ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಇಂದಿನ ಒತ್ತಡದ ಬದುಕಿನಲ್ಲಿ ಮಾನವ ನಿತ್ಯ ಕಲುಷಿತ ಆಹಾರ, ನೀರು, ಗಾಳಿ, ಸೇವನೆ ಜೊತೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಸಿಯುತ್ತಿದ್ದಾನೆ. ಹಿಂದಿನ ಋಷಿ ಮುನಿಗಳ ಆಹಾರ, ವಿಹಾರ, ಜೀವನ ಪದ್ಧತಿ ನಮಗೆ ಆದರ್ಶವಾಗಬೇಕು. ನಮ್ಮ ಆರೋಗ್ಯ ಪೂರ್ಣ ಬದುಕಿಗೆ ದೈಹಿಕ ವ್ಯಾಯಾಮ, ಯೋಗಾಸನ, ಧ್ಯಾನ, ಒಳ್ಳೆಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಸಹಕಾರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಡಾಂಗೆ ನರ್ಸಿಂಗ್ ಮಹಾವಿದ್ಯಾಲಯದ ಆವರಣದಲ್ಲಿ ಅಥಣಿ ತಾಲೂಕು ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಯೋಗ ಶಿಕ್ಷಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕ್ಕೆ ಭಾರತದ ಶ್ರೇಷ್ಠ ಕೊಡುಗೆಯಾಗಿದೆ. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ. ಅಥಣಿಯಲ್ಲಿ ಯೋಗ ಶಿಕ್ಷಕರ ತರಬೇತಿ ಜರುಗುತ್ತಿರುವುದು ಸಂತಸದ ವಿಚಾರ. ಈ ಮೂಲಕ ನಿತ್ಯ ಯೋಗ ಆಚರಿಸಿ ನಾವೆಲ್ಲ ಭಾರತದ ಸದೃಢ ಪ್ರಜೆಗಳಾಗಿ ಸಶಕ್ತ ಭಾರತ ನಿರ್ಮಿಸೋಣ ಎಂದರು.ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯ ಆಚರಣೆ ಮಾಡುವುದರಿಂದ ಲಾಭ ಹೊಂದಲು ಸಾಧ್ಯ. ಕ್ಯಾನ್ಸರ್‌ನಂತ ಮಹಾಮಾರಿ ರೋಗಗಳು ಇಂದು ಜನಜಾಗ್ರತಿ ಮೂಡಿಸುವುದು ಅವಶ್ಯವಾಗಿದೆ ಎಂದರು. ರಾಜ್ಯ ಯೋಗ ಪ್ರಭಾರಿ ಯೋಗಾಚಾರ್ಯ ಭವರಲಾಲ ಆರ್ಯ ಮಾತನಾಡಿ, ಅಥಣಿಯಲ್ಲಿ ಸಹಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಶಾಸಕರಾದ ಲಕ್ಷ್ಮಣ ಸವದಿ ಅವರು ಉದ್ಘಾಟಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅವರು ಅಥಣಿಯನ್ನು ಯೋಗಮಯವನ್ನಾಗಿ ಮಾಡುವ ಆಸಕ್ತಿಯನ್ನು ಹೊಂದಿದ್ದು ಅಥಣಿ ತಾಲೂಕಿನಲ್ಲಿ ಯೋಗ ಪ್ರಸರಣಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಲಿದ್ದಾರೆ. ನಸುಕಿನ ಸಂದರ್ಭದಲ್ಲಿ ಬಂದು ಯೋಗದಲ್ಲಿ ಪಾಲ್ಗೊಂಡಿರುವ ಅವರ ಯೋಗ ಪ್ರೇಮವನ್ನು ನಾವು ಕಾಣಬಹುದು ಎಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿಯ ಚಿಕ್ಕೋಡಿ ಜಿಲ್ಲಾ ಪ್ರಭಾರಿ ಶಿವಾನಂದ ಮಾಲಗಾವಿ ಮಾತನಾಡಿ, ಏ.10ರಿಂದ ಮೇ 4ರವರೆಗೆ ನಿತ್ಯ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. 25 ದಿನಗಳ ಕಾಲ ಜರುಗುವ ಈ ವಿಶೇಷ ಯೋಗ ಶಿಬಿರದಲ್ಲಿ ಹರಿದ್ವಾರ, ಬೇರೆ ಬೇರೆ ರಾಜ್ಯಗಳಲ್ಲಿ ಯೋಗ ಪರಿಣಿತ ತಜ್ಞರಿಂದ ಶಿರಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಮುಂಜಾನೆ 5 ಗಂಟೆಯಿಂದ 7 ಗಂಟೆಯವರೆಗೆ ಜರುಗಲಿದೆ ಎಂದರು.ಭವರಲಾಲ ಆರ್ಯ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ಜರುಗಿತು. ಈ ವೇಳೆ ಪತಂಜಲಿ ಯೋಗ ಸಮಿತಿ ರಾಜ್ಯ ಸಮಿತಿ ಪರವಾಗಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 250ಕ್ಕೂ ಅಧಿಕ ಜನ ಯೋಗ ಶಿಕ್ಷಕ ತರಬೇತಿ ಪಡೆದರು.ಯೋಗ ಗುರು ಎ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಆರ್.ಎಂ.ಡಾಂಗೆ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ, ಯೋಗ ಶಿಕ್ಷಕ ಕಿರಣ್ ಮನೋಳ್ಕರ್, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತರಾದ ಅಪ್ಪಾಸಾಹೇಬ ಅಲಿಬಾದಿ, ಸಂಜಯ ಕುಸ್ತಿಗಾರ, ಸಂಭಾಜಿ ನಿಂಬಾಳ್ಕರ, ಬಾಲಕೃಷ್ಣ ಕೋಳೇಕರ, ಎಸ್.ಕೆ.ಹೊಳೆಪ್ಪನವರ, ಡಾ.ವಿನಾಯಕ ಚಿಂಚೋಳಿಮಠ, ರಾಮಣ್ಣ ಧರಿಗೌಡ, ಬಳವಂತ ಪತ್ತಾರ, ದೇವೇಂದ್ರ ಬಿಸ್ವಾಗರ, ಶ್ರೀಶೈಲ ಪಾಟೀಲ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಜ್ಯೋತಿ ಪಾಟೀಲ, ಸದಾಶಿವ ಚಿಕ್ಕಟ್ಟಿ, ಸುರೇಖಾ ತಾಂಬಟ, ಸದಾಶಿವ ಮುದಗೌಡರ, ಅಪ್ಪಾಸಾಹೇಬ ತಾಂಬಟ ಉಪಸ್ಥಿತರಿದ್ದರು