ಸಾರಾಂಶ
ಡಿ. 12 ಮತ್ತು 13ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಅಂಜನಾದ್ರಿಯಲ್ಲಿ ನಡೆಯುವ ಹನುಮಮಾಲಾಧಾರಿಗಳ ವಿಸರ್ಜನಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಯುವಂತೆ ಅಗತ್ಯ ಭದ್ರತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ. 12 ಮತ್ತು 13ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹನುಮಮಾಲಾ ಕಾರ್ಯಕ್ರಮದಲ್ಲಿ ಯಾವುದೇ ಸಮಸ್ಯೆಗಳಾಗದಂತೆ ವಿವಿಧ ಸಮಿತಿ ರಚಿಸಲಾಗಿದ್ದು. ಈ ಸಮಿತಿಯ ನೋಡಲ್ ಅಧಿಕಾರಿಗಳು ಖುದ್ದಾಗಿ ಹಾಜರಿದ್ದು ತಮಗೆ ವಹಿಸಿದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಬೇಕು. ಪೊಲೀಸರು 4ರಿಂದ 5 ಕಡೆ ಚೆಕಪೋಸ್ಟ್ ತೆರೆಯಬೇಕು. ಜನರು ಬರುವುದು ಒಂದು ಕಡೆ ಮತ್ತು ಹೋಗುವುದಕ್ಕೆ ಇನ್ನೊಂದು ಕಡೆ ಮಾರ್ಗ ಮಾಡಿ ಟ್ರಾಫಿಕ್ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕೆಂದರು.
ಕಳೆದ ಸಲಕ್ಕಿಂತ ಈ ಸಲ ಹೆಚ್ಚು ಜನರು ಬರುತ್ತಾರೆ. ಹಾಗಾಗಿ ಬರುವ ಜನರಿಗೆ ಊಟದ ಸಮಸ್ಯೆಯಾಗಬಾರದು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ನದಿಯಲ್ಲಿ ಸ್ನಾನಮಾಡಿ ಜನ ಬಟ್ಟೆಗಳನ್ನು ಅಲ್ಲಿ ಬಿಟ್ಟು ಹೋಗುತ್ತಾರೆ. ಅವುಗಳನ್ನು ಒಂದು ಕಡೆ ಹಾಕುವ ವ್ಯವಸ್ಥೆಯಾಗಬೇಕು. ಎಲ್ಲರ ಸ್ನಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೆಚ್ಚಿನ ನೀರಿನ ಟ್ಯಾಪ್ ಅಳವಡಿಸಿ ಎಂದು ಹೇಳಿದರು.ಆರೋಗ್ಯ ಸಮಿತಿ, ಸ್ವಚ್ಛತೆ. ಬ್ಯಾರಿಕೇಡ್, ಸಾರಿಗೆ, ರಸ್ತೆ ನಿರ್ವಹಣೆ, ಆಹಾರ ಅರಣ್ಯ ಸಮಿತಿ ಸೇರಿದಂತೆ ಇತರೆ ಸಮಿತಿಯವರು ತಮ್ಮ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡಬೇಕು. ಅಂಜನಾದ್ರಿ ಪಕ್ಕದ ಅರಣ್ಯದಲ್ಲಿ ಚಿರತೆ ಮತ್ತು ಕರಡಿ ಹಾವಳಿ ಜಾಸ್ತಿ ಇದೆ. ಹಾಗಾಗಿ ಯಾವುದೇ ಅನಾಹುತಗಳಾಗದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ರಾತ್ರಿಗಸ್ತು ತಿರುಗಬೇಕು.
ಶಿಷ್ಟಾಚಾರ ಪಾಲನೆ ಸಮಿತಿಯವರು ಯಾವುದೇ ಶಾಸಕರು ಹಾಗೂ ಸಚಿವರು ಬಂದಾಗ ಶಿಷ್ಟಾಚಾರ ನಿಯಮ ಪಾಲನೆ ಮಾಡಬೇಕು. ಹಲವಾರು ಜನರು ಬರುವುದರಿಂದ ಸ್ವಚ್ಛತೆ ನಿರ್ವಹಣೆ ಮಾಡಬೇಕು. ಅಂಜನಾದ್ರಿ ಸುತ್ತಲಿನ ಪ್ರದೇಶದಲ್ಲಿ ಮದ್ಯಪಾನ ನಿಷೇಧ ಮಾಡಬೇಕು. ಇತರೆ ವಿವಿಧ ಇಲಾಖೆಗಳಿಗಿಂತ ಪೊಲೀಸ್ ಹಾಗೂ ರೆವಿನ್ಯೂ ಇಲಾಖೆಯ ಜವಾಬ್ದಾರಿ ಬಹಳ ಇದೆ ಎಂದು ಹೇಳಿದರು.ಸಭೆಯಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿ. ಜನಾರ್ದನ ರೆಡ್ಡಿ, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ ಕುಮಾರ್, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.