ಸಾರಾಂಶ
- ಕೊಟ್ರಪ್ಪ ಬಡಾವಣೆಯಲ್ಲಿ ಸವಿತಾ ಸಮಾಜದ ಸಮುದಾಯ ಭವನಕ್ಕೆ ಶಿಲಾನ್ಯಾಸ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸವಿತಾ ಸಮಾಜದಿಂದ ನಿರ್ಮಿಸಲಾಗುತ್ತಿರುವ ಸಮುದಾಯಭವನದ ಉಪಯೋಗ ಪ್ರತಿಯೊಂದು ಸಮಾಜಕ್ಕೂ ಲಭಿಸು ವಂತಾಗ ಬೇಕು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.ಶುಕ್ರವಾರ ಪಟ್ಟಣದ ವಾರ್ಡ್ ನಂ 4ರ ಕೊಟ್ರಪ್ಪ ಬಡಾವಣೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಾದ ನಿವೇಶನ ದಲ್ಲಿ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸವಿತಾ ಸಮಾಜದ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸವಿತಾ ಸಮಾಜದವರಿಗೆ ಯಾವುದೇ ನಿವೇಶನ ಇಲ್ಲದೆ ಇರುವುದರಿಂದ ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆ ಯಂತೆ ಪಟ್ಟಣ ಪಂಚಾಯಿತಿಯ ಸಿಎ ನಿವೇಶನ ನೀಡಿ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯಿಂದ ₹25 ಲಕ್ಷ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಹೆಚ್ಚಿನ ಅನುದಾನ ಬೇಕಾದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಿಸಿ ಸೂಕ್ತ ನಿರ್ವಹಣೆ ಮಾಡಬೇಕು. ಸವಿತಾ ಸಮಾಜದವರು ನಿರ್ವಹಿಸುವ ವೃತ್ತಿ ಎಲ್ಲಾ ಶುಭಾ ಸಮಾರಂಭಗಳಿಗೂ ಅವಶ್ಯಕ. ನಾನು ಹುಟ್ಟೂರಿನ ಅಭಿಮಾನದಿಂದ ಸಣ್ಣ, ಸಣ್ಣ ಸಮುದಾಯಗಳಿಗೂ ಸ್ಪಂಧಿಸುವ ಕಾರ್ಯಮಾಡಿದ್ದೇನೆ. ಶೀಘ್ರವಾಗಿ ಸಮುದಾಯ ಭವನ ಕಾಮಗಾರಿ ಪೂರ್ಣ ಗೊಳಿಸಿ ಲೋಕಾರ್ಪಣೆ ಮಾಡಬೇಕು ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶೋಷಿತ ಹಾಗೂ ಅಹಿಂದ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಸವಿತಾ ಸಮಾಜದವರು ಕೇಶವಿನ್ಯಾಸ ಮಾಡುವ ವೃತ್ತಿ ಅವಲಂಭಿಸಿರುವ ಶ್ರಮ ಜೀವಿಗಳು. ಈ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಉಚಿತ ನಿವೇಶನ ನೀಡಿ ಸಮುದಾಯಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಇದೇ ರೀತಿ ಭಾವಸಾರಕ್ಷತ್ರಿಯ ಸಮಾಜ, ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘಕ್ಕೂ ಅನುದಾನ ನೀಡಲಾಗಿದೆ. ಈ ಬಡಾವಣೆ ಸಮೀಪ ಪಪಂನಿಂದ ಆಶ್ರಯ ಯೋಜನೆಯಡಿ ನಿವೇಶನ ನೀಡಲು 158 ಫಲಾನುಭವಿಗಳ ಆಯ್ಕೆ ನಡೆದಿದ್ದು ಬಡಾವಣೆ ನಿರ್ಮಾಣಕ್ಕೆ ₹3.71 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಬಡಾವಣೆ ನಿರ್ಮಿಸಿ ನಿವೇಶನಕ್ಕೆ ಸಂಖ್ಯೆ ನೀಡಿ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ದಲ್ಲಿ ನೀಡಿದ ಭರವಸೆಯಂತೆ ಹಿಂದುಳಿದ ವರ್ಗಕ್ಕೆ ಸೇರಿದ ಸವಿತಾ ಸಮಾಜಕ್ಕೆ ಪಪಂನ ಎಲ್ಲಾ ಸದಸ್ಯರ ಸಹಕಾರದಿಂದ ನಿವೇಶನ ನೀಡಿ ಪಕ್ಷದ ನಾಯಕರ ಸಹಕಾರದಿಂದ ಸಚಿವ ಶಿವರಾಜ್ ತಂಗಡಗಿ ಅವರಿಂದ ಸಮುದಾಯ ಭವನಕ್ಕೆ ₹25 ಲಕ್ಷ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸವಿತಾ ಸಮಾಜದ ದೇವಸ್ಥಾನ ಕಾಮಗಾರಿಗೆ ಸಹಕಾರ ನೀಡಲಾಗಿದೆ. ಕಾಂಗ್ರೆಸ್ ಸದಾ ಸವಿತಾ ಸಮಾಜದ ಪರ ನಿಲ್ಲಲಿದೆ ಎಂದರು.ಸವಿತಾ ಸಮಾಜದ ಅಧ್ಯಕ್ಷ ಕುಮಾರ್ ಮಾತನಾಡಿ, ಸಮಾಜದ ಸಮುದಾಯ ಭವನಕ್ಕೆ ಸಹಕಾರ ನೀಡಿದ ಚುನಾಯಿತ ಜನ ಪ್ರತಿನಿಧಿಗಳಿಗೆ ಸಮಾಜ ಸದಾ ಚಿರಋಣಿ ಎಂದರು.
ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು, ಸದಸ್ಯರಾದ ಆರ್. ಕುಮಾರಸ್ವಾಮಿ, ಜುಬೇದಾ, ಮುಕುಂದ, ಸುಬ್ರಹ್ಮಣ್ಯ, ರಜಿ, ಮಾಜಿ ಸದಸ್ಯ ಸುನಿಲ್ ಕುಮಾರ್, ನಾಗಲಾಪುರ ಗ್ರಾಪಂ ಸದಸ್ಯ ಕೆ.ಗಂಗಾಧರ್, ಮುಖಂಡ ಕಾಫಿ ಗಿರೀಶ್ ಇದ್ದರು.