಯನಿಕ ಗೊಬ್ಬರವನ್ನು ಕೈಬಿಟ್ಟು ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ, ಗೋ- ಮೂತ್ರ, ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸುವುದರಿಂದ ಸತ್ವ ಕಳೆದುಕೊಂಡಿರುವ ಮಣ್ಣಿಗೆ ಪುನಶ್ಚೇತನ ತುಂಬಬಹುದು ಎಂದು ತಿಳಿಸಿದರು.
ಮಗನ ಹೆಸರಿನಲ್ಲಿ ಕಾರಸವಾಡಿ ಮಹದೇವು ದಂಪತಿ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಪೋಷಕರಿಗೆ ಶಕ್ತಿಯುತ ಉದಾಹರಣೆ. ವಂಶೋದ್ಧಾರಕನನ್ನು ಕಳೆದುಕೊಂಡರೆ ಹಲವರು ಮನೆಯಿಂದ ಹೊರಬರುವುದೇ ಇಲ್ಲ. ಮಹದೇವು ಅವರಿಗೆ ಸಮಾಜದ ಹಿನ್ನೆಲೆ, ಒಡನಾಟ, ವಿಶೇಷ ಕಾಳಜಿ ಇದ್ದುದರಿಂದ ನಮ್ಮ ಜೀವನ ಈಗ ಶುರುವಾಗಿದೆ ಎಂಬ ಅಭಿಲಾಷೆಯಿಂದ ಒಳ್ಳೆಯ ಕಾರ್ಯಗಳಿಗೆ ಆತ್ಮದ ವೇದಿಕೆ ಮಾಡಿಕೊಂಡಿದ್ದಾರೆ ಎಂದು ಬಣ್ಣಿಸಿದರು.ಒಳ್ಳೆಯ ಕೆಲಸಕ್ಕೆ ಮಗನ ಹೆಸರನ್ನು ಉಪಯೋಗಿಸಿಕೊಳ್ಳುತ್ತಿರುವುದು ಸಮಾಜಕ್ಕೆ ಒಂದು ಮಾದರಿ. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು, ಭಾವನೆಗಳನ್ನು ಇಟ್ಟುಕೊಂಡರೆ ಸಮಾಜಕ್ಕೆ ಪೂರಕ ಪ್ರತಿಫಲ ಸಿಗುತ್ತದೆ. ಮನಸ್ಸನ್ನು ಗಟ್ಟಿ ಮಾಡಿಕೊಂಡು ನೋವನ್ನು ನುಂಗಿ ಸಮಾಜಸೇವೆಯಲ್ಲಿ ತೊಡಗುವ ಮೂಲಕ ಇತರರಿಗೆ ಆದರ್ಶವಾಗಬೇಕು ಎಂದರು.
ರೈತ ಮುಖಂಡರಾದ ಸುನಂದಾ ಜಯರಾಂ ಮಾತನಾಡಿ, ಕೃಷಿಗೆ ಮಾರುಕಟ್ಟೆ ವ್ಯವಸ್ಥೆ, ಬೆಲೆ ನಿಗದಿಯಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ತೋಟಗಾರಿಕೆ ಮತ್ತು ಹೈನುಗಾರಿಕೆ ರೈತರನ್ನು ಬದುಕಿಸಿವೆ. ಅದಿಲ್ಲದಿದ್ದರೆ ಬದುಕಲು ಸಾಧ್ಯವೇ ಇರುತ್ತಿರಲಿಲ್ಲ. ಸಾವಯವ ಕೃಷಿಗೆ ಮಹತ್ವ ನೀಡುವುದರ ಜೊತೆಗೆ ಮಾರುಕಟ್ಟೆ, ಬೆಲೆ ನಿಗದಿಗೆ ಸರ್ಕಾರ ಮಟ್ಟದ ಅಧಿಕಾರಿಗಳು ಮುತುವರ್ಜಿ ವಹಿಸಿ ರೈತರನ್ನು ಬದುಕಿಸಬೇಕು. ಕೃಷಿಯನ್ನು ಆದ್ಯತಾ ವಲಯವಾಗಿ ಘೋಷಿಸುವಂತೆ ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಭೂಮಿತಾಯಿಗೆ ವಿಷ ಉಣಿಸದೆ ಕೃಷಿ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಹಿರಿಯ- ಕಿರಿಯ ರೈತರು, ಸಂಘಟಕರು, ಸಂಸ್ಥೆಗಳಿಗೆ ಶ್ರೀ ಹರ್ಷ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದವರಿಗೆ ಅಭಿನಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ಪ್ರದರ್ಶನಗೊಂಡಿತು.
ವೇದಿಕೆಯಲ್ಲಿ ಮಳವಳ್ಳಿ ತಾಲೂಕಿನ ಬಿ.ಜಿ. ಪುರದ ಶ್ರೀ ಮಂಟೇಸ್ವಾಮಿ ಮಠದ ಮಠಾಧಿಕಾರಿ ಭರತ್ ಅರಸ್, ಬೆಂಗಳೂರು ಕೃಷಿ ಇಲಾಖೆ ವಿಶೇಷ ಅಧಿಕಾರಿ ಡಾ.ಎ.ಬಿ.ಪಟೇಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಮಂಕುತಿಮ್ಮ ಟ್ರಸ್ಟಿನ ಅಧ್ಯಕ್ಷ ಎಂ.ವಿನಯ್‌ಕುಮಾರ್, ಎಂ.ಶ್ರೀನಿವಾಸ್ ಪ್ರತಿಷ್ಠಾನದ ಡಿ.ದೇವರಾಜು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ಫೇವಾರ್ಡ್‌ನ ರಾಜ್ಯಾಧ್ಯಕ್ಷ ಮಹೇಶ್‌ಚಂದ್ರ ಗುರು, ಲಯನ್ ಚಿಕ್ಕಸ್ವಾಮಿ, ಅಲಯನ್ಸ್ ಗೌರವಾಧ್ಯಕ್ಷ ಕೆ.ಟಿ. ಹನುಮಂತು, ಮುಖಂಡರಾದ ಪ್ರಕಾಶ್, ಮಧು ಚಿಕ್ಕೇಗೌಡ, ಕಾಂತರಾಜು, ಮಹೇಶ್‌ಕುಮಾರ್, ರಾಮಚಂದ್ರು, ಚಂದ್ರು, ರಘು, ಡಿ. ಮುನಿರಾಜು ಹಾಗೂ ಡಿ.ಎಸ್.ಶಿವರಾಜು ಹಾಜರಿದ್ದರು.;Resize=(128,128))
;Resize=(128,128))