ನಗರದ ಉತ್ತರಾದಿ ಮಠದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಶ್ರೀ 1008 ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರ 30ನೇ ಆರಾಧನಾ ಮಹೋತ್ಸವ ಮಂತ್ರಘೋಷಣೆ, ವೇದಮಂತ್ರ ಪಠಣ ಹಾಗೂ ಭಕ್ತಿಭಾವದ ನಡುವೆ ಅತ್ಯಂತ ಸಂಭ್ರಮದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಉತ್ತರಾದಿ ಮಠದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಶ್ರೀ 1008 ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರ 30ನೇ ಆರಾಧನಾ ಮಹೋತ್ಸವ ಮಂತ್ರಘೋಷಣೆ, ವೇದಮಂತ್ರ ಪಠಣ ಹಾಗೂ ಭಕ್ತಿಭಾವದ ನಡುವೆ ಅತ್ಯಂತ ಸಂಭ್ರಮದಿಂದ ಜರುಗಿತು.ಆರಾಧನಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಶ್ರೀ ಸತ್ಯ ಪ್ರಮೋದ ತೀರ್ಥರ ಸ್ತೋತ್ರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ ಹಾಗೂ ಭಕ್ತರಿಂದ ಭಜನಾ ಕಾರ್ಯಕ್ರಮಗಳು ಭಕ್ತಿಭಾವದ ವಾತಾವರಣ ನಿರ್ಮಿಸಿದವು. ಬಳಿಕ ವೈಭವದ ರಥೋತ್ಸವ ನೆರವೇರಿತು.
ಪಂಡಿತ್ ನರಸಿಂಹಾಚಾರ್ಯ ಪುರಾಣಿಕ ಅವರು ಶ್ರೀ ಸತ್ಯಪ್ರಮೋದ ತೀರ್ಥರ ಜೀವನ, ಆಧ್ಯಾತ್ಮಿಕ ಸಾಧನೆ ಹಾಗೂ ಧಾರ್ಮಿಕ ಸೇವೆಯ ಕುರಿತು ಪ್ರವಚನ ನೀಡಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಭಕ್ತರಿಗೆ ಕರೆ ನೀಡಿದರು. ಮಠದ ವ್ಯವಸ್ಥಾಪಕ ಪಂಡಿತ್ ರಾಘವೇಂದ್ರ ಆಚಾರ್ಯ ಜೋಶಿ ಆರಾಧನಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಸಂಜೆ ದೀಪೋತ್ಸವ ಸಹಿತ ವಿವಿಧ ಮಹೋತ್ಸವಗಳು ಭಕ್ತರ ಸಂಭ್ರಮದೊಂದಿಗೆ ನಡೆದವು. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಆರಾಧನಾ ಮಹೋತ್ಸವದಲ್ಲಿ ನಗರದ ನೂರಾರು ಭಕ್ತರು ಪಾಲ್ಗೊಂಡಿದ್ದರು.ಜ್ಞಾನಸಂಪತ್ತು ನಾಶವಾಗದು: ಡಾ. ಪೂಜಾರ: ಯಾದಗಿರಿ: ಕಣ್ಣಿಗೆ ಕಾಣುವ ಸಂಪತ್ತು ಹಾಗೂ ಭಂಡಾರ ಕ್ಷಣಾರ್ಧದಲ್ಲಿ ಕಳೆದುಹೋಗಬಹುದು. ಆದರೆ ಕಣ್ಣಿಗೆ ಕಾಣದ ಜ್ಞಾನ ಸಂಪತ್ತು ಮಾತ್ರ ಮನುಷ್ಯನ ಬದುಕಿನಲ್ಲಿ ಸದಾ ಶಾಶ್ವತ ಉಳಿಯುತ್ತದೆ ಎಂದು ಪಂ.ಡಾ.ಪ್ರಮೋದಾಚಾರ್ಯ ಪೂಜಾರ ಹೇಳಿದರು. ನಗರದ ಉತ್ತರಾದಿ ಮಠದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಆಯೋಜಿಸಿದ್ದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ದಶಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಜೀವನದಲ್ಲಿ ಭೌತಿಕ ಸಂಪತ್ತಿಗಿಂತ ಜ್ಞಾನ ಸಂಪತ್ತಿಗೆ ಹೆಚ್ಚಿನ ಮಹತ್ವವಿದೆ. ಜ್ಞಾನವು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವುದರ ಜತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಪ್ರೇರಣೆ ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಬೇಕು. ದಾಸ ಸಾಹಿತ್ಯದ ಅಧ್ಯಯನದಿಂದ ಉತ್ತಮ ಸಂಸ್ಕಾರ, ಭಕ್ತಿ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜತೆಗೆ ಸಮಗ್ರ ಹರಿಕಥಾಮೃತಸಾರದ ಮಹಿಮೆ ಹಾಗೂ ಅದರ ಆಧ್ಯಾತ್ಮಿಕ ಮತ್ತು ತಾತ್ವಿಕ ವಿಚಾರಗಳ ವಿವರಿಸಿದರು. ಪಾಠಕ ವಿದ್ವಾಂಸರು ಹಾಗೂ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಜಿಲ್ಲಾ ಸಂಚಾಲಕ ಪಂ.ನರಸಿಂಹಾಚಾರ್ಯ ಪುರಾಣಿಕ, ಉತ್ತರಾದಿ ಮಠದ ವ್ಯವಸ್ಥಾಪಕ ಪಂ. ರಾಘವೇಂದ್ರ ಆಚಾರ್ಯ ಜೋಶಿ, ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.