ಸಾರಾಂಶ
೨೦೨೪-೨೫ ನೇ ಸಾಲಿನ ತಾಪಂ ಜಮಾಬಂದಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಮಟಾಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಯೋಜಿತ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂಬುದು ಜಮಾಬಂದಿಯ ಉದ್ದೇಶವಾಗಿದ್ದು, ಯಾವುದೇ ಇಲಾಖೆಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಇಲಾಖೆಯ ಅನುಷ್ಠಾನಾಧಿಕಾರಿಗಳು ಸೂಕ್ತ ಬೇಡಿಕೆ ಸಲ್ಲಿಸಬೇಕು ಎಂದು ಕಾರವಾರದ ಸಾಮಾಜಿಕ ಅರಣ್ಯ ಇಲಾಖೆ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ.ನಾವಿ ತಿಳಿಸಿದರು.
ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ೨೦೨೪-೨೫ ನೇ ಸಾಲಿನ ತಾಪಂ ಜಮಾಬಂದಿ ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಇಒ ರಾಜೇಂದ್ರ ಭಟ್ ಜಮಾಬಂದಿ ವರದಿ ಮಂಡಿಸಿದರು. ಕಳೆದ ೨೦೨೪-೨೫ ನೇ ಸಾಲಿನಲ್ಲಿ ₹೯೬.೩೨ ಕೋಟಿ ಬಜೆಟ್ ಮಂಡಿಸಲಾಗಿತ್ತು. ಒಟ್ಟೂ ₹೧೦.೬೬ ಕೋಟಿ ಅನುದಾನ ಜಮಾ ಆಗಿತ್ತು. ₹೧೦.೦೧ ಕೋಟಿ ಅನುದಾನ ಖರ್ಚಾಗಿದೆ. ಈ ಪೈಕಿ ತಾಪಂ ವಿವಿಧ ಯೋಜನೆಗಳಲ್ಲಿ ₹೭.೦೪ ಕೋಟಿ ಅನುದಾನ ಜಮಾ ಆಗಿದ್ದು, ₹೬.೫೨ ಕೋಟಿ ಖರ್ಚಾಗಿದೆ. ಸುಮಾರು₹ ೫೧.೯೯ ಲಕ್ಷ ಉಳಿದಿದೆ ಎಂದರು. ತಾಪಂ ವ್ಯಾಪ್ತಿಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಅನುದಾನ ಖರ್ಚು-ವೆಚ್ಚ, ಅಭಿವೃದ್ಧಿ ಕಾರ್ಯಕ್ರಮಗಳು, ತಾಪಂ ಅನಿರ್ಬಂಧಿತ ಅನುದಾನ, ಸಾದಿಲ್ವಾರು ಅನುದಾನ ಇತರ ಖರ್ಚುವೆಚ್ಚಗಳನ್ನು ಸಭೆಯಲ್ಲಿ ಇಲಾಖಾವಾರು ಮಂಡಿಸಲಾಯಿತು.
ಸಭೆಯಲ್ಲಿ ಬಿಇಒ ಉದಯ ನಾಯ್ಕ ಮಾತನಾಡಿ, ತಮ್ಮ ಇಲಾಖೆಯ ವಾಹನಕ್ಕೆ ಚಾಲಕರ ನಿಯುಕ್ತಿ ಕುರಿತಂತೆ ಸಭೆಯ ಗಮನ ಸೆಳೆದರು. ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಕ್ಕೆ ಅವಕಾಶವಿದ್ದು ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿ ಸಲಹೆ ನೀಡಿದರು. ತಾಪಂ ಅಧಿಕಾರಿ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಜಮಾಬಂದಿ ಸಂಪನ್ನಗೊಂಡಿತು.