ಕೃಷಿಮೇಳದ ಪ್ರಯೋಜನ ರೈತರಿಗೆ ಸಿಗುವಂತಾಗಲಿ: ಗಂಗಣ್ಣ ಎಲಿ

| Published : Sep 14 2025, 01:04 AM IST

ಸಾರಾಂಶ

ಧಾರವಾಡದಲ್ಲಿ 2 ದಿನಗಳ ಕಾಲ ನಡೆಯಲಿರುವ ಕೃಷಿ ಮೇಳಕ್ಕೆ ತೆರಳುತ್ತಿರುವ ರೈತರಿಗೆ ಬ್ಯಾಡಗಿ ಪಟ್ಟಣದ ಸಹಾಯಕ ನಿರ್ದೇಶಕರ ಕಚೇರಿಯೆದುರು ಶುಭ ಕೋರಿ ಬೀಳ್ಕೊಡಲಾಯಿತು.

ಬ್ಯಾಡಗಿ: ಕೃಷಿಮೇಳ ಜಾತ್ರೆಯಲ್ಲ, ಅಲ್ಲಿ ಸೇರಿರುವಂತಹ ರೈತರ ಸಂಖ್ಯೆಯನ್ನು ನೋಡಿ ಅದರ ಸಾರ್ಥಕತೆ ಗುರ್ತಿಸುವ ಕೆಲಸವಾಗಬಾರದು ಎಂದು ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕೃಷಿಕ ಸಮಾಜದ ಸದಸ್ಯ ಗಂಗಣ್ಣ ಎಲಿ ಹೇಳಿದರು.

ಧಾರವಾಡದಲ್ಲಿ 2 ದಿನಗಳ ಕಾಲ ನಡೆಯಲಿರುವ ಕೃಷಿ ಮೇಳಕ್ಕೆ ತೆರಳುತ್ತಿರುವ ರೈತರಿಗೆ ಪಟ್ಟಣದ ಸಹಾಯಕ ನಿರ್ದೇಶಕರ ಕಚೇರಿಯೆದುರು ಶುಭ ಕೋರಿ ಅವರು ಮಾತನಾಡಿದರು. ಕೋಟಿಗಟ್ಟಲೇ ಹಣ ವ್ಯಯಿಸಿ ಸರ್ಕಾರ ಆಯೋಜಿಸಿದ ಕಾರ್ಯಕ್ರಮವೊಂದು ಎಷ್ಟು ರೈತರಿಗೆ ಪ್ರಯೋಜನವಾಯಿತು ಎಂಬ ವಾಸ್ತವ ಸಂಗತಿ ಎಲ್ಲರಿಗೂ ಗೊತ್ತಾಗಬೇಕಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೃಷಿ ಮೇಳಗಳು ಮೂಲ ಅರ್ಥ ಕಳೆದುಕೊಳ್ಳುತ್ತಿದ್ದು, ರಾಜಕೀಯದ ತೆವಲು ತೀರಿಸಿಕೊಳ್ಳುವ ಉತ್ಸವವಾಗಿದೆ. ಅಲ್ಲದೇ ಅವು ವಾಣಿಜ್ಯ ಮೇಳಗಳಾಗಿ ಪರಿವರ್ತನೆಗಳಾಗುತ್ತಿವೆ ಎಂಬ ಆರೋಪಗಳಿವೆ. ಅವೆಲ್ಲವುಗಳ ನಡುವೆ ರೈತರಿಗಾಗಿ ಆಯೋಜಿಸಲಾದ ಬಹುದೊಡ್ಡ ಸಮ್ಮೇಳನ ಅಥವಾ ಸಮಾವೇಶಗಳು ಅರ್ಥಪೂರ್ಣವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ರೈತರು, ಕೃಷಿ ತಜ್ಞರು, ನೀತಿ ನಿರೂಪಕರು ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಕೃಷಿಕ ಸಮಾಜದ ಮಂಜುನಾಥ ಬೆನಕನಕೊಂಡ ಮಾತನಾಡಿ, ಕೃಷಿಮೇಳಗಳಲ್ಲಿ ಆಧುನಿಕ ಕೃಷಿ ಪದ್ಧತಿಗೆ ರೈತರನ್ನು ಕೊಂಡೊಯ್ಯುವ ಒಂದು ಪ್ರಯತ್ನ ನಡೆಯುತ್ತಿದೆ. ಆದರೆ ಸಾಂಪ್ರದಾಯಿತ ಕೃಷಿಯಲ್ಲಿಯೂ ಲಾಭದಾಯಕ ಕೃಷಿ ನಡೆಸಬಹದು ಎನ್ನುವ ವಿಷಯಗಳ ಕೊರತೆ ಎದ್ದು ಕಾಣುತ್ತಿದೆ. ಕೃಷಿಯಲ್ಲಿ ತಾಂತ್ರಿಕತೆ ಬೇಕು. ಆದರೆ ಹೊಸ ಕೃಷಿ ತಂತ್ರಜ್ಞಾನಗಳು ಆಧುನಿಕ ನೀರಾವರಿ, ಯಾಂತ್ರೀಕರಣ ಅಥವಾ ಡಿಜಿಟಲ್ ಪರಿಕರಗಳನ್ನು ಒತ್ತಾಯಪೂರ್ವಕವಾಗಿ ಹೇರುವಂತಹ ಪ್ರಯತ್ನ ಕೃಷಿ ಮೇಳಗಳಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಶೇ. 90ರಷ್ಟು ರೈತರು ಕೂಲಿ ಕಾರ್ಮಿಕರ ಸಮಸ್ಯೆ, ನಕಲಿ ಬೀಜಗಳ ಹಾವಳಿ, ಮಣ್ಣಿನ ಗುಣಕ್ಕೆ ತಕ್ಕಂತೆ ಸುಧಾರಿತ ತಳಿಯ ಬೀಜ, ಬೆಳೆದಂತಹ ಬೆಳೆಗೆ ಸಮರ್ಪಕ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ಇತ್ಯಾದಿ ಸಮಸ್ಯೆಗಳನ್ನು ಸಾಮಾನ್ಯವಾಗಿ ಅನುಭವಿಸುತ್ತಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದರು.

ಕೃಷಿಕರಾದ ಮಂಜು ಕಾಡಮ್ಮನವರ, ಶಿವನಗೌಡ ಪಾಟೀಲ, ಬಸವರಾಜ ಭಾಗಮ್ಮನವರ, ಭರಮಪ್ಪ ಗಾಜೇರ, ರಾಜು ಬಟ್ಟಲಕಟ್ಟಿ, ರುದ್ರಪ್ಪ ಅಂಗಡಿ, ನಿಂಗಪ್ಪ ಕಾಕೋಳ ನಾಗರಾಜ ಬನ್ನಿಹಟ್ಟಿ ಉಪಸ್ಥಿತರಿದ್ದರು.