ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಪ್ರಶಸ್ಥ ಸ್ಥಳ. ಸುತ್ತಮುತ್ತಲ ನಾಲ್ಕಾರು ಜಿಲ್ಲೆಗಳಿಗೆ ಇದರಿಂದ ಅನುಕೂಲವಾಗಲಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಪಡೆದು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಹೇಳಿದರು.ನಗರದ ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ಹೈಕೋರ್ಟ್ ಸಂಚಾರಿ ಪೀಠದ ಸಂಬಂಧದ ಹೋರಾಟಕ್ಕೆ ಬುಧವಾರ ಪ್ರೆಸ್ ಟ್ರಸ್ಟ್ ವತಿಯಿಂದ ಬೆಂಬಲ ಸೂಚಿಸಿ, ಟ್ರಸ್ಟಿನ ಸದಸ್ಯರು ಪಾಲ್ಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಯಾವತ್ತೂ ಚಳವಳಿಗಳ ನೆಲ. ಇಲ್ಲಿ ಅನೇಕ ಹೋರಾಟಗಳು ನಡೆದು ಅವೆಲ್ಲ ಯಶಸ್ವಿಯಾಗಿದ್ದು, ಈಗ ಇತಿಹಾಸ. ರಾಜ್ಯದ ಜನ ಇಂದಿಗೂ ಇದನ್ನು ಮರೆಯುವುದಿಲ್ಲ. ಆರಂಭಿಸಿದ ಹೋರಾಟವನ್ನು ಯಶಸ್ವಿಯಾಗಿ ಮುಗಿಸಬೇಕು. ಸರ್ವರ, ಎಲ್ಲ ಸಂಘಟನೆಗಳ ಬೆಂಬಲ ಪಡೆದು ಮುನ್ನಡೆಸಬೇಕು. ಶಿವಮೊಗ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು (ಸಿಮ್ಸ್) ತರಲು ನಡೆದ ಸರ್ವರ ಹೋರಾಟವನ್ನು ಸ್ಮರಿಸಿದ ಅವರು, ಹೋರಾಟಗಳು ಸತತವಾಗಿ ನಡೆಯಬೇಕು. ಚಳವಳಿಯನ್ನು ಸರ್ಕಾರದವರೆಗೆ ತಲುಪಿಸಬೇಕು. ಈಗ ರಾಜಕಾರಣಿಗಳು ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಅವರ ಮೂಲಕ ಮುಂದಿನ ಹೋರಾಟಕ್ಕೆ ಅಣಿಯಾಗಬೇಕು ಎಂದು ಹೇಳಿದರು.‘ಶಿವಮೊಗ್ಗ ಟೈಮ್ಸ್’ ಸಂಪಾದಕ ಚಂದ್ರಕಾಂತ್ ಮಾತನಾಡಿ, ಕಾಗೋಡು ಚಳವಳಿ, ರೈತ ಚಳವಳಿ, ಗೋಪಾಲಗೌಡರ ಸಮಾಜವಾದಿ ಹೋರಾಟ ಇವೆಲ್ಲ ಶಿವಮೊಗ್ಗದ ಹೆಸರನ್ನು ಉತ್ತುಂಗಕ್ಕೇರಿಸಿವೆ. ಇಂತಹ ನೆಲದಲ್ಲಿ ವಕೀಲರ ಸಂಘ ಆರಂಭಿಸಿರುವ ಸಂಚಾರಿ ಪೀಠದ ಹೋರಾಟ ಈ ಹಿಂದೆ ನಡೆದ ಚಳವಳಿಗಳಂತೆ ಯಶಸ್ವಿಯಾಗಬೇಕು. ಇದಕ್ಕೆ ಎಲ್ಲರ ಬೆಂಬಲ ಪಡೆಯುವ ಕೆಲಸವಾಗಬೇಕು. ಜನರ ಹೋರಾಟವಾದಾಗ ಮಾತ್ರ ಚಳವಳಿಗೆ ಫಲ ಸಿಗುತ್ತದೆ. ವಕೀಲರ ಸಂಘ ಈ ಕೆಲಸವನ್ನು ಮಾಡುತ್ತಿದ್ದು, ಇನ್ನಷ್ಟು ಜನರನ್ನು ಒಳಗೊಳ್ಳಬೇಕು. ಸರ್ಕಾರದ ಕಣ್ತೆರೆಸುವಲ್ಲಿ ಯಶಸ್ವಿಯಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರಸ್ವಾಮಿ, ಹಿರಿಯ ನ್ಯಾಯವಾದಿ ಬಸಪ್ಪ ಗೌಡರು, ಕೆ ಪಿ ಶ್ರೀಪಾಲ್ ಸಹಿತ ಸಂಘದ ಪದಾಧಿಕಾರಿಗಳು, ವಕೀಲರು, ಪ್ರೆಸ್ ಟ್ರಸ್ಟಿನ ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿ ನಾಗರಾಜ ನೇರಿಗೆ, ಹುಲಿಮನೆ ತಿಮ್ಮಪ್ಪ, ಹಿರಿಯ ಪತ್ರಕರ್ತರಾದ ಜೇಸುದಾಸ್ ಪಿ, ಗಜೇಂದ್ರ ಸ್ವಾಮಿ, ದತ್ತಾತ್ರೇಯ ಹೆಗಡೆ, ಯೋಗೀಶ್ ಶಾನುಬೋಗನಹಳ್ಳಿ, ವಿ.ಸಿ.ಪ್ರಸನ್ನ, ಗೋವ ಮೋಹನ, ಶಿಜುಪಾಶ, ಸ್ಪಂದನಾ ಚಂದ್ರಶೇಖರ್, ವೀರೇಂದ್ರ ಸೇರಿದಂತೆ ಹಲವರು ಹಾಜರಿದ್ದರು.
ಈ ಜಿಲ್ಲೆಯಲ್ಲಿ ಹೋರಾಟದ ಕಿಚ್ಚಿದೆ: ಯಡಗೆರೆ
ಶಿವಮೊಗ್ಗದ ನೆಲದಲ್ಲಿ ನಡೆದ ಎಲ್ಲಾ ಚಳವಳಿಗಳು ಯಶಸ್ವಿಯಾಗಿವೆ. ಯಾವತ್ತೂ ತನ್ನತನವನ್ನು ಶಿವಮೊಗ್ಗ ಬಿಟ್ಟುಕೊಟ್ಟಿಲ್ಲ. ಇಲ್ಲಿ ಹೋರಾಟದ ಕಿಚ್ಚಿದೆ. ಅದನ್ನು ಉದ್ದೀಪಿಸಿ ಸರ್ವರನ್ನೂ ಒಳಗೊಂಡು ನಡೆಸಿದಲ್ಲಿ ಯಶಸ್ಸು ಖಚಿತ. ಈಗಾಗಲೇ ಹತ್ತು- ಹಲವು ಸಂಘಟನೆಗಳು ಬೆಂಬಲ ನೀಡಿವೆ. ಈ ಮೂಲಕ ಹೋರಾಟ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಬೆಳೆದು ಸಂಚಾರಿ ಪೀಠದ ಕನಸು, ಆಶಯ ಎರಡೂ ಈಡೇರಲಿ ಎಂದು ‘ಕನ್ನಡಪ್ರಭ’ ಜಿಲ್ಲಾ ವಿಶೇಷ ವರದಿಗಾರ ಗೋಪಾಲ್ ಯಡಗೆರೆ ಅಭಿಪ್ರಾಯ ವ್ಯಕ್ತಪಡಿಸಿದರು.