ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಸರ್ವ ಕ್ಷೇತ್ರದಲ್ಲೂ ಸಮಾನ ಅವಕಾಶ ಪಡೆದು ಸ್ವಾವಲಂಬನೆಯಿಂದ ಬದುಕುವ ಛಲ ಪ್ರತಿಯೊಬ್ಬ ಮಹಿಳೆಯಲ್ಲಿ ಬರಬೇಕು ಎಂದು ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು. ನಗರದ ಬಂಜಾರಾ ಸಂತ್ ಸೇವಾಲಾಲ್ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಬಂಜಾರಾ ಗೋರಬಾಯಿ ಟೋಳಿ ಸಮೂಹ ಸಂಸ್ಥೆಯ ಉದ್ಘಾಟನೆ ಮತ್ತು ಮಹಿಳೆಯರ ಫ್ಯಾಷನ್ ಶೋ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿಯೂ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಉನ್ನತ ಸ್ಥಾನ ಮಾನ ಪಡೆದುಕೊಳ್ಳಬೇಕು ಎಂದು ಹೇಳಿದರು.ಉಪನ್ಯಾಸಕಿ ಪಿ.ಅನುಪಮಾ ಭಾರತೀಯ ಸ್ತ್ರೀ ಭವ್ಯ ಪರಂಪರೆಯ ದಾರಿಗಳ ಬಗ್ಗೆ ಮಾತನಾಡಿದರು. ಬದುಕಿನ ದಿಕ್ಕಿನಲ್ಲಿ ಸಾಗುವಾಗ ಹಲವಾರು ಸವಾಲುಗಳು ಬರುತ್ತವೆ. ಅವುಗಳನ್ನ ಮೆಟ್ಟಿ ನಿಂತು ಸಾಧನೆ ಮಾಡಿದಾಗ ಮಾತ್ರ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದರು.
ಯುವ ಸಾಹಿತಿ ಸಂತೋಷಕುಮಾರ ನಿಗಡಿ ಮಾತನಾಡಿ, ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಇಂದು ಪ್ರತಿ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆ ಬಲದಿಂದ ಉನ್ನತ ಶ್ರೇಣಿಯಲ್ಲಿದ್ದಾರೆ. ನಮ್ಮ ವ್ಯವಸ್ಥೆ ಇನ್ನಷ್ಟು ಮಹಿಳಾ ಸಮಾಜವನ್ನು ಬೆಂಬಲಿಸಿ ಸ್ಫೂರ್ತಿ ತುಂಬಬೇಕಾಗಿದೆ ಎಂದು ಸಲಹೆ ನೀಡಿದರು.ಹಿರಿಯ ಸಾಹಿತಿ ಇಂದೂಮತಿ ಲಮಾಣಿ ಮಾತನಾಡಿ, ಸಮಾನ ಮನಸ್ಕರು ಕೂಡಿ ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಮತ್ತು ಸಾಧಕರ ಚಿಂತೆನೆ ಮತ್ತು ಸಾಮಾಜಿಕ ಸುಧಾರಣೆಗೆ ಈ ವೇದಿಕೆ ಸಿದ್ದವಾಗಿದೆ ಎಂದರು.
ಅಧ್ಯಕ್ಷತೆ ಸುನೀತಾ ನಾರಾಯಣ ಪ್ರಸಾದ ದುಬೆ ವಹಿಸಿದ್ದರು, ಶಾರದಾ ನಾಯಕ, ವಿಶಾಲಾಕ್ಷಿ ಅರವಿಂದ ಸಿಂದಗಿ, ಶಾಂತಾ ಪಾಟೀಲ, ಸುಧಾ ಬಿಜ್ಜರಗಿ, ಶಾರದಾ ಲಮಾಣಿ, ರುಕ್ಮಿಣಿ ಜೆ ಚವಾಣ್, ಬಿ.ಡಿ ಚವಾಣ್ ಮುಂತಾದವರು ಇದ್ದರು.