ಮಡಿವಾಳ ಸಮಾಜದ ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ಇಂದಿನ ದೊಡ್ಡ ಸವಾಲಾಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಡಿವಾಳ ಸಮಾಜದ ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ಇಂದಿನ ದೊಡ್ಡ ಸವಾಲಾಗಿದೆ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಡಾ. ಬಸವ ಮಾಚಿದೇವ ಶ್ರೀಗಳು ಹೇಳಿದರು.

ಅವರು ಭಾನುವಾರ ಇಲ್ಲಿನ ಮಡಿವಾಳ ನಗರದಲ್ಲಿರುವ ಮಡಿವಾಳ ಮಾಚಿದೇವರ ದೇವಸ್ಥಾನ ಸಮಿತಿ, ದಿ. ಹುಬ್ಬಳ್ಳಿ ಮಡಿವಾಳ ಕೋ ಆಪ್‌ ಕ್ರೆಡಿಟ್‌ ಸೊಸಾಯಿಟಿಯ 9ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಸೊಸಾಯಿಟಿಯ 79ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಡಿವಾಳ ಸಮುದಾಯವು ಕಾಯಕವನ್ನು ನಂಬಿ ಬದುಕುತ್ತಿರುವ, ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ದುಡಿಯುವ ಶ್ರಮಜೀವಿಗಳ ಸಮುದಾಯವಾಗಿದೆ. ಹಿಂದಿನ ಪೀಳಿಗೆಯವರು ಅನುಭವಿಸಿದ ಕಷ್ಟ ಹಾಗೂ ಶ್ರಮ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬಾರದು. ಮಕ್ಕಳು ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಪಾರಂಪರಿಕ ಕಾಯಕಕ್ಕೆ ಮಾತ್ರ ಸೀಮಿತವಾಗದೆ ಹೊಸ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಮಡಿವಾಳ ಮಾಚಿದೇವರು ಕೇವಲ ಬಟ್ಟೆ ತೊಳೆಯುವ ಕಾಯಕ ಮಾಡಿರಲಿಲ್ಲ. ಭಕ್ತರ ಮನಸ್ಸಿನಲ್ಲಿದ್ದ ಕೊಳೆಯನ್ನು ತೊಳೆದು, ಧರ್ಮಕ್ಕೆ ಕುಂದು ಬಂದಾಗ ಗಣಾಚಾರ ಪ್ರವೃತ್ತಿಯಿಂದ ಹೋರಾಡಿದ ಶ್ರೇಷ್ಠ ಶಿವಶರಣರಾಗಿದ್ದರು. ವಚನ ಸಾಹಿತ್ಯ ಹಾಗೂ ಶರಣರ ತತ್ವ ಸಿದ್ಧಾಂತಗಳ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಮಹತ್ವದ್ದಾಗಿದೆ ಎಂದರು.

ವಿಪ ಸದಸ್ಯ ರಘು ಕೌಟಿಲ್ಯ ಮಾತನಾಡಿ, ಮಡಿವಾಳ ಸೇರಿದಂತೆ ಹಿಂದುಳಿದ ಹಾಗೂ ಸಾಮಾಜಿಕ ನ್ಯಾಯದಿಂದ ವಂಚಿತ ಸಮುದಾಯಗಳ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕಾರ್ಯವಾಗಬೇಕಿದೆ. ಹಿಂದುಳಿದ ಸಮುದಾಯಗಳ ಸಂಘಟನೆಗಳು ಕೇವಲ ಜಯಂತಿ ಆಚರಣೆ ಹಾಗೂ ಸಮುದಾಯ ಭವನ, ದೇವಸ್ಥಾನ ನಿರ್ಮಾಣದಂತಹ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಸಮುದಾಯದ ನೈಜ ಸಮಸ್ಯೆಗಳ ಕುರಿತು ವ್ಯವಸ್ಥಿತವಾಗಿ ಹೋರಾಟ ನಡೆಸಬೇಕು ಎಂದರು.

ಮಡಿವಾಳ ಸಮುದಾಯದ ಸಂಘಟನೆಗಳು ಗ್ರಾಮೀಣ ಭಾಗದಲ್ಲಿರುವ ಸಮುದಾಯದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಬೇಕು. ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಹಳ್ಳಿಗಳಲ್ಲಿರುವ ಮಡಿವಾಳರ ಸಮಸ್ಯೆಗಳನ್ನೂ ಅರಿತುಕೊಂಡು ಸಂಘಟಿತ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ಡಾ. ಬಸವ ಮಾಚಿದೇವ ಶ್ರೀಗಳಿಗೆ ವಾದ್ಯಮೇಳ, ಕುಂಭಮೇಳ, ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ ಕೋರವಾಯಿತು. ಬಳಿಕ ದೇವಸ್ಥಾನದಲ್ಲಿ ಗಣಹೋಮ, ಮೃತ್ಯುಂಜಯ ಶಾಂತಿ. ಹವನ, ನವಗ್ರಹ ಶಾಂತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ ಪಾಟೀಲ, ಜೆಡಿಎಸ್‌ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಗಣೇಶ ಮಡಿವಾಳರ, ಅಧ್ಯಕ್ಷ ಸಂದೀಪ ಹುಣಚಿ, ಕಾರ್ಯಾಧ್ಯಕ್ಷ ಸತೀಶ ಕೌತಾಳ ಸೇರಿದಂತೆ ಹಲವರಿದ್ದರು.