ಈ ಬಾರಿ ಫಲಿತಾಂಶವನ್ನು ಇನ್ನೂ ಹೆಚ್ಚಿನ ಸುಧಾರಣೆ ಮಾಡಿಕೊಳ್ಳುವ ಜೊತೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಿಸುವುದರ ಮೂಲಕ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಸಂಬಂಧಪಟ್ಟ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಾರವಾರ

ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದಿದ್ದು, ಈ ಬಾರಿ ಫಲಿತಾಂಶವನ್ನು ಇನ್ನೂ ಹೆಚ್ಚಿನ ಸುಧಾರಣೆ ಮಾಡಿಕೊಳ್ಳುವ ಜೊತೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಿಸುವುದರ ಮೂಲಕ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಸಂಬಂಧಪಟ್ಟ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲಾ ಶಾಲೆಗಳ ಮುಖ್ಯಾಧ್ಯಾಪಕರು, ತಾಲೂಕು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾದರೆ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಸಿದ್ದಗೊಳಿಸುವ ಜವಾಬ್ದಾರಿ ಶಿಕ್ಷಕರದ್ದು, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವನ್ನು ರೂಪಿಸುವ ಅತೀ ದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಕರು, ತಮ್ಮ ಎಲ್ಲಾ ಅನುಭವವನ್ನು ಧಾರೆಯೆರೆದು, ತಮ್ಮ ಶಾಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಗೆ ಫಲಿತಾಂಶದಲ್ಲಿ ರ‍್ಯಾಂಕ್ ಬರುವುದು ಮುಖ್ಯವಲ್ಲ, ಆದರೆ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಪ್ರತಿಯೊಬ್ಬರೂ ಉತ್ತೀರ್ಣರಾಗಬೇಕು, ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಮೊದಲ ಪ್ರಿಪರೇಟರಿ ಫಲಿತಾಂಶವನ್ನು ವಿಶ್ಲೇಷಣೆ ಮಾಡಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಅವರು ಉತ್ತೀರ್ಣರಾಗುವಂತೆ ಮಾಡಬೇಕು ಎಂದರು.

ಶಾಲೆಗಳಿಗೆ ನಿರಂತರವಾಗಿ ಗೈರಾಗುತ್ತಿರುವ ವಿದ್ಯಾರ್ಥಿಗಳ ಕುರಿತಂತೆ ವಿಶೇಷ ಗಮನಹರಿಸಿ ವೈಯಕ್ತಿವಾಗಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರ ಮೂಲಕ ಮನೆ ಭೇಟಿ ನೀಡಿ, ಪೋಷಕರ ಮತ್ತು ವಿದ್ಯಾರ್ಥಿಯ ಮನವೊಲಿಸಿ ಶಾಲೆಗೆ ಬರುವಂತೆ ಮಾಡಿ, ಅವರನ್ನು ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ಸಿದ್ದಪಡಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಡಯಟ್ ಮೂಲಕ ಸಿದ್ದಪಡಿಸಿರುವ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿಸುವಂತೆ ತಿಳಿಸಿದರು.

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾಡಳಿತದ ಮೂಲಕ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಕಳೆದ ಬಾರಿಯಂತೆ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಪತ್ರಗಳನ್ನು ಬರೆಯಲಾಗುವುದು. ಪ್ರೇರಣಾ ಶಿಬಿರಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲಿದ್ದು, ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲೆಯು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕಳೆದ ಬಾರಿಗಿಂತಲೂ ಉತ್ತಮ ಸಾಧನೆ ತೋರಬೇಕಿದ್ದು, ಈ ಬಾರಿ ನಮ್ಮ ಗುರಿ ಮೊದಲನೇ ಸ್ಥಾನವಾಗಬೇಕು. ಶಾಲಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹೆಚ್ಚುವರಿ ಸಮಯವನ್ನು ಮೀಸಲಿಟ್ಟು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯ ಬೋಧಿಸಬೇಕು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ಪ್ರಶ್ನೆಗೂ ಉತ್ತರಿಸಬೇಕು, ಯಾವುದೇ ಪ್ರಶ್ನೆಗೂ ಉತ್ತರವನ್ನು ಖಾಲಿ ಬಿಡದೇ, ಸಾಧ್ಯವಾದಷ್ಟು ಉತ್ತರ ಬರೆಯಲು ಪ್ರಯತ್ನಿಸುವ ಬಗ್ಗೆ ಶಿಕ್ಷಕರು ತಿಳಿಸಬೇಕು. ಫಲಿತಾಂಶ ವೃದ್ಧಿಗೆ ಈಗಾಗಲೇ ರೂಪಿಸಿರುವ 29 ಅಂಶಗಳ ಅನುಷ್ಠಾನ ಮಾತ್ರವಲ್ಲದೇ, ಶಿಕ್ಷಕರು ಮತ್ತು ಪೋಷಕರು ಹಾಗೂ ಅಧಿಕಾರಿಗಳು ಸಂಘಟಿತ ಪ್ರಯತ್ನದ ಮೂಲಕ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕಿ ಲತಾ ನಾಯ್ಕ, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಹಲವು ಕ್ರಮ ಕೈಗೊಳ್ಳಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಎಸ್.ಎಸ್.ಎಲ್.ಸಿ ಪಠ್ಯವಸ್ತು ಪೂರ್ಣಗೊಳಿಸಲಾಗಿದೆ ಎಂದರು.

ಪ್ರತಿ15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ, ವಿದ್ಯಾರ್ಥಿಗಳ ಪ್ರಗತಿಯ ವಿವರಗಳನ್ನು ನೀಡಲಾಗುತ್ತಿದೆ. ನಿರಂತರ ಗೈರು ಹಾಜರಾಗುತ್ತಿದ್ದ ವಿದ್ಯಾರ್ಥಿಗಳ ಮನೆ ಭೇಟಿ ನೀಡಿ ಗೈರಾಗುವುದನ್ನು ತಡೆಯಲಾಗಿದೆ. ಶಿಕ್ಷಕರಿಗೆ ವಿಶೇಷ ಸಮಾಲೋಚನಾ ಸಭೆ ನಡೆಸಿ ತರಬೇತಿ ನೀಡಲಾಗಿದೆ. ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಮಂಡಳಿಯಿಂದ ಆನ್‌ಲೈನ್‌ನಲ್ಲಿ ನೀಡುವ ಪ್ರಶ್ನೆ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಹೆಚ್ಚು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ ಎಂದರು.

ಡಯಟ್ ಪ್ರಾಂಶುಪಾಲ ಎನ್.ಆರ್. ಹೆಗಡೆ ಮತ್ತಿತರರು ಇದ್ದರು.