ಸ್ವಾತಂತ್ರ್ಯೋತ್ಸವದ ಆಶೋತ್ತರಗಳು ಈಡೇರಲಿ

| Published : Aug 17 2024, 12:52 AM IST

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ಲಕ್ಷ್ಮೇಶ್ವರ: ದೇಶ ಸ್ವಾತಂತ್ರ್ಯ ಪಡೆದು 78 ವರ್ಷ ಗತಿಸಿದರೂ ದೇಶಕ್ಕೆ ದೊರೆತ ಸ್ವಾತಂತ್ರ್ಯೋತ್ಸವದ ಆಶೋತ್ತರಗಳು ಇಂದಿಗೂ ಸಫಲವಾಗಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಪಣಕ್ಕಿಟ್ಟು ಹೋರಾಟ ಮಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನ ವ್ಯರ್ಥವಾಗಿ ಹೋಗಲು ಬಿಡಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದಿನ ಯುವಕರು ನಮ್ಮ ದೇಶದ ಮುಂದಿನ ನಾಯಕರಾಗಿದ್ದಾರೆ. ಯುವಕರು ಸರಿಯಾದ ಮಾರ್ಗದರ್ಶನ ಪಡೆದುಕೊಂಡು ದೇಶ ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.

ಈ ವೇಳೆ ಪುರಸಭೆಯ ಸದಸ್ಯ ಅಶ್ವಿನಿ ಅಂಕಲಕೋಟಿ, ಸಾಹಿಬ್‌ ಜಾನ್ ಹವಾಲ್ದಾರ, ಪ್ರವೀಣ ಬಾಳಿಕಾಯಿ, ರಾಜಣ್ಣ ಕುಂಬಿ ಸ್ವಾತಂತ್ರ್ಯೋತ್ಸವದ ಮಹತ್ವ ತಿಳಿಸಿಕೊಡುವ ಕಾರ್ಯ ಮಾಡಿದರು.

ಸಭೆಯಲ್ಲಿ ಪುರಸಭೆಯ ಸದಸ್ಯರು, ಪುರಸಭೆಯ ನೌಕರ ವರ್ಗ ಪುರಸಭೆಯ ಉಮಾ ವಿದ್ಯಾಲಯ, ಎಂ.ಎ.ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು. ಹನಮಂತಪ್ಪ ನಂದೆಣ್ಣವರ ಸ್ವಾಗತಿಸಿದರು. ಕಂದಾಯ ಅಧಿಕಾರಿ ಅಜ್ಜನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುದಗಲ್ಲ ವಂದಿಸಿದರು.