ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯಂದು ಶನಿವಾರ ಮುಂಜಾನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು.
ಬೆಳಗ್ಗೆ ೬.೫೭ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯರು ಉತ್ಸವದ ವಿವಿಧ ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಹಸ್ರಾರು ಭಕ್ತರ ಜಯಘೋಷದ ನಡುವೆ ಶ್ರದ್ಧಾಭಕ್ತಿಯಿಂದ ಭಕ್ತರು ದೇವರ ಮಹಾರಥವನ್ನು ಎಳೆದರು.ವರ್ಷದಲ್ಲಿ ಒಂದು ಬಾರಿ ಮಾತ್ರ ಸೇವೆ ನೆರವೇರಿಸಲು ಅವಕಾಶವಿರುವ ಬ್ರಹ್ಮರಥೋತ್ಸವ ಸೇವೆಯನ್ನು ೧೫೦ ಭಕ್ತರು ಸಲ್ಲಿಸಿದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ನೀಡಲಾಗಿತ್ತು. ಸಹಸ್ರಾರು ಭಕ್ತರು ಶ್ರೀ ದೇವರ ವೈಭವದ ರಥೋತ್ಸವ ವೀಕ್ಷಿಸಿ ಕೃತಾರ್ಥರಾದರು.
ಮೊದಲು ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ ೬.೫೭ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು.ಪೂಜೆಯ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯರು ದೇವರಿಗೆ ಸುವರ್ಣವೃಷ್ಠಿಗೈದರು. ಬಳಿಕ ಭಕ್ತಾದಿಗಳಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತಾಧಿಗಳು ನಾಣ್ಯ, ಕಾಳು ಮೆಣಸು, ಸಾಸಿವೆಗಳನ್ನು ರಥಕ್ಕೆ ಸಮರ್ಪಿಸಿದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ನಂತರ ಭಕ್ತ ಜನರ ಬಹುಪರಾಕಿನೊಂದಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು. ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಮಹಾರಥೋತ್ಸವವನ್ನು ಮತ್ತು ಬ್ರಹ್ಮರಥಾರೂಢರಾದ ಶ್ರೀ ದೇವರ ದರುಶನವನ್ನು ಸಹಸ್ರಾರು ಭಕ್ತಾದಿಗಳು ಪಡೆದರು.
ಭಕ್ತಿ ಮತ್ತು ಸಡಗರದ ಸಮ್ಮಿಲನದಲ್ಲಿ ರಥಬೀದಿಯಲ್ಲಿ ಸಾಗಿ ಬಂದ ರಾಜಗಂಭೀರ್ಯದ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು. ದೇವಸ್ಥಾನದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ದೇವರಿಗೆ ಪೂಜೆ ನಡೆಯಿತು. ಶ್ರೀ ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯರು ಭಕ್ತರಿಗೆ ಮೂಲಪ್ರಸಾದ ವಿತರಿಸಿದರು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಮಾಜಿ ಸಚಿವ ಬಿ. ರಮಾನಾಥ ರೈ, ಬ್ರಹ್ಮರಥ ದಾನಿ ಅಜಿತ್ ಶೆಟ್ಟಿ ಕಡಬ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಶ್ರವಣ್, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮನೀಶ, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಸುಳ್ಯ ತಹಸೀಲ್ದಾರ್ ಮಂಜುಳಾ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಮೋಹನ್‌ರಾಂ ಎಸ್. ಸುಳ್ಳಿ, ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಡಿವೈಎಸ್‌ಪಿ ಡಾ. ಅರುಣ್ ನಾಗೇಗೌಡ, ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ., ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ ಗೌಡ ಆಲ್ಕಬೆ, ದೇವಳದ ಅಭಿಯಂತರ ಉದಯಕುಮಾರ್, ಲೋಕೋಪಯೋಗಿ ಅಭಿಯಂತರ ಪ್ರಮೋದ್ ಕುಮಾರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್,. ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತಿತರರು ಇದ್ದರು. ಬ್ರಹ್ಮರಥದ ಬೆತ್ತ ದೇವಸ್ಥಾನಕ್ಕೆ ಈ ಹಿಂದೆ ಬ್ರಹ್ಮರಥ ಎಳೆದ ಬೆತ್ತವನ್ನು ರಥ ಎಳೆದ ಭಕ್ತರಿಗೆ ನೀಡಲಾಗುತ್ತಿತ್ತು. ಇದರಿಂದಾಗಿ ರಥ ಎಳೆದ ತಕ್ಷಣ ಬೆತ್ತಕ್ಕಾಗಿ ಭಕ್ತರ ನೂಕುನುಗ್ಗಲು ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಮತ್ತು ದೇವಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೆತ್ತವು ಮಹಾಪ್ರಸಾದದಲ್ಲಿ ನೀಡಲು ಅವಶ್ಯಕವಿದ್ದುದರಿಂದ ರಥ ಎಳೆಯಲು ಉಪಯೋಗಿಸಿದ ಎಲ್ಲ ಬೆತ್ತಗಳನ್ನು ದೇವಳಕ್ಕೆ ಕೊಂಡೊಯ್ಯಲಾಯಿತು. ಭಕ್ತ ಸಾಗರ
ಚಂಪಾಷಷ್ಠಿಯ ದಿನ ಕುಕ್ಕೆಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಬ್ರಹ್ಮರಥೋತ್ಸವದ ಸಂದರ್ಭ ರಥಬೀದಿಯ ಇಕ್ಕೆಲದಲ್ಲಿ ಮತ್ತು ರಥೋತ್ಸವದ ಬಳಿಕ ರಥಬೀದಿ ತುಂಬೆಲ್ಲ ಭಕ್ತ ಸಂದೋಹವೇ ಕಂಡು ಬಂತು. ಆದಿಸುಬ್ರಹ್ಮಣ್ಯ, ದೇವಳದ ಹೊರಾಂಗಣ, ಒಳಾಂಗಣದಲ್ಲಿ ಹೀಗೆ ಎಲ್ಲಿ ನೋಡಿದರಲ್ಲಿ ಭಕ್ತರೇ ಕಂಡುಬಂದರು.ಷಣ್ಮುಖ ಪ್ರಸಾದ ಭೋಜನ ಶಾಲೆ ಮತ್ತು ಅಂಗಡಿಗುಡ್ಡೆ ವಿಶೇಷ ಭೋಜನ ಸತ್ರ ಅನ್ನಪೂರ್ಣ, ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬೆಳಗ್ಗೆ ೧೦.೩೦ರಿಂದ ಸಂಜೆ ೫ ಗಂಟೆಯ ತನಕ ನಿರಂತರವಾಗಿ ಅನ್ನಪ್ರಸಾದವನ್ನು ಸಹಸ್ರಾರು ಭಕ್ತರು ಸ್ವೀಕರಿಸಿದರು. ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಕುಮಾರಧಾರದಲ್ಲಿಯೇ ವಾಹನಗಳನ್ನು ತಡೆದು ಪಾರ್ಕಿಂಗ್ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಪೊಲೀಸರು ಮಾಡಿದರು. ಇಂದು ಅವಭೃತೋತ್ಸವ
ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಭಾನುವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರ ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ಇದಕ್ಕೂ ಮುನ್ನ ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆ ನಡೆಯಲಿದೆ.