ವಿದ್ಯಾರ್ಥಿಗಳು ಮುಂದಿನ ಜೀವನ ರೂಪಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ಘಟಕವನ್ನು ರಾಜ್ಯದ ಎಲ್ಲ ಜಿಲ್ಲೆಯ ಡಯಟ್‌ಗಳಲ್ಲಿ ತೆರೆಯುವ ಸರ್ಕಾರ ಆದೇಶ ನೀಡಿದ್ದು, ಅದರರನ್ವಯ ಗದುಗಿನಲ್ಲಿಯೂ ಘಟಕವನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ.
ಗದಗ: ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗಕ್ಕಾಗಿ ಓದುವುದು ಅವಶ್ಯವಾಗಿದೆ. ವೃತ್ತಿ ಮಾರ್ಗದರ್ಶನ ಪಡೆದಿರುವ ವ್ಯಕ್ತಿಗೆ ಈ ದಾರಿ ಸುಗಮಗೊಳ್ಳುವುದು. ಅಂತಹ ಸುಂದರ ಭವಿಷ್ಯವನ್ನು ಸುಗಮಗೊಳಿಸಲು ಕೆರಿಯರ್ ಮೇಳ ಪೂರಕವಾಗಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.
ಶುಕ್ರವಾರ ಡಯಟ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೆರಿಯರ್ ಮೇಳ- 2026 ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಮುಂದಿನ ಜೀವನ ರೂಪಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ಘಟಕವನ್ನು ರಾಜ್ಯದ ಎಲ್ಲ ಜಿಲ್ಲೆಯ ಡಯಟ್‌ಗಳಲ್ಲಿ ತೆರೆಯುವ ಸರ್ಕಾರ ಆದೇಶ ನೀಡಿದ್ದು, ಅದರರನ್ವಯ ಗದುಗಿನಲ್ಲಿಯೂ ಘಟಕವನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಘಟಕದಲ್ಲಿರುವ ವಿಷಯ ತಜ್ಞರೊಂದಿಗೆ ಸಮಾಲೋಚಿಸಿ ಮಾರ್ಗದರ್ಶನ ಪಡೆದುಕೊಳ್ಳಬೇಕು. ಜತೆಗೆ ವೃತ್ತಿ ಮಾರ್ಗದರ್ಶನಕ್ಕೆ ಪೂರಕವಾದ ಅತ್ಯಮೂಲ್ಯ ಗ್ರಂಥಗಳು, ಉನ್ನತ ಕೋರ್ಸಗಳ ವ್ಯಾಸಂಗಕ್ಕೆ ಅಗತ್ಯ ಪುಸ್ತಕಗಳಿದ್ದು, ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಕಂಪ್ಯೂಟರ್ ಇಂಟರ್‌ನೆಟ್ ಸೌಲಭ್ಯವೂ ಇದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.ವಿದೇಶಗಳಲ್ಲಿ ವ್ಯಾಸಂಗ ಮಾಡುವುದಕ್ಕೂ ಭಾರತದಲ್ಲಿ ಮಾಡುವುದಕ್ಕೂ ಇಂದಿನ ದಿನಗಳಲ್ಲಿ ಬಹಳ ವ್ಯತ್ಯಾಸವಿಲ್ಲ. ವಿದೇಶಗಳಲ್ಲಿ ದೊರಕುವ ಎಲ್ಲ ರೀತಿಯ ಸಂಪನ್ಮೂಲಗಳು, ವಿಷಯ ತಜ್ಞರು ಭಾರತದಲ್ಲಿಯೂ ಇದ್ದು, ಕಲಿಕಾ ಸಾಮಗ್ರಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಾಧಿಸಬೇಕೆಂಬ ಛಲದೊಂದಿಗೆ ಉನ್ನತ ಅಧ್ಯಯನ, ಉನ್ನತ ಸಾಧನೆ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ(ಅಭಿವೃದ್ಧಿ) ಹಾಗೂ ಪ್ರಾಂಶುಪಾಲ ಜಿ.ಎಂ. ಮುಂದಿನಮನಿ, ವಿದ್ಯಾರ್ಥಿಗಳು ವೃತ್ತಿ ಬಗ್ಗೆ ಅರಿತುಕೊಳ್ಳಲು ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಕೆರಿಯರ್ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಜಿಲ್ಲೆಯ 865 ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಂಡು ಮಾಹಿತಿಯನ್ನು ಪಡೆದಿದ್ದು, ಈ ಮಾಹಿತಿ ಅವರ ಭವಿಷ್ಯವನ್ನು ರೂಪಿಸುವಂತಾಗಲಿ ಎಂದರು.ಹಾವೇರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ.ಎಂ. ಬೇವಿನಮರದ ಅವರು, ಎಸ್ಎಸ್ಎಲ್‌ಸಿ/ ಪಿಯುಸಿ ನಂತರ ವೃತ್ತಿ ಅವಕಾಶಗಳು ಕುರಿತು ಉಪನ್ಯಾಸ ನೀಡಿದರು. ಇಗ್ನೋದ ವಿಶ್ರಾಂತ ಪ್ರಾದೇಶಿಕ ನಿರ್ದೇಶಕ ಡಾ. ಜಿ.ಎಚ್. ಇಮ್ರಾಪೂರ ಸಿಇಟಿ, ಎನ್‌ಇಇಟಿ, ಜೆಇಇ, ಎನ್‌ಡಿಎ, ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಪರೀಕ್ಷೆ ಎದುರಿಸುವ ಬಗೆಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಗದಗ ಗ್ರಾಮೀಣ ಬಿಇಒ ವಿ.ವಿ. ನಡುವಿನಮನಿ, ಡಯಟ್ ಉಪನ್ಯಾಸಕ ಬಿ.ಎಫ್. ಅರವಟಗಿ, ಕೆ.ವೈ. ವಿಭೂತಿ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ, ಅಧೀಕ್ಷಕಿ ಶೈಲಜಾ ತಟ್ಟಿ ಉಪಸ್ಥಿತರಿದ್ದರು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಉಪನ್ಯಾಸಕ ಎಚ್.ಬಿ. ರಡ್ಡೇರ ಸ್ವಾಗತಿಸಿದರು. ಯಲ್ಲಪ್ಪ ಹಂದ್ರಾಳ ನಿರೂಪಿಸಿ ಜಿ.ಡಿ. ದಾಸರ ವಂದಿಸಿದರು. ಉಪನ್ಯಾಸಕಿ ಕೆ.ಎಸ್. ಹೂಲಗೇರಿ, ಸುಧಾ ಬನಿಕಲ್, ಅಧೀಕ್ಷಕ ಪ್ರಶಾಂತ ಸರ್ವಂದ, ಎಸ್.ಆರ್. ನದಾಫ ಮುಂತಾದವರಿದ್ದರು. ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರಿಂದ ಚಿತ್ರ ಪ್ರದರ್ಶನ, ವಿವಿಧ ಇಲಾಖೆ ಯೋಜನೆಗಳ ಕುರಿತು ಹಾಗೂ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ಗಣಿತ ಪ್ರಯೋಗಳ ಮಳಿಗೆ ಜನಮನ ಸೆಳೆದವು.