ರಾಷ್ಟ್ರಮಟ್ಟದ ಪ್ರಶಸ್ತಿಗಳು ನೂರರ ಗಡಿ ದಾಟಲಿ

| Published : Sep 17 2024, 12:53 AM IST

ಸಾರಾಂಶ

ರಾಷ್ಟ್ರ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವತಃ ರಾಷ್ಟ್ರಪತಿಗಳಿಂದಲೇ ಪ್ರಶಸ್ತಿ ಪಡೆದಿರುವುದು ಜನಮೆಚ್ಚುಗೆ ಕೆಲಸ. ಇದು ಕೇವಲ ಕಬ್ಬಳಿ ಗ್ರಾಮಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಹೆಮ್ಮೆ ತರುವ ಕೆಲಸವಾಗಿದೆ. ಬಡತನದ ಕುಟುಂಬದಲ್ಲಿ ಹುಟ್ಟಿ ಬಾಲ್ಯ ಜೀವನದಿಂದಲೇ ಕಷ್ಟದ ಬದುಕನ್ನು ಸಾಗಿಸಿ ತಮ್ಮ ಕರ್ತವ್ಯ ನಿಷ್ಠೆಯಿಂದಲೇ ಇಂದು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿರುವ ಕೆ.ಜೆ.ಶಿವಲಿಂಗಯ್ಯ ಅವರಿಗೆ, ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಗೌರವ ಸಮರ್ಪಣೆಗೆ ತಾನು ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಸಂಸದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ಜಿಲ್ಲೆಗೆ ಸಿಕ್ಕಿರುವ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆಯ ವಿಚಾರ. ಇದು ಮುಂದಿನ ದಿನಗಳಲ್ಲಿ ನೂರರ ಗಡಿ ದಾಟಲಿ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ. ತಾಲೂಕಿನ ದುದ್ದ ಹೋಬಳಿ ಕಬ್ಬಳಿ ಗ್ರಾಮದಲ್ಲಿ ನಡೆದ ಗ್ರಾಮದ ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಜೆ ಶಿವಲಿಂಗಯ್ಯ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವತಃ ರಾಷ್ಟ್ರಪತಿಗಳಿಂದಲೇ ಪ್ರಶಸ್ತಿ ಪಡೆದಿರುವುದು ಜನಮೆಚ್ಚುಗೆ ಕೆಲಸ. ಇದು ಕೇವಲ ಕಬ್ಬಳಿ ಗ್ರಾಮಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಹೆಮ್ಮೆ ತರುವ ಕೆಲಸವಾಗಿದೆ. ಬಡತನದ ಕುಟುಂಬದಲ್ಲಿ ಹುಟ್ಟಿ ಬಾಲ್ಯ ಜೀವನದಿಂದಲೇ ಕಷ್ಟದ ಬದುಕನ್ನು ಸಾಗಿಸಿ ತಮ್ಮ ಕರ್ತವ್ಯ ನಿಷ್ಠೆಯಿಂದಲೇ ಇಂದು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿರುವ ಕೆ.ಜೆ.ಶಿವಲಿಂಗಯ್ಯ ಅವರಿಗೆ, ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಗೌರವ ಸಮರ್ಪಣೆಗೆ ತಾನು ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಭರವಸೆ ನೀಡಿದರು.

ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಪ್ರಶಸ್ತಿ ವಿಜೇತ ಶಿಕ್ಷಕ ಶಿವಲಿಂಗಯ್ಯ ಮಾತನಾಡಿ, ತಾನು ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸದ ಹಂತದಲ್ಲೇ ಅನೇಕ ಕಷ್ಟಗಳನ್ನು ಎದುರಿಸಿದ್ದರ ಫಲವಾಗಿ ಇಂದು ಫಲ ಸಿಕ್ಕಿದೆ. ಈ ಹಿಂದೆ ಗುರುಗಳು ನೀಡಿದ ಸಹಕಾರವನ್ನು ವಿದ್ಯಾರ್ಥಿಗಳು ಸ್ಮರಿಸುತ್ತಿದ್ದರು. ಕೇವಲ ಶಿಕ್ಷಣ ನೀಡುವ ಹೊರತಾಗಿ ಗುರು ಶಿಷ್ಯರ ನಡುವೆ ಉತ್ತಮ ಬಾಂಧವ್ಯ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಲಭಿಸಿರುವ ಪ್ರಶಸ್ತಿ ಹಿಂದೆ ಹಸಿವಾದಾಗ ಅನ್ನ, ದಣಿದಾಗ ನೀರು ನೀಡುವ ಜೊತೆಗೆ ವಿದ್ಯಾದಾನ ಮಾಡಿದ ಗುರುಗಳು, ಪ್ರೋತ್ಸಾಹಿಸಿದ ಕುಟುಂಬ ಹಾಗೂ ಗ್ರಾಮಸ್ಥರ ಸಹಕಾರ ಕೂಡ ಅತೀ ಮುಖ್ಯವಾಗಿದೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಕ್ಷಣ ತನ್ನ ಜೀವನದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಯವರು ನಮ್ಮನ್ನು ಕರೆಸಿ ೨೦ ನಿಮಿಷಗಳ ಕಾಲ ಮಾತನಾಡಿ ನನ್ನ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ, ಜಿಲ್ಲೆಯ ಹಾಗೂ ರಾಜ್ಯದ ಹಲವರು ನನ್ನ ಹಾಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿ ಎಂದು ಹಾರೈಸಿದರು.

ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ನಮ್ಮೂರಿನ ಒಬ್ಬರು ರಾಷ್ಟ್ರ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಬೆಲೆ ಕಟ್ಟಲು ಆಗುವುದಿಲ್ಲ, ನಮ್ಮ ಹೋಬಳಿ ವ್ಯಾಪ್ತಿಯಲ್ಲಿ ಐಎಎಸ್, ಐಪಿಎಸ್, ಮಾಡಿರುವ ಸಾಧಕರು ಇದ್ದಾರೆ, ಆದರೆ ರಾಷ್ಟ್ರಪತಿಗಳು ಹಾಗೂ ಪ್ರಧಾನಿ ಗಳಿಂದ ಗೌರವಕ್ಕೆ ಭಾಜನರಾದ ವ್ಯಕ್ತಿಗಳಲ್ಲಿ ಶಿವಲಿಂಗಯ್ಯ ಅವರೇ ಪ್ರಥಮ, ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆಯಿಂದ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಎಂದು ಶಿವಲಿಂಗಯ್ಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇವರ ಸಾಧನೆ ನಮ್ಮೆಲ್ಲರ ಹೆಮ್ಮೆ ಇವರು ನಮ್ಮ ಗ್ರಾಮದ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ಅವರ ಸಲಹೆ, ಸಹಕಾರ ಪಡೆಯುವ ಮೂಲಕ ಎಲ್ಲರೂ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆಯುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕಬಳಿ ಗ್ರಾಮಸ್ಥರು ಸಾಧಕ ಶಿಕ್ಷಕ ಶಿವಲಿಂಗಯ್ಯ ಅವರಿಗೆ ಶಾಲು, ಪೇಟ, ಹಾರ ಹಾಕುವ ಮೂಲಕ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗೋಪಾಲ್, ವಾಣಿಜ್ಯ ತೆರಿಗೆ ಅಧಿಕಾರಿ ಹಾಗೂ ಬಾಬು ಜಗಜೀವನ ರಾಮ್ ಸಂಘದ ಅಧ್ಯಕ್ಷ ಬಸವರಾಜ್ ಎನ್.ಎಸ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಆರ್‌.ಪಿ.ಐ ರಾಜ್ಯಾಧ್ಯಕ್ಷ ಸತೀಶ್, ಕಾಂಗ್ರೆಸ್ ಮುಖಂಡ ಕಬ್ಬಳಿ ರಾಮಚಂದ್ರ, ಹೊಳೆನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೇಂದ್ರ, ಲಕ್ಷ್ಮಣ್, ವಕೀಲ ವಿಜಯ್‌ ಕುಮಾರ್, ಮುಖಂಡರಾದ ಬಾಲು, ಕರೀಗೌಡ, ಶಿವರಾಂ, ಶಿವಸ್ವಾಮಿ, ಪುಟ್ಟಸ್ವಾಮಿ, ಪ್ರದೀಪ್, ಯತೀಶ್, ಸೋಮಶೇಖರ್, ಸಗನಯ್ಯ, ಕುಮಾರ್ ಇತರರು ಇದ್ದರು.