ವಿದ್ಯೆಯನ್ನು ಸರಿಯಾಗಿ ಬಳಸುವ ವಿವೇಕ, ಬುದ್ಧಿ, ಸಂಸ್ಕಾರ ಬೇಕು: ಮೋಹನ್‌ ಭಾಗವತ್‌

| Published : Dec 08 2024, 01:16 AM IST

ವಿದ್ಯೆಯನ್ನು ಸರಿಯಾಗಿ ಬಳಸುವ ವಿವೇಕ, ಬುದ್ಧಿ, ಸಂಸ್ಕಾರ ಬೇಕು: ಮೋಹನ್‌ ಭಾಗವತ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಮೈದಾನದಲ್ಲಿ ನೀಡುತ್ತಿದ್ದ ಪ್ರದರ್ಶನಗಳನ್ನು ತದೇಕಚಿತ್ತದಿಂದ ವೀಕ್ಷಿಸಿದ ಮೋಹನ್‌ ಭಾಗವತ್ ರವರು ಪ್ರತೀ ಪ್ರದರ್ಶನಕ್ಕೂ ತಮ್ಮ ಚಪ್ಪಾಳೆಯ ಅಭಿನಂದನೆ ನೀಡುತ್ತಿದ್ದರು. ವಿದ್ಯಾರ್ಥಿ ಸಮೂಹ ಹಾಗೂ ಪ್ರೇಕ್ಷಕ‌ ಸಮೂಹದ ಜೈಶ್ರೀರಾಮ್ ಘೋಷಣೆಗೆ ತಾವೂ ಧ್ವನಿಯಾದರು. ಶ್ರೀರಾಮನ ಪ್ರತಿಷ್ಠೆಯ ಸನ್ನಿವೇಶದಲ್ಲಿ ವಿದ್ಯಾರ್ಥಿಯೊಬ್ಬ ಧರಿಸಿದ ತನ್ನ ಛದ್ಮವೇಷವನ್ನು ಕಂಡು ನಕ್ಕು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪಂಚ ಪೋಷಾತ್ಮಕ ವಿಚಾರವನ್ನು ಒಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿ ಹಂತಹಂತವಾಗಿ ಜಾರಿಗೆ ಬರುತ್ತಿದ್ದು, ಈ ಮಾದರಿಯ ಶಿಕ್ಷಣವನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ಈಗಾಗಲೇ ನೀಡುತ್ತಿರುವುದು ಅಭಿನಂದನೀಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ್ ಡಾ.‌ ಮೋಹನ್ ಜಿ.‌ ಭಾಗವತ್ ಹೇಳಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ಸಂಜೆ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಭಾಗವಹಿಸಿ ಶ್ರೀ ರಾಮನ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಿ ಕ್ರೀಡಾಕೂಟ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳ ಶಾರೀರಿಕ ಪ್ರದರ್ಶನಗಳನ್ನು ವೀಕ್ಷಿಸಿದರು. ನಂತರ ಮಾತನಾಡಿ ಮೋಹನ್‌ ಭಾಗವತ್‌, ವಿದ್ಯೆ ಕೇವಲ ಹೊಟ್ಟೆ ತುಂಬಿಸುವುದಕ್ಕಲ್ಲ, ವ್ಯಕ್ತಿಗೆ ವಿದ್ಯೆ ಇದ್ದರೆ ಮಾತ್ರ ಸಾಲದು, ಅದನ್ನು ಸರಿಯಾಗಿ ಬಳಸುವ ಬುದ್ಧಿ, ವಿವೇಕ, ಸಂಸ್ಕಾರವೂ ಬೇಕು, ಮತ್ತೊಬ್ಬರಿಗೆ ಜ್ಞಾನ ನೀಡಲು ನಮ್ಮ ವಿದ್ಯೆ ಉಪಯೋಗವಾಗಬೇಕು ಎಂದರು.

ಶಿಕ್ಷಣ ಪಡೆದು ತನ್ನ ಸ್ವಂತ ಕಾಲಲ್ಲಿ‌ ನಿಂತು ತನ್ನ ಕುಟುಂಬ ನಿರ್ವಹಣೆ ಮಾಡಬೇಕು, ವ್ಯವಹಾರ ಜ್ಞಾನವನ್ನು ಪಡೆಯಬೇಕು. ದೇಶದ ಸಂಸ್ಕೃತಿ, ಪರಂಪರೆ, ದುರ್ಬಲರ ರಕ್ಷಣೆಗೆ ನಾವೆಲ್ಲರೂ ಸಿದ್ಧರಿರಬೇಕು ಎಂದ ಅವರು, ಗುರು ಶಿಷ್ಯನಿಂದ‌ ಗುರುದಕ್ಷಿಣೆಯನ್ನು ಬಯಸುವುದಿಲ್ಲ, ಬದಲಾಗಿ ಮತ್ತೊಬ್ಬರಿಗೆ ಆ ಜ್ಞಾನವನ್ನು ಪಸರಿಸಲು ಬಯಸುತ್ತಾನೆ ಎಂದು ತಿಳಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ನಾಯಕರನ್ನು ಬರಮಾಡಿಕೊಳ್ಳುವ ದೊಡ್ಡ ಭಾಗ್ಯ ನಮಗೆ ಒದಗಿ ಬಂದಿದೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಶತಮಾನದ ವರ್ಷದಲ್ಲಿ ಗ್ರಾಮೀಣ ಪ್ರದೇಶಕ್ಕೆ ಸರಸಂಘ ಚಾಲಕರಾದ ಜಗತ್ತಿನ ಹಿಂದೂ ನಾಯಕ ಮೋಹನ್ ಜಿ. ಭಾಗವತ್‌ ಆಗಮಿಸಿರುವುದು ವಿದ್ಯಾಸಂಸ್ಥೆಯ ಇತಿಹಾಸದಲ್ಲಿ ದಾಖಲೆ, ಸಂಭ್ರಮದ ಕ್ಷಣ ಎಂದರು.ಆರ್‌ಎಸ್‌ಎಸ್‌ ಅಖಿಲ ಭಾರತ ಸಹಕಾರ್ಯವಾಹ ಮುಕುಂದ್, ಉದ್ಯಮಿಗಳಾದ ಅಜಿತ್ ಕುಮಾರ್ ಎಸ್. ಜೈನ್, ಬಿ. ನಾರಾಯಣ್, ಮನೋಜ್ ಕುಮಾರ್, ರಾಧೇಶ್ಯಾಮ್ ಶ್ರೀ ವಲ್ಲಭ ಹೇಡ, ಮನೋಜ್ ಕೋಟಕ್ ಕಿಶೋರ್ ಭಾಯ್, ಮನೀಶ್ ಜೋಷಿ, ಪ್ರಕಾಶ್ ಶೆಟ್ಟಿ ಬಂಜಾರ, ಡಾ. ಸೂರಜ್ ಗೋಪಾಲ್ ಎರ್ಮಾಳ್, ಕರುಣಾಕರ ಆರ್.‌ಶೆಟ್ಟಿ, ನವೀನ್ ಗೋಯೇಲ್ ಡಾ. ವಿರಾರ್ ಶಂಕರ್ ಬಿ.‌ಶೆಟ್ಟಿ, ರವಿಕಲ್ಯಾಣ ರೆಡ್ಡಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಶಾಸಕರಾದ ರಾಜೇಶ್ ನಾಯ್ಕ್, ಉಮನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳೆ,

ಮಾಜಿ ಸಚಿವ ನಾಗರಾಜ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಉದ್ಯಮಿಗಳು, ಸಂಘ ಪರಿವಾರದ ಪ್ರಮುಖರು ಹಾಜರಿದ್ದರು.

ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಾಮ ವಿದ್ಯಾಕೇಂದ್ರದ ಪದವಿಕಾಲೇಜು, ಸೆಕೆಂಡರಿ ಸ್ಕೂಲ್, ಪದವಿಪೂರ್ವ ಕಾಲೇಜು, ಹೈಸ್ಕೂಲು ಹಾಗೂ ಪ್ರಾಥಮಿಕ ಶಾಲೆ ಶಿಶುಮಂದಿರದ ಒಟ್ಟು 3338 ಮಂದಿ ವಿದ್ಯಾರ್ಥಿಗಳ ಪ್ರದರ್ಶಿಸಿದ ಶಿಶು ನೃತ್ಯ ಜಡೆಕೋಲಾಟ, ದೀಪಾರತಿ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ನೃತ್ಯ ಭಜನೆ, ಮಲ್ಲಕಂಬ, ತಿರುಗುವ ಮಲ್ಲಕಂಬ, ಚೆಂಡೆವಾದನ, ನೃತ್ಯ ವೈಭವ, ಕಾಲ್ಚಕ್ರ, ಕೂಪಿಕಾ ಸಮತೋಲನ, ಬೆಂಕಿ ಸಾಹಸ , ಪ್ರೌಢ ಸಾಮೂಹಿಕ , ಚಂದ್ರಯಾನ 3 ಉಡಾವಣೆ , ಆರ್ ಎಸ್ ಎಸ್ 100 ಆಕೃತಿ ರಚನೆ, ಅಯೋಧ್ಯೆಯಲ್ಲಿ ಬಾಲರಾಮನ‌ ಪ್ರತಿಷ್ಠೆಗೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಭೇಟಿ ಸಹಿತ ವಿವಿಧ ವಿವಿಧ ಶಾರೀರಿಕ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನ ರಂಜಿಸಿದರು. ಶಾಲೆಯ ಚಟುವಟಿಕೆ ವೀಕ್ಷಿಸಿದ ಭಾಗವತ್‌ಸಂಜೆ 4.45ಕ್ಕೆ ಮಂಗಳೂರಿನಿಂದ‌ ಝೀರೋ ಟ್ರಾಫಿಕ್ ಮೂಲಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಿದ ಡಾ. ಮೋಹನ್ ಭಾಗವತ್ ಅವರು ಶಿಶುಮಂದಿರ, ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ಸರಸ್ವತಿ ವಂದನೆಯಲ್ಲಿ ಭಾಗವಹಿಸಿದರು. ಡಾ. ಪ್ರಭಾಕರ ಭಟ್ ಹಾಗೂ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಸಾಹಸ ಪ್ರದರ್ಶನಕ್ಕೆ ಮೋಹನ್ ಭಾಗವತ್ ಮೆಚ್ಚುಗೆ ವಿದ್ಯಾರ್ಥಿಗಳು ಮೈದಾನದಲ್ಲಿ ನೀಡುತ್ತಿದ್ದ ಪ್ರದರ್ಶನಗಳನ್ನು ತದೇಕಚಿತ್ತದಿಂದ ವೀಕ್ಷಿಸಿದ ಮೋಹನ್‌ ಭಾಗವತ್ ರವರು ಪ್ರತೀ ಪ್ರದರ್ಶನಕ್ಕೂ ತಮ್ಮ ಚಪ್ಪಾಳೆಯ ಅಭಿನಂದನೆ ನೀಡುತ್ತಿದ್ದರು. ವಿದ್ಯಾರ್ಥಿ ಸಮೂಹ ಹಾಗೂ ಪ್ರೇಕ್ಷಕ‌ ಸಮೂಹದ ಜೈಶ್ರೀರಾಮ್ ಘೋಷಣೆಗೆ ತಾವೂ ಧ್ವನಿಯಾದರು. ಶ್ರೀರಾಮನ ಪ್ರತಿಷ್ಠೆಯ ಸನ್ನಿವೇಶದಲ್ಲಿ ವಿದ್ಯಾರ್ಥಿಯೊಬ್ಬ ಧರಿಸಿದ ತನ್ನ ಛದ್ಮವೇಷವನ್ನು ಕಂಡು ನಕ್ಕು ಸಂಭ್ರಮಿಸಿದರು.