ಬಾಳಿನಲ್ಲಿ ದುಃಖ ಬೇಡ, ಸುಖ, ಶಾಂತಿ, ನೆಮ್ಮದಿಯ ಬದುಕು ಬೇಕೆಂದರೆ ಉದಾತ್ತ ಚಿಂತನೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಹೊನ್ನಾವರ
ಬಾಳಿನಲ್ಲಿ ದುಃಖ ಬೇಡ, ಸುಖ, ಶಾಂತಿ, ನೆಮ್ಮದಿಯ ಬದುಕು ಬೇಕೆಂದರೆ ಉದಾತ್ತ ಚಿಂತನೆ ಮಾಡಬೇಕು ಎಂದು ದೈವಜ್ಞ ಬ್ರಾಹ್ಮಣ ಮಠಾಧೀಶ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.ಪಟ್ಟಣದ ದುರ್ಗಾಕೇರಿಯ ಶ್ರೀ ವಿಠ್ಠಲ ರುಖುಮಾಯಿ ದೇವಾಲಯದ ಸಭಾಭವನದಲ್ಲಿ ತಾಲೂಕಾ ದೈವಜ್ಞ ದರ್ಶನ ಸಮಾರೋಪ ಕಾರ್ಯಕ್ರಮದ ದೀಪ ಬೆಳಗಿಸಿ ಆಶೀರ್ವಚನ ನೀಡಿದರು.
ನಮ್ಮ ಹಿರಿಯರು ಎಲ್ಲರೂ ಸುಖ, ಶಾಂತಿಯಿಂದ ಬಾಳಬೇಕು ಎಂದು ಬಯಸಿದ್ದರು. ನಾನು ನನ್ನ ಕುಟುಂಬ ಸುಖವಾಗಿ ಬಾಳಿದರೆ ಸಾಲದು. ಸಮಾಜದ ಅಸಹಾಯಕರಿಗೂ ಸಹಾಯ ಮಾಡಿದರೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ನಮ್ಮ ದೋಷ ನಾವು ಸುಧಾರಿಸಲು ಪ್ರಯತ್ನಿಸಬೇಕು. ಅಹಂಕಾರ ದುರ್ಗತಿಗೆ ಕಾರಣವಾಗುತ್ತದೆ. ಜ್ಞಾನವಂತರಾಗಲು ಪ್ರಯತ್ನಿಸಬೇಕು. ದೇವರ ಆರಾಧನೆ,ನಾಮಸ್ಮರಣೆ,ಗುರು ಹಿರಿಯರಿಗೆ ಭಕ್ತಿ, ಗೌರವ ನೀಡಿದಾಗ ಸುಖದ ದಾರಿ ಕಾಣುತ್ತದೆ ಎಂದರು.ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಯವರು ಆಶೀರ್ವಚನ ನೀಡಿ, ಸಮಾಜದ ಹಿರಿಯರು, ಮಾತೆಯರು ಶಿರಸ್ಥಾನ ಧರಿಸಿ, ಕೆಂಪು ಶಾಲು ಧರಿಸಿ ಶ್ರದ್ಧಾಭಕ್ತಿಯಿಂದ ಭಾಗಿಯಾಗಿರುವುದು ನಿಮ್ಮ ಹೃದಯವೈಶಾಲ್ಯತೆಯ ಪ್ರತೀಕವಾಗಿದೆ. ಮಾ. 8ರಂದು ಹೊಸಕೇರಿಯಲ್ಲಿ ಮಹಾರುದ್ರಯಾಗ ಸಂಕಲ್ಪಿಸಲಾಗಿದೆ ಎಂದರು.
ಸಭಾಕಾರ್ಯಕ್ರಮದಲ್ಲಿ ದೈವಜ್ಞ ವಾಹಿನಿಯ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಶೇಟ್ ಮಾತನಾಡಿದರು.ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದ ಅಧ್ಯಕ್ಷ ಮಾದೇವ ಶೇಟ್, ದೈವಜ್ಞ ಮಠದ ಉಪಾಧ್ಯಕ್ಷ ಆರ್.ಎಸ್. ರಾಯ್ಕರ ಉಪಸ್ಥಿತರಿದ್ದರು. ಸಚಿನ ಶೇಟ ಸ್ವಾಗತಿಸಿದರು. ಸಂಜಯ ಶೇಟ ಪ್ರಾಸ್ತಾವಿಕ ಮಾತನಾಡಿದರು. ಗಣೇಶ ಶೇಟ ವಂದಿಸಿದರು. ಕೃಷ್ಣಕುಮಾರ ಶೇಟ, ದಿವಾಕರ ಕಾರ್ಯಕ್ರಮ ನಿರೂಪಿಸಿದರು.
ಸಮಾಜ ಬಾಂಧವರು ಬಿಳಿ ಶರ್ಟ್, ಬಿಳಿ ಪಂಚೆ, ಕೆಂಪು ಶಾಲು, ಬಿಳಿ ಶಿರಸ್ಥಾನ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಹಸಿರು ಸೀರೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸುಗ್ಗಿ ಕುಣಿತ, ಯಕ್ಷಗಾನ ವೇಷ, ನೃತ್ಯ, ಮಹಿಳೆಯರ ಕೋಲಾಟ, ಚಂಡೆವಾದ್ಯ ಗಮನ ಸೆಳೆಯಿತು.