ಸಾರಾಂಶ
ಗಜೇಂದ್ರಗಡ: ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯದಿಂದ ಪದವಿ ಹಾಗೂ ಬಂಗಾರದ ಪದಕ ಪಡೆದರೆ ಜೀವನ ಸಾರ್ಥಕವಾಗುವುದಿಲ್ಲ. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಮನುಷ್ಯನ ಬದುಕಿಗೆ ಅರ್ಥ ಬರಲಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಪಟ್ಟಣದ ರೋಣ ರಸ್ತೆಯಲ್ಲಿನ ಜಗದ್ಗುರು ತೋಂಟದಾರ್ಯ ಸಿ.ಬಿ.ಎಸ್.ಸಿ. ಶಾಲೆಯಲ್ಲಿ ಭಾನುವಾರ ಇಲ್ಲಿನ ಲಕ್ಷ್ಮೀ ಅರ್ಬನ್ ಕೋ-ಆಪ್ ಬ್ಯಾಂಕ್‌ನ ೧೧೧ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ನಿಮಿತ್ತ ಎಪಿಎಂಸಿ ಶಾಖೆಯ ಎಟಿಎಂ ಹಾಗೂ ಜ. ತೋಂಟದಾರ್ಯ ಕನ್ನಡ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ನೀರಿನ ಸಂಸ್ಕರಣಾ ಘಟಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ವಿದ್ಯೆಯ ಜತೆಗೆ ನಯ, ವಿನಯತೆ, ಸಂಸ್ಕೃತಿ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಸಮಾಜ ನಿಮ್ಮನ್ನು ಗೌರವಿಸುವುದಿಲ್ಲ. ಹೀಗಾಗಿ ಶಿಕ್ಷಣ ಎಷ್ಟು ಮುಖ್ಯವೋ ಜೀವನದಲ್ಲಿ ಮಾನವೀಯ ಮೌಲ್ಯಗಳು ಸಹ ಮುಖ್ಯ ಎಂಬುದನ್ನು ಶಿಕ್ಷಕರು, ಪಾಲಕರು ತಿಳಿಸಿಕೊಡುವ ಜವಾಬ್ದಾರಿಯಿದೆ. ಲಕ್ಷಾಂತರ ಬೆಲೆಬಾಳುವ ರತ್ನವನ್ನು ಹೊತ್ತು ನಾಗರಹಾವು ಮನೆಯೊಳಗೆ ಬಂದರೆ ಯಾರು ಸಹ ಸೌಭಾಗ್ಯ ಬಂತು ಎನ್ನುವುದಿಲ್ಲ. ಬದಲಾಗಿ ವಿಷತುಂಬಿದ ಹಾವನ್ನು ಮನೆಯಿಂದ ಹೊರಹಾಕಲು ಮುಂದಾಗುತ್ತೇವೆ. ವಿದ್ಯಾರ್ಥಿಗಳು ಸಹ ಶಿಕ್ಷಣ ಪಡೆದರೆ ಸಾಲದು, ಸಮಾಜಕ್ಕೆ ಉಪಕಾರಿಯಾಗುವ ದೆಸೆಯಲ್ಲಿ ಶಿಕ್ಷಣವನ್ನು ಬಳಸಿಕೊಳ್ಳಬೇಕು ಎಂದರು.ಜನರ ಪ್ರೀತಿ ಮತ್ತು ವಿಶ್ವಾಸದಿಂದ ೧೧೧ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ನಡೆಸುತ್ತಿರುವ ಲಕ್ಷ್ಮೀ ಅರ್ಬನ್ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ಕಾಪಾಡುವ ಜತೆಗೆ ಸಾಲ ಪಡೆಯುವ ಜನರನ್ನು ಗೌರವಿಸಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸಗಳಿಸಿದೆ. ಬ್ಯಾಂಕ್ ತನ್ನ ಆರ್ಥಿಕ ಲಾಭಕ್ಕಾಗಿ ವ್ಯವಹಾರ ನಡೆಸುತ್ತಿಲ್ಲ ಎಂಬುದಕ್ಕೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜತೆಗೆ ಉಚಿತ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕ ಕೊಡುಗೆ ಸೇರಿ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬರುತ್ತಿರುವುದು ನಿದರ್ಶನವಾಗಿದೆ ಎಂದರು.
ಡಾ. ಅನಿಲ ಎ. ವೈದ್ಯ ಮಾತನಾಡಿ, ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಹಾಗೂ ಸನ್ಮಾನ ಮಾಡುವ ಮೂಲಕ ಸಮಾಜದ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹದ ಜತೆಗೆ ಜವಾಬ್ದಾರಿ ಹೆಚ್ಚಿಸುವ ಕೆಲಸವನ್ನು ಲಕ್ಷ್ಮೀ ಅರ್ಬನ್ ಕೋ ಆಪ್ ಬ್ಯಾಂಕ್ ಮಾಡುತ್ತಿರುವುದು ಅನುಕರಣೀಯ ಎಂದರು.ಸಿಎ ಎಸ್.ಕೆ. ಚನ್ನಿ, ಡಾ. ಬಿ.ವಿ. ಕಂಬಳ್ಯಾಳ ಮಾತನಾಡಿ, ಬ್ಯಾಂಕ್ ₹64,58,665 ನಿವ್ವಳ ಲಾಭ ಗಳಿಸಿದೆ ಎಂದರು.
ಪಿ.ಎಸ್. ಕಡ್ಡಿ, ಪಿ.ವೈ. ತಳವಾರ, ಪಿ.ಬಿ. ಮ್ಯಾಗೇರಿ, ಎಸ್.ಸಿ. ಬಂಡಿ, ಎಸ್.ಕೆ. ಕನಕೇರಿ, ರಾಜು ಹೊಸಂಗಡಿ ಸೇರಿ ಇತರರು ಇದ್ದರು.