ಪಠ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯಕ್ಕೂ ಸಹಕಾರಿಯಾಗಿರಲಿ: ತೇಜಸ್ವಿ ಕಟ್ಟಿಮನಿ

| Published : Jul 31 2025, 12:46 AM IST

ಪಠ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯಕ್ಕೂ ಸಹಕಾರಿಯಾಗಿರಲಿ: ತೇಜಸ್ವಿ ಕಟ್ಟಿಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಅಗತ್ಯಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಪಠ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ವಿಎಸ್‌ಕೆಯು 16ನೇ ಸಂಸ್ಥಾಪನಾ ದಿನದಲ್ಲಿ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಇಂದಿನ ಅಗತ್ಯಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಪಠ್ಯಕ್ರಮಗಳನ್ನು ರೂಪಿಸಬೇಕಾಗಿದ್ದು, ಪಠ್ಯಕ್ರಮಗಳನ್ನು ರೂಪಿಸುವಾಗ ಹೆಚ್ಚು ಹೆಚ್ಚು ಅಧ್ಯಯನಗಳೂ ನಡೆಯಬೇಕು ಎಂದು ಆಂಧ್ರ ಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ತೇಜಸ್ವಿ ಕಟ್ಟಿಮನಿ ತಿಳಿಸಿದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್‌ಕೆಯು)ದಲ್ಲಿ ಬುಧವಾರ ನಡೆದ 16ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳನ್ನು ಮೀರಿದ ಉತ್ಸಾಹ ಬರಬೇಕಾದರೆ ಶಿಕ್ಷಕರಾದವರು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ನೀಡುವ ಪಠ್ಯ ಭವಿಷ್ಯದಲ್ಲಿ ಉಪಯೋಗವಾಗಲಿದೆ ಎಂದು ಗೊತ್ತಾದಾಗ ಮಾತ್ರ ವಿದ್ಯಾರ್ಥಿಗಳು ಕಲಿಕೆಯ ಆಸಕ್ತಿ ವಹಿಸುತ್ತಾರೆ. ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನ ಮತ್ತು ಔದ್ಯೋಗಿಕ ಭವಿಷ್ಯಕ್ಕೂ ಸಹಕಾರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ದೊರೆಯಬೇಕು. ಹಾಗಂತ ಬೇರೆ ಭಾಷೆಗಳನ್ನು ಕಡೆಗಣಿಸಬೇಕು ಎಂದಲ್ಲ. ಆದರೆ, ಮಾತೃಭಾಷೆಯಲ್ಲಿ ಮಗು ಶಿಕ್ಷಣ ಪಡೆಯುವುದರಿಂದ ಕಲಿಕೆಗೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ಮಗುವಿನ ಕಲಿಕೆಯ ಭಾಷೆ ಯಾವುದಾಗಿರಬೇಕು ಎಂಬುದು ಸಹ ಹೆಚ್ಚು ಮಹತ್ವದ ಸಂಗತಿಯಾಗಲಿದೆಯಲ್ಲದೆ, ಮಾತೃ ಭಾಷೆಯ ಜತೆಗೆ ಇತರ ಭಾಷೆಗಳನ್ನೂ ಕಲಿಯುವುದು ವ್ಯವಹಾರಿಕ ಉದ್ದೇಶದಿಂದ ಮುಖ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಎಐ ತಂತ್ರಜ್ಞಾನ, ಚಾಟ್‌ ಜಿಪಿಟಿಗಳಂಥ ವ್ಯವಸ್ಥೆಗಳು ಬಂದ ಮೇಲೆ ಮೊದಲ ಅಪಾಯ ಎದುರಾಗಿರುವುದು ಶಿಕ್ಷಕರಿಗೆ. ಹೀಗಾಗಿ ಶಿಕ್ಷಕರು ತಮ್ಮನ್ನು ಒರೆಗೆ ಹಚ್ಚುತ್ತಿರಬೇಕು. ಶಿಕ್ಷಕರಾದವರು ಹೆಚ್ಚು ಅಧ್ಯಯನಶೀಲರಾಗಬೇಕು. ಎಐ ತಂತ್ರಜ್ಞಾನದ ಸವಾಲುಗಳನ್ನು ಎದುರಿಸಲು ಪೂರಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಒಂದು ವಿಶ್ವವಿದ್ಯಾಲಯ ಉನ್ನತ ಸ್ಥಾನಕ್ಕೆ ಬರಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಶಿಕ್ಷಕರಿಗೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮತ್ತು ಬದಲಾಯಿಸುವ ಶಕ್ತಿ ಇದೆ. ಇಂದಿನ ಯುವ ಪೀಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿಯಬೇಕಿದೆ. ಕೇವಲ ಅಂಕಗಳಿಗಾಗಿ ಮಾತ್ರ ಶಿಕ್ಷಣ ಸೀಮಿತವಾಗಿರದೇ ನಿಮ್ಮದೇ ಆದ ಕೌಶಲ್ಯಗಳನ್ನು ಬೆಳೆಸಿಕೊಂಡು ಮುಂದೆ ಬರಬೇಕು. ಜಗತ್ತಿನಲ್ಲಿ ಹಲವಾರು ಭಾಷೆಗಳಿವೆ. ಹೆಚ್ಚಿನ ಭಾಷೆ ಮತ್ತು ಕೌಶಲ್ಯಗಳನ್ನು ಕಲಿತುಕೊಂಡು ನಿಮ್ಮ ಜೀವನವನ್ನು ಉನ್ನತವಾಗಿ ರೂಪಿಸಿಕೊಂಡು ಗುರಿ ತಲುಪಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ. ಎಂ.ಮುನಿರಾಜು, ಸಾಕಷ್ಟು ವಿಶ್ವವಿದ್ಯಾನಿಲಯಗಳ ಜೊತೆ ಪೈಪೋಟಿ ನೀಡಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯಕ ಮತ್ತು ವಿದ್ಯಾರ್ಥಿಗಳ ಔಚಿತ್ಯಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ನಮ್ಮ ಶಿಕ್ಷಣ ಮುಂದುವರಿಸಿಕೊಂಡು ವಿದ್ಯಾರ್ಥಿಗಳ ಅರ್ಹತೆಗೆ ಅನುಗುಣವಾಗಿ ಶಿಕ್ಷಣ ನೀಡುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿಗಳಾಗಿವೆ. ಹೊಸ ರೀತಿಯ ಆವಿಷ್ಕಾರಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.

ಬಳ್ಳಾರಿ ವಿಶ್ವವಿದ್ಯಾಲಯವು ಸ್ಥಾಪನೆಗೊಂಡು 16ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ವಿಷಯವಾಗಿದ್ದು, ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯರ ಸ್ಮರಣೀಯವಾಗಿ ಈ ವಿವಿ ಯನ್ನು ಸ್ಥಾಪಿಸಲಾಯಿತು. ಮುಂದಿನ ದಿನಗಳಲ್ಲಿ ಈ ವಿಶ್ವವಿದ್ಯಾಲಯವು ಅತ್ಯುತ್ತಮ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಸ್ತುತ ವಿವಿಯಲ್ಲಿ 29 ವಿಭಾಗಗಳಿದ್ದು, ಮುಂದಿನ ದಿನಗಳಲ್ಲಿ 45 ವಿಭಾಗಗಳನ್ನು ಮಾಡುವ ಗುರಿ ಹಾಗೂ ಕೌಶಲ್ಯಧಾರಿತ ಪಠ್ಯಕ್ರಮವನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರೊ. ಶಾಂತಾನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ (ಆಡಳಿತ) ನಾಗರಾಜು ಸಿ. ಸ್ವಾಗತಿಸಿದರು.

ಸಮಾರಂಭ ಆರಂಭಕ್ಕೂ ಮುನ್ನ ಮತ್ತು ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಪ್ಪಗೆರೆ ತಿಮ್ಮರಾಜು ಅವರ ಜಾನಪದ ಗಾಯನ ನೆರೆದಿದ್ದವರ ಮನಸೂರೆಗೊಳಿಸಿತು.

ಕುಲಸಚಿವ ಎನ್‌.ಎಂ. ಸಾಲಿ, ಹಣಕಾಸು ಅಧಿಕಾರಿ ನಾಗರಾಜ, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಸಿಂಡಿಕೇಟ್‌ ಸದಸ್ಯರು, ಬೋದಕ, ಬೋದಕೇತರ ವರ್ಗ, ವಿದ್ಯಾರ್ಥಿಗಳು ಇದ್ದರು.ವಿವಿಗಳು ನೈತಿಕವಾಗಿ ಕುಸಿದರೆ ಒಂದು ಪೀಳಿಗೆಯೇ ನಾಶ

ವಿಶ್ವವಿದ್ಯಾಲಯಗಳು ನೈತಿಕವಾಗಿ ಕುಸಿತ ಕಂಡರೆ ಅದು ಒಂದು ಪೀಳಿಗೆಯ ನಾಶಕ್ಕೆ ಕಾರಣವಾಗುತ್ತದೆ ಎಂದು ವಿವಿಯ ನಿಕಟಪೂರ್ವ ಕುಲಸಚಿವ (ಆಡಳಿತ), ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಆಡಳಿತಾಧಿಕಾರಿಯೂ ಆದ ಎಸ್‌.ಎನ್‌. ರುದ್ರೇಶ್‌ ಹೇಳಿದರು.

ಬಳ್ಳಾರಿ ವಿಶ್ವವಿದ್ಯಾಲಯದಲ್ಲಾದ ಘಟಿಕೋತ್ಸವ ನಕಲಿ ಪ್ರಮಾಣಪತ್ರ ಹಗರಣ, ಟೆಂಡರ್‌ ಪ್ರಕ್ರಿಯೆಗಳ ವಿಳಂಬ, ಈವರೆಗೆ ವಿವಿಯಲ್ಲಾಗಿರುವ ಇತರೆ ಘಟನೆಗಳ ಕುರಿತು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ವಿವಿಗಳ ಬೆಳವಣಿಗೆ ಹಾದಿಯಲ್ಲಿ ಗುರಿ ಎಷ್ಟು ಮುಖ್ಯವೋ, ನೈತಿಕ ಮಾರ್ಗವೂ ಅಷ್ಟೇ ಮುಖ್ಯ. ವಿವಿಯ ಬೇರು ಗಟ್ಟಿಯಾಗಿರಬೇಕಿದ್ದರೆ ಮಾರ್ಗ ಉತ್ತಮವಾಗಿರಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಬೌದ್ಧಿಕ ಪ್ರಗತಿ ಕಂಡುಕೊಳ್ಳಬೇಕಾದರೆ ಉತ್ತಮ ಮಾರ್ಗದಲ್ಲಿ ನಡೆಯುವುದು ಸಹ ಪ್ರಮುಖ ಸಂಗತಿಯಾಗಿದೆ. ವಿವಿ ಬೆಳವಣಿಗೆ ನೆಲೆಯಲ್ಲಿ ಕುಲಪತಿ, ಡೀನ್, ಸಿಂಡಿಕೇಟ್‌ ಸದಸ್ಯರು ತೀರ್ಮಾನ ಮಾಡಬೇಕಾಗುತ್ತದೆ. ಕುಲಪತಿಗೆ ಇನ್ನೂ ಮೂರು ವರ್ಷಗಳ ಅಧಿಕಾರವಧಿ ಇದ್ದು ಇದನ್ನು ಬಳಸಿಕೊಂಡರೆ ವಿವಿ ಬೆಳೆಯುತ್ತದೆ. ವಿದ್ಯಾರ್ಥಿಗಳ ಬದುಕು ರೂಪಿಸುವತ್ತ

ವಿವಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.