ಕೃಷಿ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಕೃಷಿಕ ಆರ್ಥಿಕವಾಗಿ ಸಂಪನ್ನವಾಗಬೇಕು.

ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಕಟ್ಟಡದ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮುಂಡಗೋಡ

ಕೃಷಿ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಕೃಷಿಕ ಆರ್ಥಿಕವಾಗಿ ಸಂಪನ್ನವಾಗಬೇಕು. ಕೃಷಿಕನ ಮೊಗದಲ್ಲಿ ಯಾವಾಗಲೂ ಸಂತಸ ಕಾಣಬೇಕು ಅಂದರೆ ಮಾತ್ರ ದೇಶ ಸುಭೀಕ್ಷವಾಗಿರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಇಂದೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಿಂದ ಮುಂಡಗೋಡ ತಾಲೂಕಿಗೆ ಸುಮಾರು ₹೧೮೦ ಕೋಟಿಯನ್ನು ರೈತರಿಗೆ ಸಾಲ ನೀಡಲಾಗಿದ್ದು, ಕೃಷಿ ಸಾಲ ಪಡೆಯುವಲ್ಲಿ ಮುಂಡಗೋಡ ತಾಲೂಕು ಜಿಲ್ಲೆಯಲ್ಲಿಯೇ ೨ನೇ ಸ್ಥಾನವನ್ನು ಹೊಂದಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹಣ ಕೊಡುವುದಿಲ್ಲ. ಬದಲಾಗಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಿಂದ ಈ ಸಾಲ ನೀಡಲಾಗಿದ್ದು, ರೈತರು ಸಶಕ್ತ ರೈತರಾಗಲು ಕಾರಣವಾಗಿದೆ. ಅನೇಕ ಜನಪುಣ್ಯಾತ್ಮರು ನಮ್ಮ ಬ್ಯಾಂಕ್‌ನಲ್ಲಿ ₹೪೦ ಸಾವಿರ ಕೋಟಿಗೂ ಅಧಿಕ ಹಣ ಠೇವಣಿ ಇಟ್ಟು ರೈತರ ಬದುಕಿಗೆ ದಾರಿದೀಪವಾಗಿದ್ದಾರೆ.

ಕ್ಷೇತ್ರದ ರೈತರಿಗಾಗಿ ಅನೇಕ ನೀರಾವರಿ ಯೋಜನೆಗಳನ್ನು ತರಲಾಗಿದೆ. ಕೆರೆಗೆ ನೀರು ತುಂಬಿಸುವ ಯೋಜನೆ ಬೋಗಸ್ ಯೋಜನೆ ಎಂದು ಕೆಲವರು ಟೀಕೆ ಮಾಡಿದ್ದನ್ನು ಕೇಳಿದ್ದೇನೆ. ಅವರ ಟೀಕೆಗೆ ಕಾಲವೇ ಉತ್ತರ ನೀಡಲಿದೆ. ಯಾರು ಏನೇ ಹೇಳಿದರೂ ಯೋಜನೆ ನಿಲ್ಲುವುದಿಲ್ಲ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದ್ದು, ಅತಿ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ ಮಾತನಾಡಿದರು. ಇಂದೂರ ಕೃಷಿ ಸಹಕಾರ ಸಂಘದ ಅಧ್ಯಕ್ಷ ಯಮನಪ್ಪ ಮಾರಂಬೀಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ರವಿಗೌಡ ಪಾಟೀಲ, ದೇವೇಂದ್ರ ಕೆಂಚಗೊಣ್ಣವರ, ಮುನ್ಸಿ ಥಾಮಸ್, ಗ್ರಾಪಂ ಅಧ್ಯಕ್ಷ ಫಕ್ಕೀರೇಶ, ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಗಣಪತಿ ಶೇಟ್, ಸಿದ್ದು ಹಡಪದ, ಕೆಂಜೋಡಿ ಗಲಬಿ, ನಾಗಭೂಷಣ ಹಾವಣಗಿ, ವೈ.ಪಿ. ಭುಜಂಗಿ, ಪರಶುರಾಮ ತಹಸೀಲ್ದಾರ ಮುಂತಾದವರಿದ್ದರು.