ಸಾರಾಂಶ
ಶೇಡಬಾಳ- ಅಥಣಿ-ವಿಜಯಪುರ ರೈಲು ಮಾರ್ಗ ಒಂದೂವರೆ ದಶಕದಿಂದಲೇ ನನೆಗುದಿಗೆ ಬಿದ್ದಿದೆ. 112 ಕಿಲೋ ಮೀಟರ್ ಉದ್ದದ ಈ ರೈಲು ಮಾರ್ಗ ಘೋಷಣೆಯಾಗಿ 15 ವರ್ಷಕ್ಕೂ ಅಧಿಕ ಕಾಲವೇ ಸಂದಿದೆ. 2010-11ರಲ್ಲೇ ಸಮೀಕ್ಷೆ ಕೂಡ ಮುಗಿದಿದೆ. ಆಗ ಈ ಯೋಜನೆಯ ವೆಚ್ಚವನ್ನು ₹ 810 ಕೋಟಿ ಎಂದು ಕೂಡ ಅಂದಾಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಉತ್ತರ ಕರ್ನಾಟಕದ ಬಹು ವರ್ಷದ ಬೇಡಿಕೆಯಾದ ಶೇಡಬಾಳ-ಅಥಣಿ-ವಿಜಯಪುರ ನೂತನ ರೈಲು ಮಾರ್ಗ ನನೆಗುದಿಗೆ ಬಿದ್ದಿದೆ. ನಾಲ್ಕು ರಾಜ್ಯಗಳ ನಡುವಿನ ಸಂಪರ್ಕ ಕೊಂಡಿಯಾಗಿ ಯೋಜನೆ ಕಾರ್ಯನಿರ್ವಹಿಸಲಿದೆ. ಈ ಸಲದ ಕೇಂದ್ರದ ಬಜೆಟ್‌ನಲ್ಲಿ ಘೋಷಣೆ ಮಾಡಿಸಿ ಪುಣ್ಯ ಕಟ್ಕೊಳ್ಳಿ. ಈ ಭಾಗದ ಅಭಿವೃದ್ಧಿಗೆ ಕೈ ಜೋಡಿಸಿ..!
ಇದು ಧಾರವಾಡ, ಬೆಳಗಾವಿ, ಚಿಕ್ಕೋಡಿ, ವಿಜಯಪುರ ಸೇರಿದಂತೆ ರಾಜ್ಯ ಸಂಸದರಿಗೆ ಉತ್ತರ ಕರ್ನಾಟಕ ಅಂಜುಮನ್ ಎ ಇಸ್ಲಾಂ ಕೋರಿಕೊಳ್ಳುತ್ತಿರುವ ಪರಿ.ಏನಿದು ಯೋಜನೆ?
ಶೇಡಬಾಳ- ಅಥಣಿ-ವಿಜಯಪುರ ರೈಲು ಮಾರ್ಗ ಒಂದೂವರೆ ದಶಕದಿಂದಲೇ ನನೆಗುದಿಗೆ ಬಿದ್ದಿದೆ. 112 ಕಿಲೋ ಮೀಟರ್ ಉದ್ದದ ಈ ರೈಲು ಮಾರ್ಗ ಘೋಷಣೆಯಾಗಿ 15 ವರ್ಷಕ್ಕೂ ಅಧಿಕ ಕಾಲವೇ ಸಂದಿದೆ. 2010-11ರಲ್ಲೇ ಸಮೀಕ್ಷೆ ಕೂಡ ಮುಗಿದಿದೆ. ಆಗ ಈ ಯೋಜನೆಯ ವೆಚ್ಚವನ್ನು ₹ 810 ಕೋಟಿ ಎಂದು ಕೂಡ ಅಂದಾಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಸಮೀಕ್ಷೆ ಆಗಿರುವುದಷ್ಟೇ. ಕೆಲಸ ಮಾತ್ರ ಮುಂದಕ್ಕೆ ಸಾಗುತ್ತಲೇ ಇಲ್ಲ. ಈ ಯೋಜನೆಯ ಫೈಲ್ ಕಚೇರಿಯಲ್ಲಿ ಮೂಲೆ ಸೇರಿ ಧೂಳು ತಿನ್ನುತ್ತಿದೆ. ಆದರೆ ಯಾಕೆ ಯೋಜನೆ ನನೆಗುದಿಗೆ ಬಿದ್ದಿತು ಎಂಬುದು ಮಾತ್ರ ಇನ್ನು ನಿಗೂಢವಾಗಿಯೇ ಉಳಿದಿದೆ.
ಈ ರೈಲು ಮಾರ್ಗವಾದರೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳ ಮಧ್ಯೆ ಸಂಪರ್ಕ ಇನ್ನಷ್ಟು ಹೆಚ್ಚಾಗುತ್ತದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ, ಸಿಮೆಂಟ್ ಫ್ಯಾಕ್ಟರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಮುಂಬೈ, ಗೋವಾ, ಹೈದ್ರಾಬಾದ್‌ಗಳಿಗೆ ಸಾಗಿಸಲು ಹೆಚ್ಚು ಅನುಕೂಲಕರವಾಗಲಿದೆ. ಈ ರೈಲು ಮಾರ್ಗ ಶುರುವಾದರೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ನಿವಾರಣೆಗೂ ಇದು ಸಹಕಾರಿಯಾಗಲಿದೆ. ಈ ಭಾಗದ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಲಿದೆ.ಜನಾಂದೋಲನಕ್ಕೆ ಸಿದ್ಧತೆ:
ಇದೀಗ ಉತ್ತರ ಕರ್ನಾಟಕ ಅಂಜುಮನ್ ಎ-ಇಸ್ಲಾಂ ಸಂಸ್ಥೆಯು ಈ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಧಾರವಾಡ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಸಂಸದರಿಗೆ ಮನವಿ ಕೂಡ ಸಲ್ಲಿಸಿದೆ. ಜತೆಗೆ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ವಿ. ಸೋಮಣ್ಣ ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಕದ ತಟ್ಟಿದೆ. ಎಲ್ಲರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತ್ತಿದೆ. ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಜನಾಂದೋಲನ ರೂಪಿಸುವುದಾಗಿ ಎಚ್ಚರಿಕೆ ಸಂದೇಶವನ್ನೂ ಸಂಘಟನೆ ನೀಡಿದೆ. ಜತೆಗೆ ಎಂಎಲ್ಸಿ ಸಾಬಣ್ಣ ತಳವಾರ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ.ಒಟ್ಟಿನಲ್ಲಿ ಬಹುವರ್ಷದ ಬೇಡಿಕೆ ಈಡೇರಿಸಬೇಕೆಂಬ ಕೂಗು ಜೋರಾಗಿದೆ. ಇನ್ನಾದರೂ ಕೇಂದ್ರ ಸರ್ಕಾರ ಯೋಜನೆಯತ್ತ ಗಮನ ಹರಿಸುತ್ತದೆಯೇ? ರಾಜ್ಯದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮುತುವರ್ಜಿ ವಹಿಸುವರೇ? ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ!
ಶೇಡಬಾಳ- ಅಥಣಿ-ವಿಜಯಪುರ ರೈಲು ಮಾರ್ಗ ಘೋಷಣೆಯಾಗಿ ದಶಕವೇ ಸಂದಿದೆ. 2010-11ರಲ್ಲೇ ಸಮೀಕ್ಷೆ ಮುಗಿದಿದೆ. ಆದರೆ, ಈ ವರೆಗೂ ಕೆಲಸ ಮಾತ್ರ ಶುರುವಾಗುತ್ತಿಲ್ಲ. ಈ ಯೋಜನೆ ಪ್ರಾರಂಭವಾದರೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗೋವಾ ರಾಜ್ಯಗಳ ಸಂಪರ್ಕ ಮತ್ತಷ್ಟು ಸುಲಭವಾಗುತ್ತದೆ. ಕೃಷಿ ಉತ್ಪನ್ನ ಸೇರಿದಂತೆ ನಾನಾ ವಸ್ತುಗಳ ಸಾಗಾಟಕ್ಕೂ ಹೆಚ್ಚು ಅನುಕೂಲವಾಗಲಿದೆ ಎಂದು ಎಚ್.ಎಂ.ಕೊಪ್ಪದ ಹೇಳಿದರು.