ಕನ್ನಡಪ್ರಭ ವಾರ್ತೆ ಬೇಲೂರು

ದೇವಸ್ಥಾನಗಳ ತವರೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಮೇಳವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು ಹಿಂದೂ ಧರ್ಮದವರಿಗೆ ಮನೋರಂಜನೆ ಜತೆಗೆ ಧಾರ್ಮಿಕ ಬೋಧನೆ ನೀಡುತ್ತಿದೆ ಎಂದು ಶ್ರೀಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಅಸರಣ್ಣ ಹೇಳಿದರು. ತಾಲೂಕಿನ ಅರೇಹಳ್ಳಿ ಹೋಬಳಿಯ ಉತ್ತೊಳಲು ಗ್ರಾಮದಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ತಿ ಸೇವಾ ಸಮಿತಿ ಅಧ್ಯಕ್ಷ ಇಂದಿರಾ ಶಿವಾನಂದ್ ನೇತೃತ್ವದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಕಾರ‍್ಯಕ್ರಮದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಧಾರ್ಮಿಕ ಬೋಧನೆ ನೀಡಿದ ಅವರು, ದುರ್ಗಾಪರಮೇಶ್ವರಿಗೆ ಯಕ್ಷಗಾನ ಸೇವೆಯು ಅಚ್ಚುಮೆಚ್ಚು. ಆರಂಭದಲ್ಲಿದ್ದoತಹ ಒಂದು ಮೇಳ ಇಂದು ಏಳು ಮೇಳಗಳಾಗಿ ಮಾರ್ಪಟ್ಟಿದೆ. ನಮಗೆ ಕಷ್ಟಗಳು ಬಂದಾಗ ಮನಸ್ಸಿನಲ್ಲಿ ನಮಗಿಷ್ಟವಾದ ದೇವರನ್ನು ಕುರಿತು ಪ್ರಾರ್ಥಿಸಿದರೆ ಅರ್ಧ ಭಾರ ಕಡಿಮೆಯಾದಂತೆ ಭಾಸವಾಗುತ್ತದೆ. ನಾವು ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ದೇವರು ಸಹ ನಮ್ಮನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ. ವಿಶ್ವಶಾಂತಿಯನ್ನು ಸಾರುವ ಸನಾತನ ಧರ್ಮವನ್ನು ಉಳಿಸುವ, ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಧಾರ್ಮಿಕ ಸಾಂಪ್ರಾದಾಯಿಕ ಕಲೆಯನ್ನು ಇನ್ನಷ್ಟು ಬೆಳೆಸಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಕಾರ್ತಿ ಸೇವಾ ಸಮಿತಿ ಅಧ್ಯಕ್ಷ ಇಂದಿರಾ ಶಿವಾನಂದ್, ಶಾಸಕ ಹುಲ್ಲಳ್ಳಿ ಸುರೇಶ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾ ರ‍್ಯದರ್ಶಿ ಅಮಿತ್ ಶೆಟ್ಟಿ, ಮಾಜಿ ಶಾಸಕ ವಿಶ್ವನಾಥ್, ಕಾರ್ತಿ ಸೇವಾ ಸಮಿತಿ ಕಾರ‍್ಯದರ್ಶಿ, ಖಜಾಂಚಿ ಹಾಗೂ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.