ಸಾರಾಂಶ
ಹಾವೇರಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಡಿ. ೮ರಂದು ಸವಣೂರ ತಾಲೂಕು ಕ್ರೀಡಾಂಗಣದಲ್ಲಿ ಸಂಜೆ ೪ ಗಂಟೆಗೆ ಮತದಾರರಿಗೆ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿಂದಂತೆ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃತಜ್ಞತಾ ಸಮಾವೇಶದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಜಮೀರ ಅಹ್ಮದ, ಈಶ್ವರ ಖಂಡ್ರೆ, ವಿನಯ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ವಿಪ ಮುಖ್ಯಸಚೇತಕ ಸಲೀಂ ಅಹ್ಮದ್, ನಸೀರ್‌ಅಹ್ಮದ್, ಸೇರಿದಂತೆ ಹಲವರು ನಾಯಕರು, ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಹೊಸ ಯುಗ ಆರಂಭವಾಗಿದೆ. ಹೀಗಾಗಿ ಈ ಕೃತಜ್ಞತಾ ಸಮಾರಂಭದಲ್ಲಿ ೧ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಗೆ ೩೪,೧೬,೭೭೭ ಜನರು ಅರ್ಜಿ ಹಾಕಿದ್ದು, ಈ ಪೈಕಿ ೩೩,೫೪,೨೯೨ ಮನೆಗೆ ಉಚಿತ ಸಂಪರ್ಕ ಕಲ್ಪಿಸಲಾಗಿದೆ. ಅಕ್ಟೋಬರ್ ಅಂತ್ಯಕ್ಕೆ ಇದು ಶೇ.೯೮.೧೭ರಷ್ಟು ಗುರಿ ಸಾಧನೆ ಮಾಡಿದಂತಾಗಿದೆ. ಒಟ್ಟು ೧೦,೨೭,೪೫೭ ರೈತರ ಪಂಪಸೆಟ್‌ಗಳಿಗೆ ಉಚಿತ ಸಂಪರ್ಕ ಕಲ್ಪಿಸಲಾಗಿದೆ. ಹೊಸದಾಗಿ ಕೊಳವೆಬಾವಿ ಕೊರೆಸುವ ರೈತರಿಗೆ ೫೦೦ಮೀ ಒಳಗೆ ಇದ್ದರೆ ಹಳೆ ಟ್ರಾನ್ಸ್‌ಫಾರ್ಮರ್ಸ್ ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ದೂರ ಇದ್ದರೆ ಹೊಸ ಟಿಸಿಯೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಚರ್ಚಿಸಲಾಗುವುದು. ಅಲ್ಲದೇ ಸೋಲಾರ ವ್ಯವಸ್ಥೆ ಪಡೆದುಕೊಳ್ಳಲು ಅವಕಾಶ ಇದೆ ಎಂದರು.ನೂತನ ಶಾಸಕ ಪಠಾಣ ಮಾತನಾಡಿ, ೩೦ ವರ್ಷಗಳ ನಂತರ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಈ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಸ್ತಾಪ ನಡೆಯಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ನಡೆಯಲಿದೆ ಎಂಬುದನ್ನು ತಿಳಿಸಲಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಆದ್ಯತೆ ನೀಡುತ್ತೇನೆ ಎಂದರು.ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ನೆಹರು ಓಲೇಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಸಿ. ಪಾಟೀಲ, ಎಂ.ಜಿ. ಮುಲ್ಲಾ ಇದ್ದರು.