ಗವಾಯಿಗಳಿಗೆ ಭಾರತರತ್ನ ಸಿಗುವಂತಾಗಲಿ: ಪಿ.ಜಿ.ಆರ್. ಸಿಂಧ್ಯಾ

| Published : Dec 04 2024, 12:32 AM IST

ಗವಾಯಿಗಳಿಗೆ ಭಾರತರತ್ನ ಸಿಗುವಂತಾಗಲಿ: ಪಿ.ಜಿ.ಆರ್. ಸಿಂಧ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವಿಕಲರ ಬದುಕಿಗೆ ಆಶಾಕಿರಣವಾಗಿದ್ದ ಪಂ. ಪುಟ್ಟರಾಜ ಗವಾಯಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತರತ್ನ ನೀಡಬೇಕು.

ಬಹದ್ದೂರಬಂಡಿ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಂಗವಿಕಲರಾಗಿದ್ದೂ ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡಿದ ಹಾಗೂ ಅಂಗವಿಕಲರ ಬದುಕಿಗೆ ಆಶಾಕಿರಣವಾಗಿದ್ದ ಪಂ. ಪುಟ್ಟರಾಜ ಗವಾಯಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತರತ್ನ ನೀಡಬೇಕು ಎಂದು ಮಾಜಿ ಗೃಹಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ತಾಲೂಕಿನ ಬಹದ್ದೂರಬಂಡಿ ಶಾಲೆಯಲ್ಲಿ ವಿಕಲಚೇತನ ನೌಕರರ ಸಂಘ ತಾಲೂಕು ಘಟಕ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಂ. ಪುಟ್ಟರಾಜ ಗವಾಯಿಗಳು ಹುಟ್ಟುತ್ತಾ ಅಂಧರಾಗಿದ್ದರೂ ಧೃತಿಗೆಡದೇ ಸಂಗೀತ ಅಭ್ಯಾಸ ಮಾಡುತ್ತಾ, ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರು ಮಾಡದ ಸಾಧನೆ ಮಾಡುವ ಜತೆಗೆ ತಮ್ಮ ಹಾಗೆ ಇರುವ ಅನೇಕ ಅಂಕವಿಕಲರ ಬಾಳು ಕೂಡಾ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಆಶ್ರಮ ಪ್ರಾರಂಭ ಮಾಡಿ ಅಂಗವಿಕಲರ ಬದುಕಿಗೆ ಬೆಳಗಾಗಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ರೀತಿಯ ಸಾಧನೆ ಮಾಡಿದ ಪಂ. ಪುಟ್ಟರಾಜ ಗವಾಯಿಗಳಿಗೆ ಸರ್ಕಾರ ಕೂಡಲೇ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು, ಅಂದಾಗ ಮಾತ್ರ ಅಂಗವಿಕಲ ಸಮುದಾಯಕ್ಕೆ ಗೌರವ ನೀಡಿದಂತೆ ಆಗುತ್ತದೆ ಎಂದು ಹೇಳಿದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಅಂಗವಿಕಲ ನೌಕರರಿಗೆ ೭ನೇ ವೇತನ ಆಯೋಗದ ಪ್ರಕಾರ ಅವರ ಮೂಲ ವೇತನದ ಶೇ. ೬ರಷ್ಟು ಸಂಚಾರಿ ಭತ್ಯೆ, ಪೋಷಣಾ ಭತ್ಯೆ ಜಾರಿಗೆ ಮಾಡುವಂತೆ ಆಯೋಗ ವರದಿ ಕೊಟ್ಟು ೨ ತಿಂಗಳು ಕಳೆದರೂ ಸರ್ಕಾರ ಜಾರಿ ಮಾಡಿಲ್ಲ. ನಿರುದ್ಯೋಗಿ ಅಂಗವಿಕಲರ ಭತ್ಯೆ ಹೆಚ್ಚಳ ಮಾಡುವುದು, ಶಕ್ತಿ ಯೋಜನೆಯ ಅಡಿಯಲ್ಲಿ ಪುರುಷ ಅಂಗವಿಕಲರಿಗೆ ಉಚಿತ ಪ್ರಯಾಣ, ವಿಆರ್‌ಡಬ್ಲ್ಯೂ ಹಾಗೂ ಎಂಆರ್‌ಡಬ್ಲ್ಯೂಗಳನ್ನು ಆಯಂ ಮಾಡುವುದು, ಅಂಗವಿಕಲ ಮಕ್ಕಳ ವಿದ್ಯಾರ್ಥಿ ವೇತನ ಹೆಚ್ಚಳ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ದಿನಾಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ಮಾತನಾಡಿ, ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಜನಪ್ರತಿನಿಧಿಗಳು ಅವುಗಳನ್ನು ಸರಿಯಾದ ವ್ಯಕ್ತಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಕುರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ, ತಾಲೂಕು ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ, ಸಹ ಸಂಘಟನಾ ಆಯುಕ್ತ ಶರೀಫಸಾಬ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಬಾಬಾ ಕಿಲ್ಲೇದಾರ, ಬಸಣ್ಣ ಕಬ್ಬೇರ, ದರಿಯಾಸಾಬ ಕಾತರಕಿ, ಉರ್ದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹುಸೇನಸಾಬ ಕಮ್ಮಾರ, ಶಿಕ್ಷಕರಾದ ಭಾರತಿ ಹವಳೆ, ಮಮತಾ, ಹನುಮವ್ವ, ಮೇರಾಜುನ್ನಿಸಾ, ಭಾರತಿ ಉಪಾಧ್ಯ, ಗೀತಾ ಕುರಿ, ಜಲಜಾಕ್ಷಿ, ನಗ್ಮಾ, ಹನುಮಂತಪ್ಪ, ರಾಜಾ ಹುಸೇನ ಹಾಜರಿದ್ದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಬಹದ್ದೂರಬಂಡಿ ಕ್ಲಸ್ಟರ್‌ನ ಸಿಆರ್‌ಪಿ ಹನುಮಂತಪ್ಪ ಕುರಿ ಸ್ವಾಗತಿಸಿದರು. ಶಿಕ್ಷಕಿ ಗಂಗಮ್ಮ ಕಪರಶೆಟ್ಟಿ ವಂದಿಸಿದರು.