ದೀಪದ ಬೆಳಕಿನಂತೆ ಭಾವನೆಗಳು ಪರಿಶುದ್ಧವಾಗಿರಲಿ

| Published : Dec 04 2024, 12:35 AM IST

ಸಾರಾಂಶ

ದೀಪ ಎಲ್ಲರನ್ನೂ ಒಗ್ಗೂಡಿಸುವ, ಬಾಂಧವ್ಯ ಬೆಸೆಯುವ ಚೈತನ್ಯ ಶಕ್ತಿ ಹೊಂದಿದೆ

ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ವಿರಕ್ತಮಠದಲ್ಲಿ ಸೋಮವಾರ ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ ಕಾರ್ಯಕ್ರಮ ಸಂಪ್ರದಾಯದಂತೆ ಅದ್ಧೂರಿಯಾಗಿ ಆಚರಿಸಲಾಯಿತು.

ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೀಪ ಬೆಳಗಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ದೀಪದ ಬೆಳಕಿನಂತೆ ಮನುಷ್ಯನ ಭಾವನೆಗಳು ಪರಿಶುದ್ದವಾಗಿರಲಿ. ದೀಪ ಎಲ್ಲರನ್ನೂ ಒಗ್ಗೂಡಿಸುವ, ಬಾಂಧವ್ಯ ಬೆಸೆಯುವ ಚೈತನ್ಯ ಶಕ್ತಿ ಹೊಂದಿದೆ. ಬದುಕಿನಲ್ಲಿ ಪರಿವರ್ತನಾಶೀಲತೆ ತರುವ ಕಾರ್ತಿಕ ಮಾಸದ ದೀಪದಿಂದ ಮನುಷ್ಯನಲ್ಲಿನ ಕತ್ತಲೆ ಕಳೆದು ಹೊಸ ಬೆಳಕನ್ನು ನೀಡುವುದರ ಸಂಕೇತವಾಗಿದೆ. ಸಂಪ್ರದಾಯಬದ್ಧ ಅರ್ಥಪೂರ್ಣವಾದ ಇಂತಹ ಪವಿತ್ರ ಆಚರಣೆಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಇವುಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ನಮ್ಮ ಸಂಸ್ಕೃತಿ, ಧರ್ಮ ಉಳಿಸಲು ಬದ್ಧರಾಗಬೇಕು ಎಂದು ಹೇಳಿದರು.

ಪ್ರವಚನ ನೀಡಿದ ಗುರು ಮಹಾಂತಯ್ಯ ಶಾಸ್ತ್ರಿಗಳು ಮಾತನಾಡಿ, ಕಾರ್ತಿಕ ದೀಪೋತ್ಸವದ ಮಹಿಮೆ ತಿಳಿಸುತ್ತಾ ಬೆಳಕಿನಿಂದ ಕತ್ತಲೆ ಹೊರಹೋಗುವಂತೆ ಮನದ ಅಂಧಕಾರ ತೊಲಗಿಸಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಶ್ರೀಗಳು ಸಕಲರ ಆತ್ಮಗಳಲ್ಲಿ ಜ್ಞಾನದ ಜ್ಯೋತಿ ಪಸರಿಸಬೇಕು ಅಜ್ಞಾನ ತೊಲಗಿಸಬೇಕು, ಮೌಡ್ಯಗಳಿಂದ ಹೊರಬರುವುದೇ ನಿಜವಾದ ಅರಿವು ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು.

ಹೊಸರಿತ್ತಿಯ ಭಕ್ತರ ಪರವಾಗಿ ಕಲ್ಲಪ್ಪ ಕಲ್ಲೇ ದೇವರು, ಇಚ್ಚಂಗಿಯ ಶಂಬಣ್ಣ ಅಂಗಡಿ, ಎಣ್ಣೆ ದೀಪದ ದಾನಿ ಚಂದ್ರಕಾಂತ ಘಾಟಿಗೆ, ಪ್ರಸಾದ ಸೇವೆ ವಹಿಸಿಕೊಂಡ ನಂದನ ಸೋಮಯ್ಯ ಹಿರೇಮಠ ಅವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.

ಶ್ರೀಮಠದ ಪ್ರಾಂಗಣದಲ್ಲಿ ನಿರಂಜನ ದೀಪ ನವಗ್ರಹದ ದೀಪಗಳನ್ನು ಗುರುಕುಲ ಶಿಕ್ಷಣ ಸಂಸ್ಥೆಯ ಗುರುಗಳು ಹಾಗೂ ಶಿಕ್ಷಕಿಯರು ಸುಂದರವಾಗಿ ರಚಿಸಿದ್ದರು. ಕಾರ್ಯಕ್ರಮದಲ್ಲಿ ಡಾಕ್ಟರ್ ಎನ್.ಬಿ. ನಾಗರಹಳ್ಳಿ ಹಾಗೂ ಬಸವರಾಜ ಉಂಡಿ ಸಂಗೀತ ಸೇವೆ ನೀಡಿದರು. ಮಹಾದೇವ ಬಿಷ್ಟಣ್ಣವರ್ ಸ್ವಾಗತಿಸಿ ನಿರೂಪಿಸಿದರು.