2025- 26ರಲ್ಲಿ ಎಲ್ಲಾ ಮೂಲಗಳಿಂದ ಕ್ರೋಢೀಕರಿಸಿದ ಸಂಪನ್ಮೂಲ 871.54 ಕೋಟಿ ರು. ಬಂದಿದ್ದು, 2026- 27ನೇ ಸಾಲಿಗೆ ವಿವಿಧ ಮೂಲಗಳಿಂದ 799.90 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಕಳೆದ ವರ್ಷ 548.49 ಕೋಟಿ ರು. ವೆಚ್ಚ ಮಾಡಲಾಗಿದೆ. ಮುಂದಿನ ಸಾಲಿನಲ್ಲಿ 579.18 ಕೋಟಿ ರು. ವೆಚ್ಚ ಮಾಡಲು ಪ್ರಸ್ತಾಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅಭಿವೃದ್ಧಿ ಪ್ರಾಧಿಕಾರವು 2026- 27ನೇ ಸಾಲಿಗೆ 220.73 ಕೋಟಿ ಉಳಿತಾಯ ಬಜೆಟ್ ಮಂಡಿಸಿದೆ. ಯಾವುದೇ ಹೊಸ ಯೋಜನೆಗಳು ಇಲ್ಲದೆ ಹಳೆಯ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಬಜೆಟ್ ಇದಾಗಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಆಗಿ ಪರಿವರ್ತನೆಗೊಂಡ ಬಳಿಕ ಸೋಮವಾರ ಮೊದಲ ಬಜೆಟ್ ಅನ್ನು ಎಂಡಿಎ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಮಂಡಿಸಿದರು.
2025- 26ರಲ್ಲಿ ಎಲ್ಲಾ ಮೂಲಗಳಿಂದ ಕ್ರೋಢೀಕರಿಸಿದ ಸಂಪನ್ಮೂಲ 871.54 ಕೋಟಿ ರು. ಬಂದಿದ್ದು, 2026- 27ನೇ ಸಾಲಿಗೆ ವಿವಿಧ ಮೂಲಗಳಿಂದ 799.90 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಕಳೆದ ವರ್ಷ 548.49 ಕೋಟಿ ರು. ವೆಚ್ಚ ಮಾಡಲಾಗಿದೆ. ಮುಂದಿನ ಸಾಲಿನಲ್ಲಿ 579.18 ಕೋಟಿ ರು. ವೆಚ್ಚ ಮಾಡಲು ಪ್ರಸ್ತಾಪಿಸಲಾಗಿದೆ.ವಸತಿ ಬಡಾವಣೆ ನಿರ್ಮಾಣಕ್ಕೆ 460 ಕೋಟಿ:
ಈ ಬಾರಿಯೂ ವಸತಿ ಬಡಾವಣೆಯನ್ನು ರೈತರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ 460 ಕೋಟಿ ರು. ಕಾಯ್ದಿರಿಸಲಾಗಿದೆ. ಬೊಮ್ಮೇನಹಳ್ಳಿ, ಕಮರಹಳ್ಳಿ, ಇತರ ಗ್ರಾಮಗಳಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು ಯೋಜಿಸಲಾಗಿದೆ. ಇದರಿಂದ 15 ಸಾವಿರ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಆಲೋಚಿಸಲಾಗಿದೆ.ಭೂಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಪಡಿಸದೇ ಇರುವ ವಿಜಯಶ್ರೀಪುರ ಮತ್ತು ಇತರ ಗ್ರಾಮಗಳಲ್ಲಿ ಸುಮಾರು 90 ಎಕರೆ ಪ್ರದೇಶದಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಲು ಯೋಜಿಸಿದ್ದು, ಈ ಕಾಮಗಾರಿಗಾಗಿ 20 ಕೋಟಿ ರು. ಮೀಸಲಿಡಲಾಗಿದೆ.
ಎಂಡಿಎ ಕಟ್ಟಡ ನವೀಕರಣಕ್ಕೆ 15 ಕೋಟಿ:ಎಂಡಿಎ ಕಟ್ಟಡ ಹಳೇಯದಾಗಿದ್ದು, ಇದರ ನವೀಕರಣಕ್ಕಾಗಿ 15 ಕೋಟಿ ರು. ಅನುದಾನ ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲವಾಗುವಂತೆ ರಸ್ತೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲು 10.50 ಕೋಟಿ ರು. ಕಾಯ್ದಿರಿಸಲಾಗಿದೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು, ಮಲಿನ ನೀರು ಮಾರ್ಗ, ಜಂಕ್ಷನ್ ಅಭಿವೃದ್ಧಿ, ಬೀದಿ ದೀಪ, ರಸ್ತೆ, ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ 71.23 ಕೋಟಿ ರು. ಒದಗಿಸಲು ನಿರ್ಧರಿಸಲಾಗಿದೆ. ಹಾಗೆಯೇ, ವಾಣಿಜ್ಯ ಸಂಕೀರ್ಣ, ಕ್ರೀಡಾ ಸಂಕೀರ್ಣ, ಅಭಿವೃದ್ಧಿ ಕಾಮಗಾರಿಗಳಿಗೆ 31.90 ಕೋಟಿ ರು. ಕಾಯ್ದಿರಿಸಲಾಗಿದೆ.
ಕೆರೆ ಪುನರುಜ್ಜೀವನಕ್ಕೆ 64.21 ಕೋಟಿ:ಇಲವಾಲ ಗ್ರಾಮದ ಕೆರೆ, ಸಾಹುಕಾರಹುಂಡಿ ಕೆರೆ, ಬೊಮ್ಮೇನಹಳ್ಳಿ ಕೆರೆ, ಕೂರ್ಗಳ್ಳಿ ಕಲ್ಯಾಣ, ಭುಗತಹಳ್ಳಿ, ಚಿಕ್ಕಹಳ್ಳಿ, ನಾಡನಹಳ್ಳಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಮಾಡಲು 64.21 ಕೋಟಿ ರು. ಕಾಯ್ದಿರಿಸಲಾಗಿದೆ.
ಹೊರ ಪರಿಧಿ ರಸ್ತೆ ನಿರ್ಮಾಣ ಕಾಮಗಾರಿಯ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರು ಉದ್ದೇಶಿಸಲಾಗಿದೆ. ಇದಕ್ಕಾಗಿ 7.43 ಕೋಟಿ ರು. ಅನುದಾನ ಮೀಸಲಿಡಲಾಗಿದೆ.ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕಬಿನಿ ನೀರು ಸರಬರಾಜು ಯೋಜನೆಯ 2ನೇ ಹಂತದ ಉನ್ನತೀಕರಣ ಕಾಮಗಾರಿ ಕೈಗೊಳ್ಳಲು ನಿರ್ಣಯಿಸಲಾಗಿದ್ದು, 3.50 ಕೋಟಿ ರು. ಅನುದಾನ ಕಲ್ಪಿಸಲಾಗಿದೆ.
799 ಕೋಟಿ ಆದಾಯ ನಿರೀಕ್ಷೆ:ಈ ಬಾರಿ 799.90 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಅಭಿವೃದ್ಧಿ ಶುಲ್ಕ, ಸೆಸ್, ಸೇವಾ ಶುಲ್ಕ, ನೀರಿನ ಸೇವಾ ಶುಲ್ಕ, ಸರ್ ಚಾರ್ಜ್ ಸೇರಿದಂತೆ ವಿವಿಧ ಮೂಲಗಳಿಂದ 227.30 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಕೆರೆ ಪುನರುಜ್ಜೀವನ ಶುಲ್ಕದಿಂದ 6.60 ಕೋಟಿ ರು., ವಿಧಿಸಿದ ಮತ್ತು ಸಂಗ್ರಹಿಸಿದ ಕರ, ಉಪಕರಗಳಿಂದ 98.81 ಕೋಟಿ ರು. ಆದಾಯ ಬರುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.
ನಿವೇಶನ ಹಂಚಿಕೆ, ವಾಣಿಜ್ಯ, ಬಿಡಿ, ಮೂಲೆ ನಿವೇಶನಗಳ ಹರಾಜಿನಿಂದ, ಸಿಎ ನಿವೇಶನಗಳ ಹಂಚಿಕೆ, ವಾಣಿಜ್ಯ ಸಂಕೀರ್ಣ, ಭೂಮಿ, ಕಟ್ಟಡದ ಬಾಡಿಗೆಯಿಂದ 407.75 ಕೋಟಿ ರೂ. ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ನಿಶ್ಚಿತ ಠೇವಣಿ ರೂಪದಲ್ಲಿ ಬ್ಯಾಂಕ್‌ಗಳಲ್ಲಿ ಇಡುಗಂಟು ಇಟ್ಟಿರುವ ಮೂಲ, ವಾರ್ಷಿಕ ಬಡ್ಡಿ ಸೇರಿದಂತೆ 215.84 ಕೋಟಿ ರೂ. ಆದಾಯ ಬರಲಿದೆ.ವೆಚ್ಚದ ಲೆಕ್ಕಾಚಾರ:
ಆಡಳಿತ, ಅಭಿವೃದ್ಧಿ ಕಾಮಗಾರಿಗಳಿಗೆ 579.18 ಕೋಟಿ ರು., ಆಡಳಿತ ವೆಚ್ಚ, ಸಿಬ್ಬಂದಿ ವೇತನ, ಕಾನೂನು ವೆಚ್ಚ, ಹೊರಗುತ್ತಿಗೆ ನೌಕರರ ವೇತನ, ಕಚೇರಿ ಕಟ್ಟಡ ನಿರ್ವಹಣೆಗಳಿಗೆ 74.95 ಕೋಟಿ ರು. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಉದ್ಯಾನಗಳು, ಬಯಲು ಸ್ಥಳಗಳು, ರಸ್ತೆ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ 10.50 ಕೋಟಿ ರು., ನೀರು ಸರಬರಾಜು, ಯುಜಿಡಿ, ಜಂಕ್ಷನ್‌ಗಳ ಸುಧಾರಣೆ, ಬೀದಿ ದೀಪಗಳಿಗಾಗಿ 156.68 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.ಕೆರೆಗಳ ಪುನರುಜ್ಜೀವನ, ನೀರಿನ ಟ್ಯಾಂಕ್‌ಗಳ ರಚನೆ, ಕಲ್ಯಾಣಿಗಳು, ಬಾವಿಗಳ ಪುನರುಜ್ಜೀವನ, ಅಂತರ್ಜಲ ಮರು ಪೂರಣಕ್ಕಾಗಿ 54.21 ಕೋಟಿ ರು., ನೀರು ಸರಬರಾಜು ಯೋಜನೆಗಳ ಅನುಷ್ಠಾನ, ವರ್ತುಲ ರಸ್ತೆಗಳ ರಚನೆ, ಕೊಳಚೆ ಪ್ರದೇಶಗಳ ಸುಧಾರಣೆಗಾಗಿ 70.46 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ವಿನ್ಯಾಶ ಅಭಿವೃದ್ಧಿ ಯೋಜನೆಗಳ ಸಿದ್ಧತೆ, ಭೂಸ್ವಾದೀನ ವೆಚ್ಚ ಸೇರಿದಂತೆ ಯೋಜನೆ ಮತ್ತು ಅಭಿವೃದ್ಧಿಗಾಗಿ 287.82 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.
ನಗರದ ಪ್ರಮುಖ ರಸ್ತೆಗಳ ವೈಟ್ ಟ್ಯಾಪಿಂಗ್‌ಗಾಗಿ 50 ಕೋಟಿ ರು. ವಂತಿಕೆಯನ್ನು ಲೋಕೋಪಯೋಗಿ ಇಲಾಖೆ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ 150 ಕೋಟಿ ರು. ಬಿಡುಗಡೆ ಮಾಡಲಾಗುತ್ತದೆ.ಮುಡಾ ಪ್ರಕರಣ ನ್ಯಾಯಾಂಗ ವರದಿ ಸಲ್ಲಿಕೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂ ಹಗರಣದ ಕುರಿತು ತನಿಖೆ ನಡೆಸಿದ ಹೈಕೋರ್ಟ್‌ನಿವೃತ್ತ ನ್ಯಾ.ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. 50:50 ಅನುಪಾತದಡಿ ಅಕ್ರಮ ನಿವೇಶನ ಹಂಚಿಕೆ, ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯಲ್ಲಿನ ಅಕ್ರಮದ ಕುರಿತು ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ಆದೇಶಿಸಿತ್ತು. ದೇಸಾಯಿ ಆಯೋಗವು ರಾಜ್ಯ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಂಡಿಎ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.50: 50ರ ಅನುಪಾತದಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 500 ಎಕರೆ ಜಮೀನು ನೀಡಲು ರೈತರು ಒಪ್ಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರು ಮುಂದೆ ಬರುವ ನಿರೀಕ್ಷೆ ಇದೆ. 1 ಸಾವಿರ ಎಕರೆಯಷ್ಟು ಜಮೀನಿಗೆ ರೈತರಿಂದ ಒಪ್ಪಿಗೆ ಸಿಕ್ಕ ತಕ್ಷಣ ಬಡಾವಣೆ ನಿರ್ಮಾಣ ಕೆಲಸ ಶುರುವಾಗಲಿದೆ.
- ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷ, ಎಂಡಿಎ