ಸಾರಾಂಶ
ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ಶಕ್ತಿ, ಉತ್ಸಾಹ, ಹೊಸ ಕಲ್ಪನೆಗಳು ಮತ್ತು ಧೃಢಸಂಕಲ್ಪವೇ ನಮ್ಮ ಭವಿಷ್ಯವನ್ನು ರೂಪಿಸುತ್ತವೆ. ಆದ್ದರಿಂದ ನಮ್ಮ ಕನಸುಗಳು ಕೇವಲ ಕನಸುಗಳಾಗಿಯೇ ಉಳಿಯದೆ ಗುರಿಯಾಗಿ, ನಂತರ ಸಾಧನೆಯಾಗಿ ಬದಲಾಗಬೇಕು, ಯುವಕರೇ ಸಮಾಜದ ಬದಲಾವಣೆಯ ಶಿಲ್ಪಿಗಳು ಎಂದು ನಟ, ನಿರ್ದೇಶಕ ಮನು ಯು. ಬಿ. ಹೇಳಿದರು.ಅವರು ಹಾಸನದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಕ್ತಿ ಮತದಾನದ ಮೂಲಕವೇ ಜನರ ಕೈಯಲ್ಲಿ ಇರುತ್ತದೆ. ಯುವಕರು ಶಕ್ತಿಶಾಲಿಗಳು, ಉತ್ಸಾಹಿಗಳು, ಹೊಸ ಕಲ್ಪನೆಗಳನ್ನು ಹೊಂದಿರುವವರು. ಅವರು ತಮ್ಮ ಮತದಾನದ ಹಕ್ಕನ್ನು ಜಾಗೃತಿಯಿಂದ, ಹೊಣೆಗಾರಿಕೆಯಿಂದ ಉಪಯೋಗಿಸಿದರೆ, ಸ್ವಚ್ಛ, ಜವಾಬ್ದಾರಿಯುತ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವ ಆಡಳಿತವನ್ನು ತಂದುಕೊಡಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಆರ್. ಶಂಕರೇಗೌಡ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಯುವಕರ ಪಾತ್ರ ಮತ್ತು ಅದಕ್ಕೂ ಮೀರಿದ ಪ್ರಯತ್ನಗಳು ಎಂಬದು ೨೦೨೫ರ ಅಂತಾರಾಷ್ಟ್ರೀಯ ಯುವ ದಿನದ ಉದ್ಘೋಷ ವಾಖ್ಯ. ನಾವು ಜೀವನದಲ್ಲಿ ಸಾಧಿಸಬೇಕಾದರೆ ಆರೋಗ್ಯವಂತರಾಗಿರುವುದು ಬಹಳ ಮುಖ್ಯ. ಆದ್ದರಿಂದ ಸಾಧಿಸುವ ಛಲವಿರುವವರು ದೈಹಿಕವಾಗಿ ಸಧೃಢರಾಗಿರಬೇಕು ಎಂದು ತಿಳಿಸಿದರು.ನಾವು ಕಾಣುವ ಕನಸು ನಿದ್ದೆ ಬಾರದಿರುವ ತರಹ ಇರಬೇಕು. ಆ ಕನಸು ನಮ್ಮನ್ನು ರಾತ್ರಿ- ಹಗಲು ಚಿಂತನೆ, ಶ್ರಮ, ಪ್ರಯತ್ನಗಳಿಂದಲೇ ಬದುಕುವಂತೆ ಮಾಡಬೇಕು. ಅದನ್ನು ಸಾಧಿಸುವವರೆಗೆ ನಮ್ಮ ಮನಸ್ಸಿಗೆ ನೆಮ್ಮದಿ ಸಿಗಬಾರದು. ಇಂತಹ ಕನಸುಗಳೇ ನಮ್ಮ ಜೀವನದ ಮಾರ್ಗವನ್ನು ಬದಲಾಯಿಸಿ ಯಶಸ್ಸಿನತ್ತ ಕರೆದೊಯ್ಯುತ್ತವೆ ಎಂದರು.
ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃಧ್ಧಿ ಅಧಿಕಾರಿ ಗಂಗರಾಜು ಉಪಸ್ಥಿತರಿದ್ದರು.