ಕರ್ನಾಟಕ ಏಕೀಕರಣಗೊಂಡ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂಭ್ರಮವು ನವೆಂಬರ್ ಮಾಹೆಗೆ ಮಾತ್ರ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಕರ್ನಾಟಕ ಏಕೀಕರಣಗೊಂಡ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂಭ್ರಮವು ನವೆಂಬರ್ ಮಾಹೆಗೆ ಮಾತ್ರ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು

ಸಾವಿರಾರು ವರ್ಷದಿಂದ ಬೇರೆ-ಬೇರೆ ಸಂಸ್ಥಾನಗಳಲ್ಲಿ ಹರಿದು-ಹಂಚಿ ಹೋಗಿದ್ದ, ಬ್ರಿಟೀಷರ ಆಳ್ವಿಕೆಯಲ್ಲೂ ಸಹ ಒಂದುಗೂಡಿ ಬದುಕಲು ಸಾಧ್ಯವಾಗದೇ ಇದ್ದ ಕನ್ನಡ ನಾಡನ್ನು ಒಂದುಗೂಡಿಸಬೇಕೆಂಬ ಕನ್ನಡಿಗರ ಆಶಯ ಪ್ರಯತ್ನವಾಗಿಯೇ ಉಳಿದಿತ್ತು. ಕನ್ನಡಿಗರನ್ನು ಒಂದುಗೂಡಿಸುವ ಭಾವನೆಗೆ ಮಣಿದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚನೆ ಮಾಡಲು ಒಲವು ತೋರಿದ ಹಿನ್ನೆಲೆಯಲ್ಲಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ನಿರ್ಮಾಣವಾಯಿತು. ಸಾವಿರಾರು ವರ್ಷಗಳ ಕನ್ನಡಿಗರು ಒಂದುಗೂಡುವ ಕನಸು ಈಡೇರಿತು. ಈ ದಿನವನ್ನು ನಾವಿಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಸಂಭ್ರಮಕ್ಕೆ ಕಾರಣರಾದ ಎಲ್ಲಾ ಶ್ರಮಿಕರನ್ನು ನಾವಿಂದು ಸ್ಮರಿಸಬೇಕು ಎಂದು ತಿಳಿಸಿದರು. ನಂತರ ವಿಶಾಲ ಮೈಸೂರು ರಾಜ್ಯವನ್ನು 1973ರ ನವೆಂಬರ್ 1ರಂದು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು. ಕಲ್ಪತರು ನಾಡಾದ ಈ ಜಿಲ್ಲೆಯು ರೈತರಿಗೆ ಮಾತ್ರ ಬದುಕು ಕೊಟ್ಟಿಲ್ಲ. ಸಾಹಿತ್ಯ ಲೋಕ, ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದೆ ಎಂದು ಹೇಳಿದರು. ಭಾರತ ಬಹು ಭಾಷಾ ಸಂಸ್ಕೃತಿಯ ಒಕ್ಕೂಟ. ಯಾವುದೇ ಒಂದು ಭಾಷೆ, ಸಂಸ್ಕೃತಿ, ರೀತಿ-ನೀತಿಗೆ ಸೀಮಿತವಾಗಿಲ್ಲ. ಎಲ್ಲಾ ಭಾಷೆ, ಸಂಸ್ಕೃತಿಗೆ ಸಮಾನವಾದ ಗೌರವ ಸಿಗುವಂತಾಗಬೇಕು. ಆಗ ಮಾತ್ರ ಭಾರತದ ಐಕ್ಯತೆ ಸುಭದ್ರವಾಗುತ್ತದೆ. ಯಾವುದೇ ಭಾಷೆ, ಸಂಸ್ಕೃತಿಯನ್ನು ತುಳಿಯುವ ಕೆಲಸ ಮಾಡಿದರೆ ದೇಶದ ಐಕ್ಯತೆಯನ್ನು ಕುಂದಿಸಿದಂತಾಗುತ್ತದೆ ಎಂದು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಭುವನೇಶ್ವರಿ ಚಿತ್ರಪಟಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ವಿವಿಧ ಕ್ಷೇತ್ರದ ಜಿಲ್ಲಾ ಮಟ್ಟದ 71 ಹಾಗೂ ತಾಲೂಕು ಮಟ್ಟದ 24 ಸಾಧಕರನ್ನು ಗಣ್ಯರು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ 7.45 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ವಿವಿಧ ಇಲಾಖೆಗಳ ಸ್ತಬ್ದಚಿತ್ರ ಹಾಗೂ ಜನಪದ ಕಲಾತಂಡದೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಸೀಲ್ದಾರ್ ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು. ಮಿರ್ಜಿ, ವಿವಿಧ ಶಾಲಾ ಮಕ್ಕಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ/ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ನಗರದ ಬಟವಾಡಿಯಲ್ಲಿರುವ ಸೆಂಟ್ ಮೆರೀಸ್ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಕನ್ನಡ ನಾಡಿನ ರನ್ನದ ರತುನ ಕೇಳೋ ಕತೆಯನ್ನ’, ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ‘ದೇಶಕ್ಕೆ ಯೋಧ ನಾಡಿಗೆ ರೈತ’ ಬಿ.ಹೆಚ್. ರಸ್ತೆ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯು ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಹಾಗೂ ವಿಜಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಚ್ಚೇವು ಕನ್ನಡ ದೀಪ ಹಾಡಿನ ನೃತ್ಯ ಪ್ರದರ್ಶನಗಳು ಒಂದಕ್ಕಿಂತ ಒಂದು ಎಲ್ಲರ ಗಮನ ಸೆಳೆದವು. ಅಪ್ರತಿಮ ಇತಿಹಾಸ ಹೊಂದಿರುವ ನಮ್ಮ ಹೆಮ್ಮೆಯ ನೃತ್ಯ ರೂಪಕದಲ್ಲಿ ಕನ್ನಡ ನಾಡಿನ ಹಿರಿಮೆ-ಗರಿಮೆಗಳನ್ನು ಸಾರುವ ಜೊತೆಗೆ ಕರುನಾಡಿನ ಸಾಹಿತಿ, ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸ್ಮರಿಸಲಾಯಿತು.

ಪಥಸಂಚಲನ: ಬಹುಮಾನ ವಿತರಣೆ

ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಪೊಲೀಸ್ ವಿಭಾಗದಲ್ಲಿ 12ನೇ ಪಡೆ ಕೆಎಸ್‌ಆರ್‌ಪಿ ರಾಜ್ಯ ಮೀಸಲು ಪೊಲೀಸ್ ತಂಡಕ್ಕೆ ಪ್ರಥಮ ಹಾಗೂ ಡಿಎಆರ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು. ಎನ್‌ಸಿಸಿ ವಿಭಾಗದಲ್ಲಿ ಸರ್ವೋದಯ ಕಾಲೇಜಿನ ಬಾಲಕರ ತಂಡ ಹಾಗೂ ಸಿದ್ಧಗಂಗಾ ಕಾಲೇಜಿನ ಬಾಲಕರ ತಂಡಕ್ಕೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಕೊಡಮಾಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಆರ್ಯನ್ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸೇವಾ ದಳ ವಿಭಾಗದಲ್ಲಿ ಕನ್ನಿಕಾ ಆಂಗ್ಲಶಾಲೆ ಹಾಗೂ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಕ್ರಮವಾಗಿ ಮೊದಲ ಹಾಗೂ ಎರಡನೇ ಬಹುಮಾನವನ್ನು ವಿತರಿಸಲಾಯಿತು.