ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಜೆಎಸ್‌ಎಸ್ ವಿದ್ಯಾಸಂಸ್ಥೆ ದೊಡ್ಡ ಹೆಮ್ಮರವಾಗಲು, ವಿದೇಶದಲ್ಲೂ ಬೇರೂರಲು ಭದ್ರ ಬುನಾದಿ ಹಾಕಿದ್ದೆ ರಾಜೇಂದ್ರ ಮಹಾಸ್ವಾಮೀಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಪಟ್ಟಣದ ನ್ಯಾಷನಲ್ ಸರ್ಕಾರಿ ಶಾಲಾ ಆವರಣದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರ ಹೆಮ್ಮರವಾಗಲು, ಬೃಹತ್ ಆಗಿ ದೇಶಾದ್ಯಂತ ಮಾತ್ರವಲ್ಲ ವಿದೇಶದಲ್ಲೂ ಬೆಳೆಯಲು ಶ್ರೀಗಳ ಪಾತ್ರ ಅಗಾಧ. ರಾಜೇಂದ್ರಶ್ರೀ 109ನೇ ಜಯಂತಿ ಆಚರಣೆಯನ್ನು ಅತ್ಯಂತ ಸಂತಸದಿಂದ ಉದ್ಟಾಟಿಸಿರುವೆ, ಶ್ರೀಗಳ ಸ್ಮರಿಸುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಅವರೊಬ್ಬರು ಮಹಾನ್ ಸಂತರು, ಹಳ್ಳಿಯಿಂದ ಬಂದ ಶ್ರೀಗಳು ಬಡಜನರ ಸಂಕಷ್ಟ ಅರಿತು ಜನರ ಬದುಕಿಗೆ ಸ್ಪಂದಿಸುವ ಮೂಲಕ ನೆರವಾದರು. ಮನುಷ್ಯ ಮನುಷ್ಯನ್ನನು ಪ್ರೀತಿಸಬೇಕು ಎಂಬುದೇ ಮಾನವ ಧರ್ಮ, ಇದನ್ನೇ ಸಾಧು, ಸಂತರೂ, ಸೂಫಿಗಳು, ಗಣ್ಯರು ಹೇಳಿದ್ದಾರೆ.ಶ್ರೀಗಳು ಸಹಾ ಮಾನವರ ವಿಮೋಚನೆಗೆ ಶಿಕ್ಷಣ ಮುಖ್ಯ ಎಂಬುದನ್ನು ಮನಗಂಡು ಶಿಕ್ಷಣ ಸಂಸ್ಥೆ ಪ್ರಾರಂಬಿಸಿ ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾದರು ಎಂದರು.
ಇಂದು ಜಾತಿ ಸಮಸ್ಯೆಯಿಂದಾಗಿ ಅಸಮಾನತೆ ಸೃಷ್ಟಿಯಾಗಿದೆ, ನಿಜಕ್ಕೂ ಪ್ರಸ್ತುತ ದಿನಗಳಲ್ಲಿ ಪ್ರತಿಭೆ ಮತ್ತು ವ್ಯಕ್ತಿ ಸಾಧನೆ ನೋಡಿ ಗುರುತಿಸುವಂತಾಗಬೇಕು, ಜಾತಿ ನೋಡಿ ಸಾಧನೆ ಗುರುತಿಸುವಂತಾಗಬಾರದು, ಅಸಮಾನತಯಿಂದಾಗಿ ಜಾತಿ ಸಮಸ್ಯೆ ಕಾರಣವಾಗಿದೆ. ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಬದುಕಿಗಾಗಿ ಸಂವಿಧಾನ ನೀಡಿದ್ದಾರೆ, ಇದರ ಆಶಯ ಎಲ್ಲರಿಗೂ ತಿಳಿಯುವಂತಾಗಬೇಕು ಎಂದರು.ಬಸವೇಶ್ವರರು ದಯೆಯೆ ಧರ್ಮದ ಮೂಲ ಎಂಬ ಸಂದೇಶ ಸಾರಿದರು. ಎಲ್ಲ ಧರ್ಮಗಳಲ್ಲೂ ದಯೇ ಇರಬೇಕು ಎಂಬುದನ್ನು ಸ್ಪಷ್ಟವಾಗಿ ಸಾರಿದ್ದಾರೆ, ಬಸವಾದಿ ಶರಣರ ಸಂದೇಶದ ಮೂಲಕ ನಾವೆಲ್ಲರೂ ಮಾನವರಾಗಿ ಬದುಕೋಣ, ಬಡವರ ಸ್ಪಂದನೆ ಮತ್ತು ಶಿಕ್ಷಣ ನೀಡುವ ಉತ್ತಮ ಕೆಲಸವನ್ನು ಸುತ್ತೂರು ಮಠ ಮಾಡುತ್ತಿದೆ. ಇಂದು ಅವರನ್ನು ಸ್ಮರಿಸಿ ಗೌರವಿಸುವ ಕೆಲಸ ಮಾಡೋಣ ಎಂದರು.ಈ ವೇಳೆ ಸಾಲೂರು ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಶ್ರೀ, ಸಚಿವ ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಮಧು ಬಂಗಾರಪ್ಪ, ಶಾಸಕರಾದ ಪುಟ್ಟರಂಗಶೆಟ್ಟಿ, ಕೃಷ್ಣಮೂರ್ತಿ, ಗಣೇಶ ಪ್ರಸಾದ್, ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಎಸ್.ಬಾಲರಾಜು, ಆರ್. ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಯುವ ಉದ್ಯಮಿ ನಿಶಾಂತ್, ಚಾಮುಲ್ ಅಧ್ಯಕ್ಷ ನಾಗೇಂದ್ರ, ಡಾ.ದತ್ತೇಶ್ ಕುಮಾರ್, ಅಧ್ಯಕ್ಷೆ ರೇಖಾ ರಮೇಶ್, ಎ.ಪಿ ಶಂಕರ್, ಜಿಪಂ ಸಿಇಒ ಮೋನಾರೋತ್, ಎಸ್ಪಿ ಕವಿತ, ಡೀಸಿ ಶಿಲ್ಪಾನಾಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ವೀರಶೈವ ಮಹಾಸಭೆಯ ತಿಮ್ಮರಾಜಿಪುರ ಪುಟ್ಟಣ್ಣ, ರಾಜು, ವೀರಭದ್ರಸ್ವಾಮಿ ಮಹದೇವಸ್ವಾಮಿ, ಕೆಂಪನಪಾಳ್ಯ ಮಹೇಶ್, ಮಂಜುನಾಥ್, ಬೖಂಗೇಶ್, ಮುಡಿಗುಂಡ ಮಹದೇವಪ್ರಸಾದ್, ಚೇತನ್ , ಉತ್ತಂಬಳ್ಳಿ ಗಣೇಶ, ರವಿಕುಮಾರ್ ಹಾಜರಿದ್ದರು.
ಇದೊಂದು ಭಕ್ತಿ ಸಮರ್ಪಣಾ ಕಾರ್ಯಕ್ರಮ: ಸುತ್ತೂರುಶ್ರೀರಾಜೇಂದ್ರ ಸ್ವಾಮೀಜಿ ಈ ಭಾಗದ ಕಲ್ಪವೃಕ್ಷ. ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಸಮಾರಂಭ ಯಾವುದೆ ಪಕ್ಷಕ್ಕೆ ಸೀಮಿತವಾದುದಲ್ಲ, ಎಲ್ಲ ಪಕ್ಷದವರು, ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಆಯೋಜಿಸಿದ ಭಕ್ತಿ ಸಮರ್ಪಣಾ ಕಾರ್ಯಕ್ರಮ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಹೇಳಿದರು. ನ್ಯಾಷನಲ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ರಾಜೇಂದ್ರಶ್ರೀಗಳ 109ನೇ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜೇಂದ್ರಶ್ರೀ ಈ ಭಾಗದ ಜನರ ಪಾಲಿಗೆ ಕಾಮಧೇನು, ಕಲ್ಪವೃಕ್ಷದಂತೆ ಕಾರ್ಯನಿರ್ವಹಿಸಿದರು, ಸಮಾಜದ ಹಿಂದುಳಿದ ಮಕ್ಕಳ ಅಭ್ಯುದಯಕ್ಕ ಸ್ವಂದಿಸಿದ ಮಹಾನ್ ಸಂತ ಎಂದರು.
ರಕ್ತನಿಧಿ ಘಟಕ, ಹೃದಯ ತಪಾಸಣಾವಿಭಾಗಕ್ಕೆ ಸಿಎಂಗೆ ಮನವಿ: ಎಆರ್‌ಕೆಈ ಭಾಗದ ಬಡ ಜನರ ಆರೋಗ್ಯ ಸೇವೆಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯನ್ನು ಮಾದರಿಯನ್ನಾಗಿಸುವ ಮೂಲಕ ಹೆಚ್ಚಿನ ರೀತಿಯಲ್ಲಿ ರಕ್ತನಿಧಿ ಘಟಕ, ಹೃದಯರೋಗ ತಪಾಸಣಾ ವಿಭಾಗ ತೆರೆಯುವ ನಿಟ್ಟಿನಲ್ಲಿ ಸಿಎಂ ಸಹಕರಿಸಬೇಕು ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೖಷ್ಣಮೂರ್ತಿ ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಸಕರು, ಬ್ಲಡ್ ಬ್ಯಾಂಕ್ ತೆರೆಯಲು, ಹೃದಯ ಘಟಕ ಇನ್ನಿತರೆ ಯೋಜನೆಗಳಿಗೆ ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಆದ್ಯತೆ ನೀಡಬೇಕು. ಕೊಳ್ಳೇಗಾಲ ವ್ಯಾಪ್ತಿ ಮಾತ್ರವಲ್ಲ ಬಹುತೇಕ ಕಡೆ ಇ-ಸ್ವತ್ತು ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಿಎಂ ಈ ಸಂಬಂಧ ಪರಿಶೀಲಿಸಿ ಎ ಖಾತೆ ಮತ್ತು ಬಿ ಖಾತೆ ನೀಡಲು ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಶೀಘ್ರದಲ್ಲೆ ಸಂಪುಟ ಸಭೆ ನಡೆಸಲಿದ್ದು ಜಿಲ್ಲೆಯ ಸಮಗ್ರ ಅಭಿವೃದ್ದಿ ಮತ್ತು ಕೊಳ್ಳೇಗಾಲ ಕ್ಷೇತ್ರದ ಅನೇಕ ಸಮಸ್ಯೆಗಳಿಗೆ ಸ್ಪಂದಿಸಬೇಕು, ಅರಣ್ಯ ಭೂಮಿಯಲ್ಲಿ ವಾಸಿಸುವ ಕಂದಾಯದಾರರಿಗೆ ಹಕ್ಕು ಪತ್ರ ನೀಡುವ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸಬೇಕು, ಬಿ.ರಾಚಯ್ಯ ಸಚಿವರಾಗಿದ್ದ ವೇಳೆ ಹಕ್ಕು ಪತ್ರ ನೀಡಲಾಗಿದೆ, ಆದರೆ ಅವರಿಗೆ ಭೂಮಿ ದಾಖಲೆ ಒದಗಿಸಿ ಕಂದಾಯದಾರರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಉಸ್ತುವಾರಿ ಸಚಿವ ವೆಂಕಟೇಶ್ ಮಾತನಾಡಿ, ಸುತ್ತೂರು ಮಠ ಮೈಸೂರು ಜಿಲ್ಲೆಯಲ್ಲಿರುವುದು ಹೆಮ್ಮೆಯ ವಿಚಾರ. ಬಡವರ ಪರವಾಗಿ ಶ್ರೀಕ್ಷೇತ್ರ ಜನಪರ, ಸಮಾಜಪರ ಕೆಲಸ ಮಾಡುತ್ತಿದ್ದು ಇಂತಹ ಕೆಲಸ ಇನ್ನಷ್ಟು ಸಾಗಲಿ ಎಂದರು. ಉದ್ಯಮಿ ನಿಶಾಂತ್ ಮಾತನಾಡಿ, ರಾಜೇಂದ್ರ ಶ್ರೀಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಿರುಸೇವೆ ಕೈಗೊಳ್ಳಲು ನನಗೆ ಶ್ರೀಮಠ ಜವಾಬ್ದಾರಿ ವಹಿಸಿದ್ದು ನನ್ನ ಸೌಭಾಗ್ಯ ಎಂದರು.
ಸಿದ್ದರಾಮಯ್ಯಗೆ ಅಭಿಮಾನಿಗಳ ಜೈಕಾರಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಅಭಿಮಾನಿಗಳಿಂದ ಹರ್ಷೋದ್ಗಾರ ಕೇಳಿ ಬಂತು. ಅದರಲ್ಲೂ ಸಿದ್ದರಾಮಯ್ಯ ಬಾಷಣಕ್ಕೆ ನಿಂತ ವೇಳೆ ಸಿಳ್ಳೆ, ಕೇಕೆ ಹೆಚ್ಚಿನ ರೀತಿ ಕೇಳಿ ಬಂತು.
ನಿಶಾಂತ್‌ಗೂ ಮೊಳಗಿದ ಜೈಕಾರ: ಹನೂರು ಯುವ ನಾಯಕ, ಉದ್ಯಮಿ ನಿಶಾಂತ್ ಹೆಸರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅಭಿಮಾನಿಗಳು ಸಿಳ್ಳೆ ಹಾಕುವ ಮೂಲಕ ಸಂಭ್ರಮಿಸಿದರು.ಕುಣಿದು ಕುಪ್ಪಳಿಸಿದ ನಗರಸಭಾ ಸದಸ್ಯ
ರಾಜೇಂದ್ರ ಶ್ರೀಗಳ ಜಯಂತಿ ಕಾರ್ಯಕ್ರಮ ನಿಮಿತ್ತ ಮೆರವಣಿಗೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಆಗಮಿಸುತ್ತಿದ್ದಂತೆ ಹಾಜರಿದ್ದ ನಗರಸಭೆ ಸದಸ್ಯ ಬಸ್ತಿಪುರ ಶಾಂತರಾಜು ಭಕ್ತಿಪೂರ್ವಕವಾಗಿ ಕುಣಿದು ಕುಪ್ಪಳಿಸುವ ಮೂಲಕ ಶ್ರೀಗಳಿಗೆ ನಮನ ಸಲ್ಲಿಸಿದರು. ಬಸ್ತಿಪುರ ಶಾಂತರಾಜು ಹೆಜ್ಜೆ ಹಾಕುತ್ತಿದ್ದಂತೆ ಹಲವು ಮುಖಂಡರು ಕುಣಿದು ಕುಪ್ಪಳಿಸಿದರು. ಮಾಜಿ ಶಾಸಕ ಮಹೇಶ್, ಶಾಸಕ ಕೃಷ್ಣಮೂರ್ತಿ. ನಿಶಾಂತ್ ಸೇರಿದಂತೆ ಹಲವರು ಜಯಂತಿ ವೇಳೆ ಹೆಜ್ಜೆ ಹಾಕಿದ ಮುಖಂಡರನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಸಾಲೂರು ಮಠದ ಡಾ.ಶಾಂತಮಲ್ಲಿಕಾರ್ಜುನ ಶ್ರೀ, ಶ್ರೀಕಂಠಸ್ವಾಮೀಜಿ, ವೀರಭದ್ರ, ಪುಟ್ಟಣ್ಣ ಇತರರಿದ್ದರು.