ಆಯುರ್ವೇದ ಚಿಕಿತ್ಸಾ ಪದ್ಧತಿ ಇನ್ನಷ್ಟು ಬಲಗೊಳ್ಳಲಿ: ಗಣಪತಿ ಉಳ್ವೇಕರ್

| Published : Sep 25 2025, 01:02 AM IST

ಸಾರಾಂಶ

ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಸಿ ಅದರ ಮಹತ್ವ ಅರ್ಥ ಮಾಡಿಕೊಂಡು ಬದುಕಿನ ಭಾಗವಾಗಿ ಜೋಡಿಸಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಸಿ ಅದರ ಮಹತ್ವ ಅರ್ಥ ಮಾಡಿಕೊಂಡು ಬದುಕಿನ ಭಾಗವಾಗಿ ಜೋಡಿಸಿಕೊಳ್ಳಬೇಕಿದೆ ಎಂದು ವಿಧಾನಪರಿಷತ್‌ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು.

ಮಂಗಳವಾರ ಸರ್ಕಾರಿ ನೌಕರರ ಭವನದಲ್ಲಿ ಜನತೆಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಆರ್ಯುವೇದ ಗಿಡಮೂಲಿಕೆ ಸಸಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದವು ದೇಹ, ಮನಸ್ಸು ಆತ್ಮದ ನಡುವಿನ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅನೇಕ ಕಾಯಿಲೆಗಳಿಗೆ ರಾಸಾಯನಿಕ ಔಷಧಿಗಳಿಗಿಂತ ಪ್ರಕೃತಿಯಲ್ಲಿ ಸಿಗುವಂತ ಆರ್ಯವೇದ ಚಿಕಿತ್ಸೆಯ ಮೂಲಕ ದೇಹ ಮತ್ತು ಶರೀರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದ್ದು, ಇದನ್ನು ಇನ್ನಷ್ಷು ಬಲಪಡಿಸಬೇಕಾಗಿದೆ ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ ಮಾತನಾಡಿ, ಪ್ರಸ್ತುತ ಇಡೀ ಜಗತ್ತಿನಲ್ಲಿ ಆಯುರ್ವೇದ ಚಿಕಿತ್ಸೆ ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಹಿರಿಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ, ಸ್ವಾಸ್ಥ್ಯಕ್ಕೆ ಸಣ್ಣ ಹೆಜ್ಜೆಗಳು, ಆಯುರ್ವೇದ ಜಾಗೃತಿ ಕುರಿತು ಉಪನ್ಯಾಸ ನೀಡಿ, ರೋಗಿಗಳಿಗೆ ರೋಗ ಗುಣಪಡಿಸುವುದಕ್ಕಿಂತ ರೋಗ ರಹಿತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಯೋಗ ಮತ್ತು ಆಯುರ್ವೇದವನ್ನು ಇಂದು ಜಗತ್ತಿಗೆ ವಿಸ್ತರಿಸಲಾಗಿದೆ. ತಂದೆ- ತಾಯಿಗಳು ಆರೋಗ್ಯವಂತರಾಗಿದ್ದರೆ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಬಹುದು. ದುಶ್ಚಟಗಳನ್ನು ರೂಡಿಸಿಕೊಳ್ಳದೆ, ಮನೆಯ ಆಹಾರವನ್ನೇ ಹೆಚ್ಚು ಬಳಸಬೇಕು ಎಂದರು.

ಆಯುರ್ವೇದ ತಜ್ಞ ವೈದ್ಯ ಡಾ. ಎಂ.ಎಸ್. ಅವಧಾನಿ ಆರ್ಯುವೇದದ ಕುರಿತು ಉಪನ್ಯಾಸ ನೀಡಿ, ಆಯುರ್ವೇದ ಕೇವಲ ಮನುಷ್ಯರಿಗೆ ಸಿಮಿತವಲ್ಲ ಸಮಸ್ತ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಂಬಂಧಿಸಿದೆ. ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಪ್ರವೀಣ ಜಿ.ಎನ್. ಸ್ವಾಗತಿಸಿದರು, ಡಾ. ಸಂಜೀವ್ ಗಲಗಲಿ ಪ್ರಾಸ್ತಾವಿಕ ಮಾತನಾಡಿದರು. ಎಇಓ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜಿವ್ ಕುಮಾರ್ ನಾಯ್ಕ ಇದ್ದರು.