ಭಾಷಾಭಿಮಾನ ಮೂಡಿಸುವ ಕಾರ್ಯ ನಿರಂತರವಾಗಿರಲಿ

| Published : Jul 25 2025, 01:13 AM IST

ಸಾರಾಂಶ

ನಾವೆಲ್ಲರೂ ನಮ್ಮ ಮನೆ- ಮನಗಳಲ್ಲಿ ಸಾಹಿತ್ಯದ ಕುರಿತು ಅಪಾರ ಪ್ರೀತಿ ಹಾಗೂ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡದ ನೆಲ, ಜಲ, ಭಾಷೆಯ ಕುರಿತು ಅಭಿಮಾನ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ನಾವೆಲ್ಲರೂ ನಮ್ಮ ಮನೆ- ಮನಗಳಲ್ಲಿ ಸಾಹಿತ್ಯದ ಕುರಿತು ಅಪಾರ ಪ್ರೀತಿ ಹಾಗೂ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಯು.ಕೆ.ಕುಲಕರ್ಣಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಾಹಿತ್ಯ ಪರಿಷತ್‌ನಿಂದ ವಚನಗುಮ್ಮಟ ಡಾ.ಫ.ಗು. ಹಳಕಟ್ಟಿ ದತ್ತಿ ಹಾಗೂ ದಿ.ಸೈಯದ್ ಅಹಮ್ಮದಿಯಾ ವಾರಿಸಮಿಯಾ ಖಾದ್ರಿ ಫೌಂಡೇಶನ್ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಆಡಳಿತ ಭಾಷೆಯಾಗಬೇಕು. ಶಿಕ್ಷಣ ಮಾಧ್ಯಮವಾಗಬೇಕು. ತಾಯಿ ಭಾಷೆ, ನುಡಿ ಭಾಷೆ, ಹಾಗೂ ಮಾತೃಭಾಷೆಯಾಗಿ ಕನ್ನಡದ ಮಹತ್ವವನ್ನು ಇಂದು ನಾವೆಲ್ಲ ಅರಿತುಕೊಳ್ಳಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವಿನೂತನವಾದ ಸಾಹಿತ್ಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳ ಜೀವಾಳವಾಗಿ ಸಾಹಿತ್ಯವನ್ನು ಇಂದು ಇಡೀ ನಾಡಿನಾದ್ಯಂತ ಪಸರಿಸುವ ಮೂಲಕ ವಿಜಯಪುರ ಜಿಲ್ಲೆಯ ಘನತೆ ಹಾಗೂ ಗೌರವವನ್ನು ಹೆಚ್ಚಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಖಾದ್ರಿ ಇನಾಮದಾರ ಮಾತನಾಡಿ, ದತ್ತಿಗೋಷ್ಠಿಗಳು ಅವುಗಳ ಮಹತ್ವವನ್ನು ಅರಿತು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. ಜಿಲ್ಲೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಇಂದು ಜಿಲ್ಲಾ ಕಸಾಪ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಕಾರಣರಾದ ಜಿಲ್ಲಾ ಅಧ್ಯಕ್ಷರಿಗೂ ಹಾಗೂ ಎಲ್ಲ ಪದಾಧಿಕಾರಿಗಳಿಗೂ ಸಹ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಚಿಂತಕಿ ಶರಣಮ್ಮ ಹಾದಿಮನಿ ಮಾತನಾಡಿ, ಡಾ.ಫ.ಗು ಹಳಕಟ್ಟಿ ವಚನದ ತಾಡೋಲೆಗಳನ್ನು ತಲೆಯ ಮೇಲೆ ಹೊತ್ತು ವಚನದ ಕಟ್ಟುಗಳನ್ನು ಸಂಗ್ರಹಿಸಿ ವಚನ ಸಾಹಿತ್ಯದ ಅಮೂಲಾಗ್ರ ಬದಲಾವಣೆ ಕೈಕೊಂಡು ವಚನ ಸಾಹಿತ್ಯದ ಪಿತಾಮಹರೆನಿಸಿಕೊಂಡರು ಎಂದರು.

ಡಾ. ಅಮೀರುದ್ದೀನ ಖಾಜಿ ಮಾತನಾಡಿ, ಸೂಫಿ ಸಂತರು ಸಾಮಾನ್ಯವಾಗಿ ಅತೀಂದ್ರಿಯ ಅನುಭವವನ್ನು ಹೊಂದಿರುವ ವ್ಯಕ್ತಿಗಳು. ಅವರು ತಮ್ಮ ಆಧ್ಯಾತ್ಮಿಕ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಪ್ರೀತಿ ಮತ್ತು ಶಾಂತಿಯ ಸಂದೇಶಗಳನ್ನು ಹರಡಿದ್ದು, ಶರಣರೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದರೆ ಎಂದರು.

ಸಿದ್ದಲಿಂಗಯ್ಯ ಚೌಕಿಮಠ, ವಾಣಿಶ್ರೀ ದೇಶಮುಖ, ಮುಖ್ಯ ಗುರು ರೇಣುಕಾ ಕೊಣ್ಣೂರ, ಜೈನಾಬ ಬಗಲಿ, ಶಶಿಕಲಾ ನಾಯಕ, ಸಾಹಿತಿ ಸಂತೋಷ ಮಲ್ಲನಗೌಡ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಗಳಿಸಿದ ಅನ್ನಪೂರ್ಣ ದೇಶಮುಖ, ಗಂಗವ್ವ ಪೂಜಾರಿ ಹಾಗೂ ವೈಶಾಲಿ ದೇಶಮುಖ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಗೌರವದ ಸನ್ಮಾನ ನೆರವೇರಿಸಿ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.

ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅರ್ಜುನ್ ಶಿರೂರ, ಜಿ.ಎಸ್ ಬಳ್ಳೂರ, ಕಮಲಾ ಮುರಾಳ, ಭಾಗೀರಥಿ ಸಿಂಧೆ, ಶಾಂತಾ ವಿಭೂತಿ, ಶ್ರೀಕಾಂತ ನಾಡಗೌಡ, ವೈ.ಎಚ್ ಲಂಬೂ, ಎಸ್.ಎಲ್ ಇಂಗಳೇಶ್ವರ, ಸಿದ್ರಾಮಪ್ಪ ಜಂಗಮಶೆಟ್ಟಿ, ಕೆ.ಎಸ್.ಹಣಮಾಣಿ, ಟಿ.ಆರ್ ಹಾವಿನಾಳ, ಅಭಿಷೇಕ ದೇಶಮುಖ, ರಮೇಶ ಜಾಧವ, ಬಸನಗೌಡ ಬಿರಾದಾರ, ಅಂಬಾದಾಸ ಜೋಶಿ, ಲತಾ ಗುಂಡಿ, ಗಂಗಮ್ಮ ರಡ್ಡಿ, ಸಿದ್ದಪ್ಪ ಮಾನೆ, ಸತ್ಯಪ್ಪ ಪೂಜಾರಿ, ಸಂತೋಷ ಪಾಟೀಲ, ಫಕ್ರುದ್ದೀನ್ ಹಿರೇಕೊಪ್ಪ, ವೀರೇಶ ಬೆಳ್ಳುಂಡಗಿ, ಶರಣಯ್ಯ ಹಿರೇಮಠ, ಬಾಳಪ್ಪ ಮಾನೆ, ತುಕಾರಾಮ ಗೇರಡೆ, ಅಬ್ದುಲರಜಾಕ ಮುಲ್ಲಾ. ಶಿವಾನಂದ ಲೋಗಾವಿ, ಪುಂಡಲಿಂಗ ಹತ್ತಿ, ಸಿದ್ಧರಾಮ ಬಿರಾದಾರ, ಅಂಬಾದಾಸ ಜೋಶಿ ಮುಂತಾದವರು ಉಪಸ್ಥಿತರಿದ್ದರು.