ಪ್ರಸಾದ್‌ ಕಾಂಚನ್‌ಗೆ ಶಾಸಕರ ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ

| Published : Jul 25 2025, 01:13 AM IST

ಪ್ರಸಾದ್‌ ಕಾಂಚನ್‌ಗೆ ಶಾಸಕರ ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನದೇ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಪ್ರಸಾದ್ ಕಾಂಚನ್‌ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ: ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕರ ವಿರುದ್ಧ ಅಸಂಬದ್ಧ, ಬಾಲಿಶ ಹೇಳಿಕೆ ನೀಡುತ್ತಿರುವ, ತನ್ನದೇ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಪ್ರಸಾದ್ ಕಾಂಚನ್‌ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಸಾದ್ ಕಾಂಚನ್ ಅವರನ್ನು ಉಡುಪಿಯ ಜನತೆ ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸಿದರೂ ಆ ಸೋಲಿನ ಹತಾಶೆಯಿಂದ ಇನ್ನೂ ಹೊರಬರಲಾಗದ ಪ್ರಸಾದ್ ಕಾಂಚನ್ ಕೇವಲ ತನ್ನ ನಾಯಕರನ್ನು ಖುಷಿಪಡಿಸುವ ಉದ್ದೇಶದಿಂದ ಶಾಸಕರನ್ನು ಟೀಕಿಸುವುದನ್ನೇ ದಿನಚರಿ ಮಾಡಿಕೊಂಡಿರುವುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಆಸ್ಕರ್ ಫರ್ನಾಂಡೀಸ್, ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಗೋಪಾಲ ಭಂಡಾರಿಯವರಂತಹ ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ಸಿದ್ಧಾಂತ, ವಿಚಾರಗಳಲ್ಲಿ ರಾಜಿಯಾಗದೇ ತಮ್ಮ ರಾಜಕೀಯ ವಿರೋಧಿಗಳಿಗೆ ಪ್ರಬುದ್ಧವಾಗಿ ಟೀಕೆ ಟಿಪ್ಪಣಿ ಮಾಡುವ ಮೂಲಕ ತಮ್ಮ ಘನತೆ ಮೆರೆಯುತ್ತಿದ್ದರು. ಆದರೆ ಪ್ರಸಾದ್ ಕಾಂಚನ್ ಮಾತ್ರ ತಮ್ಮ ಹೇಳಿಕೆಗಳ ಮೂಲಕ ತಮ್ಮದೇ ಪಕ್ಷಕ್ಕೆ ಮುಜುಗರ ತರುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಟೀಕಿಸಿದ್ದಾರೆ.ಪ್ರಸಾದ್ ಕಾಂಚನ್ ಗೆ ಮನೆಗೆ ಮುತ್ತಿಗೆ ಹಾಕಲು ಉತ್ಸಾಹವಿದ್ದರೆ ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಅಪರೂಪದ ಅತಿಥಿಯಂತೆ ಆಗಮಿಸಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕಲಿ ಎಂದಿದ್ದಾರೆ.ಉಡುಪಿಯ ಜನತೆಯ ಸಮಸ್ಯೆಗಳ ಬಗ್ಗೆ ಪ್ರಸಾದ್ ಕಾಂಚನ್ ಅವರಿಗೆ ನೈಜ ಕಾಳಜಿ ಇದ್ದಲ್ಲಿ ತಮ್ಮದೇ ರಾಜ್ಯ ಸರ್ಕಾರದ ಸಚಿವರಿಗೆ ತಿಳಿಸಿ, ಪರಿಹಾರ ರೂಪಿಸಲು ಮುಂದಾಗುವುದು ಉತ್ತಮ. ಕೇವಲ ಪ್ರಚಾರದ ತೆವಲಿಗೆ ಇಂತಹ ಹತಾಶ ವೈಯುಕ್ತಿಕ ಟೀಕೆಗಳನ್ನು ಮಾಡುವುದರಿಂದ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ ಎಂದು ಪ್ರಭಾಕರ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.