ಮಾಗಡಿ: ಗ್ರಾಮೀಣರಿಗೆ ಮತ್ತು ರೈತರಿಗೆ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸೆ ನೀಡುವ ಉದಾತ್ತ ಉದ್ದೇಶದಿಂದ ವೈಭವ ಕಣ್ಣಿನ ಆಸ್ಪತ್ರೆ ತೆರೆಯಲಾಗಿದೆ ಎಂದು ನೆಲಮಂಗಲದ ಶಿವಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ರಮಣಾನಂದನಾಥ ಸ್ವಾಮೀಜಿ ತಿಳಿಸಿದರು

ಮಾಗಡಿ: ಗ್ರಾಮೀಣರಿಗೆ ಮತ್ತು ರೈತರಿಗೆ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸೆ ನೀಡುವ ಉದಾತ್ತ ಉದ್ದೇಶದಿಂದ ವೈಭವ ಕಣ್ಣಿನ ಆಸ್ಪತ್ರೆ ತೆರೆಯಲಾಗಿದೆ ಎಂದು ನೆಲಮಂಗಲದ ಶಿವಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ರಮಣಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ವೈಭವ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಿಗೆ ಅಲೆದು ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳುತ್ತಿದ್ದ ಗ್ರಾಮೀಣರಿಗೆ, ತಮ್ಮದೇ ಭಾಗದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂಬ ಧ್ಯೇಯದೊಂದಿಗೆ ಈ ಕಣ್ಣಿನ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಈ ನೇತ್ರ ತಂಡಕ್ಕೆ ಈಗಾಗಲೇ ನೆಲಮಂಗಲದಲ್ಲಿ ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ಕಣ್ಣಿನ ಆಸ್ಪತ್ರೆ ನಡೆಸಿದ ಸುದೀರ್ಘ ಅನುಭವವಿದೆ ಎಂದು ಶ್ರೀಗಳು ತಿಳಿಸಿದರು,

ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ್ಯ ಮಾತನಾಡಿ, ನಗರ ಪ್ರದೇಶಗಳ ದೊಡ್ಡ ಆಸ್ಪತ್ರೆಗಳಲ್ಲಿ 600-1000 ರುಪಾಯಿಗಳವರೆಗೆ ಇರುವ ಕನ್ಸಲ್ಟೇಷನ್ ಶುಲ್ಕವನ್ನು ಈ ಆಸ್ಪತ್ರೆಯಲ್ಲಿ ಕೇವಲ 200 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ರೈತರು ಮತ್ತು ಬಡವರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯಿಂದ ಬಡವರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಧನಂಜಯ್ಯ ಹೇಳಿದರು.

ಆಸ್ಪತ್ರೆ ಮುಖ್ಯಸ್ಥ ಕೆ.ಟಿ.ತಿಮ್ಮೇಗೌಡ ಮಾತನಾಡಿ,ಗ್ರಾಮೀಣರಿಗೆ ಕಣ್ಣಿಗೆ ಸಂಬಂಧಿಸಿದ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆ, ಓಪಿಡಿ ಮತ್ತು ಲೇಸರ್ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಕಣ್ಣಿನ ಪೊರೆ ಆಪರೇಷನ್ ಮಧುಮೇಹ ಸಂಬಂಧಿತ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೃಷಿ ಕಾಯಕದಲ್ಲಿ ತೊಡಗಿರುವ ರೈತರಿಗೆ ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತವರಿಗೆ ತಕ್ಷಣದ ಚಿಕಿತ್ಸೆ ಇಲ್ಲಿ ಸಿಗಲಿದೆ. ಲೇಟೆಸ್ಟ್ ತಂತ್ರಜ್ಞಾನವಾದ ಲೇಸರ್ ಮತ್ತು ಹೊಲಿಗೆ ರಹಿತ ಶಸ್ತ್ರಚಿಕಿತ್ಸೆ ಲಭ್ಯವಿದ್ದು, ಆಪರೇಷನ್ ಆದ 5-7 ದಿನಗಳಲ್ಲೇ ರೈತರು ತಮ್ಮ ಕೆಲಸಕ್ಕೆ ಮರಳಬಹುದು ಎಂದು ತಿಮ್ಮೇಗೌಡ ಹೇಳಿದರು.

ಇದೇ ವೇಳೆ ಡಾ.ಮಾನಸ, ಡಾ.ಅಪೂರ್ವ, ಪ್ರತಿಭಾ. ಆನಂದ್, ನಾಗೇಶ್, ವೇಣು, ಮತ್ತೀತರರು ಇದ್ದರು.