ಅಭಿವೃದ್ಧಿಗೆ ಶಿಕ್ಷಣವೇ ಕಾರಣ: ಸಚಿವ ಮಾಂಕಾಳ ಎಸ್.ವ್ಶೆದ್ಯ

| Published : Dec 08 2024, 01:16 AM IST

ಸಾರಾಂಶ

ಹಳ್ಳಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳ ಕನಸುಗಳಿಗೆ ನೀರೆರೆದು ಪೋಷಿಸುತ್ತಿದೆ. ಸುತ್ತೂರಿನಲ್ಲಿರುವ ಸುತ್ತೂರು ಮಠದ ವಸತಿ ಶಾಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಶಿಕ್ಷಣ ನೀಡುತ್ತಿರುವುದು ಅನನ್ಯ ಸೇವೆಯಾಗಿದೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಅಭಿವೃದ್ಧಿಗೆ ಶಿಕ್ಷಣವೇ ಕಾರಣ, ಸಂಸ್ಕಾರಯುತ ಶಿಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಮೌಲ್ಯಾಧಾರಿತ ಶಿಕ್ಷಣವನ್ನು ಪೂಜ್ಯಶ್ರೀಗಳವರು ತಮ್ಮ ಮಠದ ಸಂಸ್ಥೆಗಳಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ಎಸ್.ವೈದ್ಯ ಅಭಿಪ್ರಾಯಪಟ್ಟರು.

ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಸಂಸ್ಮರಣೆಯ ಅಂಗವಾಗಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮೂರು ದಿನಗಳ ಜೆಎಸ್ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳ ಕನಸುಗಳಿಗೆ ನೀರೆರೆದು ಪೋಷಿಸುತ್ತಿದೆ. ಸುತ್ತೂರಿನಲ್ಲಿರುವ ಸುತ್ತೂರು ಮಠದ ವಸತಿ ಶಾಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಶಿಕ್ಷಣ ನೀಡುತ್ತಿರುವುದು ಅನನ್ಯ ಸೇವೆಯಾಗಿದೆ ಎಂದರು.

ಛಲದಿಂದ ಸಾಧಿಸುವ ಮಕ್ಕಳಿಗೆ ಕೈಯಲ್ಲಿ ಕ್ರೀಡೆಯಿದೆ, ಅದನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸುವಂತಹ ಪ್ರೋತ್ಸಾಹ ಹಾಗೂ ಮನೋಸ್ಥೈರ್ಯವನ್ನು ತುಂಬುವ ಕೆಲಸವನ್ನು ಶ್ರೀಮಠ ಮಾಡುತ್ತಿರುವುದು ಅನುಕರಣೀಯ. ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಸೋತೆನೆಂದು ಛಲ ಬಿಡದೆ ಮುನ್ನುಗ್ಗಿ ನಡೆದರೆ ಗೆಲುವು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ, ಸಾಕ್ಷರತಾ ಮತ್ತು ಸಕಾಲ ಸಚಿವ ಮಧು ಬಂಗಾರಪ್ಪ ಮಾತನಾಡಿ, ವ್ಯವಸ್ಥಿತವಾಗಿ ಆಯೋಜಿಸಿರುವ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ. ಸುತ್ತೂರು ಮಠವು ಶಿಕ್ಷಣ ಇಲಾಖೆಗೆ ಹೆಮ್ಮೆ ತರುವಂತಹ ಕೆಲಸಗಳನ್ನು ಮಾಡುತ್ತಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕೃತಿ, ಕ್ರೀಡಾಭಿಮಾನವನ್ನು ಬೆಳೆಸಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮೂರು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಮುಖ್ಯಅತಿಥಿಗಳಾಗಿ ಅಂತಾರಾಷ್ಟ್ರೀಯ ವೇಟ್ ಲಿಪ್ಟರ್ ಪುಷ್ಪರಾಜ್ ಹೆಗಡೆ ಮಾತನಾಡಿ, ಕ್ರೀಡೆಯು ಜೀವನದಲ್ಲಿ ಹೇಗೆ ಬದುಕಬೇಕು ಮತ್ತು ಹೇಗೆ ಶಿಸ್ತನ್ನು ರೂಢಿಸಿಕೊಳ್ಳಬೇಕೆಂಬುದನ್ನು ಕಲಿಸುತ್ತದೆ. ಉತ್ತಮ ಆರೋಗ್ಯಕ್ಕೆ ಪ್ರತಿದಿನ 30 ನಿಮಿಷಗಳು ದೈಹಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ಸಂತಸದ ಬದುಕು ನಿಮ್ಮದಾಗಬೇಕಾದರೆ ಆಸಕ್ತಿಯಿರುವ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.

ಮುರುಡೇಶ್ವರ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ಆಡಳಿತ ನಿರ್ದೇಶಕಿ ಡಾ. ಪುಷ್ಪಲತಾ ಮಾಂಕಾಳ ವೈದ್ಯ ಮಾತನಾಡಿ, ಮಠಗಳು ಸಮಾಜದ ಮೂಲ ಬೇರು, ಸಮಾಜದ ತಪ್ಪುಗಳನ್ನು ತಿದ್ದಿ ತೀಡಿ ಬೆಳೆಸುವ ಕೆಲಸಗಳನ್ನು ಮಾಡುತ್ತಿವೆ ಎಂದರು.

ಕ್ರೀಡಾಪಟುಗಳ ಪರವಾಗಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ರಾಜ್ಯಮಟ್ಟದ ಕ್ರೀಡಾಪಟು ಯು.ಡಿ. ಪವನ್ ಹಾಗೂ ಕ್ರೀಡಾಧಿಕಾರಿಗಳ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕ ಎಚ್.ಸಿ. ಉಮೇಶ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಶ್ರೀ ಜಯರಾಜೇಂದ್ರ ಸ್ವಾಮೀಜಿ, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಎಸ್. ಶಿವಕುಮಾರಸ್ವಾಮಿ, ಸಂಸ್ಥೆಗಳ ಮುಖ್ಯಸ್ಥರು ಇದ್ದರು. ಜೆಎಸ್ಎಸ್ ವಿವಿಧ ಸಂಸ್ಥೆಗಳಿಂದ ಆಗಮಿಸಿದ್ದ ಕ್ರೀಡಾ ತಂಡಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿ, ಪಥಚಲನ ನಡೆಸಿದರು. ಮೂರು ದಿನಗಳ ಕ್ರೀಡಾಕೂಟದಲ್ಲಿ 134 ಸಂಸ್ಥೆಗಳ 3,218 ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಸುತ್ತೂರಿನ ಜೆಎಸ್ಎಸ್ ವಸತಿ ಶಾಲಾ ಮಕ್ಕಳು ಮೈನವಿರೇಳಿಸುವಂತಹ ಮಲ್ಲಕಂಬ ಪ್ರದರ್ಶನ ನೀಡಿದರು.

ಸುತ್ತೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಲೋಕೇಶಪ್ಪ ಸ್ವಾಗತಿಸಿದರು. ಎಚ್.ಎಸ್. ಗಂಗಾಧರಸ್ವಾಮಿ ವಂದಿಸಿದರು, ಡಿ.ಎಂ. ಸಿದ್ದಲಿಂಗಸ್ವಾಮಿ ನಿರೂಪಿಸಿದರು.