ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ದಿನ ಅರ್ಥಪೂರ್ಣ ಆಚರಣೆ

| Published : Sep 16 2024, 01:45 AM IST

ಸಾರಾಂಶ

ಗಡಿಜಿಲ್ಲೆ ಚಾಮರಾಜನಗರದಲ್ಲಿಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶಿಷ್ಟ, ವಿನೂತನವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗಡಿಜಿಲ್ಲೆ ಚಾಮರಾಜನಗರದಲ್ಲಿಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶಿಷ್ಟ, ವಿನೂತನವಾಗಿ ಆಚರಿಸಲಾಯಿತು.

ಬೀದರ್‌ನಿಂದ ಚಾಮರಾಜನಗರದವರೆಗೆ ರಾಜ್ಯದ 31 ಜಿಲ್ಲೆಗಳನ್ನೊಳಗೊಂಡ ಅತಿ ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಚಾಮರಾಜನಗರ ಜಿಲ್ಲೆಯ ಸರಹದ್ದು ಆರಂಭವಾಗುವ ಮೂಗೂರು ಕ್ರಾಸ್‌ನಿಂದ ಪಟ್ಟಣದ ರಾಮಸಮುದ್ರದ ಡಾ.ಅಂಬೇಡ್ಕರ್ ಪ್ರತಿಮೆವರೆಗೆ ಏರ್ಪಡಿಸಲಾಗಿದ್ದ 25 ಕಿ.ಮೀ. ಉದ್ದದ ಮಾನವ ಸರಪಳಿ ಕಾರ್ಯಕ್ರಮ ಗಮನ ಸೆಳೆಯಿತು.

ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಸೇರಿದಂತೆ ಇನ್ನಿತರೆ ಗಣ್ಯರು ಮೂಗೂರು ಕ್ರಾಸ್ ಬಳಿ ಆರಂಭವಾದ ಮಾನವ ಸರಪಳಿಗೆ ಶುಭ ಕೋರಿ ಹಾರೈಸಿದರು.

ದಾರಿಯುದ್ದಕ್ಕೂ ಮಾನವ ಸರಪಳಿಯಲ್ಲಿ ಸಮವಸ್ತ್ರ ಧರಿಸಿದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಸೇರಿದಂತೆ ಸರ್ವರೂ ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಬಿಂಬಿಸುವ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾನವ ಸರಪಳಿಯ ಮೆರಗನ್ನು ಹೆಚ್ಚಿಸಿದರು.

ಮಾನವ ಸರಪಳಿ ರಚನೆಯಾಗಿದ್ದ ಪ್ರತಿ ಕಿ.ಮೀ.ನಲ್ಲಿ ಡಾ. ಅಂಬೇಡ್ಕರ್ ವೇಷಭೂಷಣ ಹಾಗೂ ಇನ್ನಿತರೆ ಸಾಂಪ್ರದಾಯಿಕ ದಿರಿಸು ಧರಿಸಿದ್ದ ಮಕ್ಕಳು ನಿಂತು ವಿಶೇಷ ಗಮನ ಸೆಳೆದರು. ಮಾರ್ಗಮಧ್ಯೆ ಶಾಲಾ ಮಕ್ಕಳು ಜಿಲ್ಲೆಯ ಬಿಳಿಗಿರಿರಂಗನ ಅರಣ್ಯವಾಸಿಗಳ ನೃತ್ಯ ಪ್ರದರ್ಶಿಸಿದರು. ಗಾರುಡಿ ಗೊಂಬೆ, ಡೊಳ್ಳು, ಇನ್ನಿತರೆ ಕಲಾ ತಂಡಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು. ಮಾನವ ಸರಪಳಿ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಜನರ ಉತ್ಸಾಹ ಮೇರೆ ಮೀರಿತ್ತು. ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು. ಸಂವಿಧಾನ ಪೀಠಿಕೆ ವಾಚನ ಮಾಡಿದರು. ಮಾನವ ಸರಪಳಿಗೆ ಕೈ ಜೋಡಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸಾರ್ಥಕಗೊಳಿಸಿದರು.

ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ನೃತ್ಯ ಪ್ರದರ್ಶನ ನೀಡಿದರು. ನಗರದ ಪಚ್ಚಪ್ಪ ವೃತ್ತದಲ್ಲಿ ಸೋಲಿಗರ ಗೊರುಕನ ನೃತ್ಯ, ಶಾಲಾ ಮಕ್ಕಳ ಬ್ಯಾಂಡ್ ವಾದನ, ವೇಷಭೂಷಣ ಧರಿಸಿದ ಶಾಲಾ ಮಕ್ಕಳು, ಪ್ರಜಾಪ್ರಭುತ್ವ ಆಚರಣೆಯ ಸಂತಸ ಇಮ್ಮಡಿಗೊಳಿಸಿದರು. ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ವೃತ್ತದಲ್ಲಿ ಸಮಾವೇಶಗೊಂಡು ಆಚರಣೆಯ ವೈಶಿಷ್ಟ್ಯ ಕಣ್ತುಂಬಿಕೊಂಡರು.

ಬಿ.ರಾಚಯ್ಯ ಜೋಡಿರಸ್ತೆಯ ಮಧ್ಯಭಾಗದಿಂದ ರಾಮಸಮುದ್ರದ ಡಾ.ಅಂಬೇಡ್ಕರ್ ವೃತ್ತದ ವರೆಗೆ ಒಂದು ಕಿ.ಮೀ. ವರೆಗೆ ಉದ್ದನೆಯ ರಾಷ್ಟ್ರದ ತ್ರಿವರ್ಣ ಧ್ವಜ ಪ್ರದರ್ಶನವು ಕಾರ್ಯಕ್ರಮದ ಅತ್ಯಂತ ವಿಶೇಷ ಎನಿಸಿತು. ಮಾನವ ಸರಪಳಿಯಲ್ಲಿ ಭಾಗವಹಿಸಿದವರಿಗೆ ಉಪಹಾರ, ಕುಡಿಯುವ ನೀರು, ಮೊಬೈಲ್ ಶೌಚಾಲಯ, ಆ್ಯಂಬುಲೆನ್ಸ್, ಬೈಕ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ

ಪ್ರಜಾಪ್ರಭುತ್ವ ಬಲಿಷ್ಠ: ಸಚಿವ ಕೆ. ವೆಂಕಟೇಶ್

ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಭದ್ರಬುನಾದಿಯಿಂದ ಬಲಿಷ್ಠವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಮಾನವ ಸರಪಳಿಯ ಮುಕ್ತಾಯದ ಸ್ಥಳವಾದ ರಾಮಸಮುದ್ರದ ಡಾ. ಅಂಬೇಡ್ಕರ್ ಪ್ರತಿಮೆ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ನಾವು ಇಂದು ಎಲ್ಲೆಡೆ ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವವು ಸಮಾನತೆ ಸ್ವಾತಂತ್ರ‍್ಯ ಮತ್ತು ಭ್ರಾತೃತ್ವದ ಭದ್ರಬುನಾದಿ ಮೇಲೆ ನಿಂತಿದೆ. ಈ ಭದ್ರಬುನಾದಿ ಬಲಿಷ್ಠವಾಗದಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗುವುದಿಲ್ಲ. ಆದ್ದರಿಂದ ಸಮಾನತೆ, ಸ್ವಾತಂತ್ರ‍್ಯ ಮತ್ತು ಭ್ರಾತೃತ್ವದ ಆದರ್ಶಗಳು ಭಾರತೀಯ ಸಂವಿಧಾನ ಪೀಠಿಕೆಯ ಭಾಗವಾಗಿದೆ ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007ರಲ್ಲಿ ಅಂಗೀಕರಿಸಿದ ನಿರ್ಣಯದಂತೆ ಸೆ.15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ವಿಶ್ವದ ಪ್ರಜಾಪ್ರಭುತ್ವ ಸ್ಥಿತಿಗತಿ ಪರಿಶೀಲಿಸಲು ಮತ್ತು ಜಾಗತಿಕವಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ, ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ ಎಂದರು. ನಮ್ಮ ರಾಜ್ಯದ ಉತ್ತರ ತುದಿಯಾದ ಬೀದರ್ ಜಿಲ್ಲೆಯಿಂದ ದಕ್ಷಿಣದ ತುದಿ ಗಡಿನಾಡು ಚಾಮರಾಜನಗರ ಜಿಲ್ಲೆಯವರೆಗೆ ಅತೀ ಉದ್ದನೆಯ ಮಾನವ ಸರಪಳಿ ನಿರ್ಮಿಸುವ ಮೂಲಕ ಈ ಬಾರಿ ಪ್ರಜಾಪ್ರಭುತ್ವ ದಿನ ಆಚರಣೆಯನ್ನು ವಿಶೇಷವಾಗಿ ಹಮ್ಮಿಕೊಂಡಿದ್ದೇವೆ ಎಂದರು.

ಮಾನವ ಸರಪಳಿ ರಚನೆ ರಾಜ್ಯದ 31 ಜಿಲ್ಲೆಯಲ್ಲೂ ನಡೆಯುತ್ತಿದ್ದೂ, ಒಟ್ಟು 25 ಲಕ್ಷ ಜನರು ಪಾಲ್ಗೊಳ್ಳುತ್ತಿದ್ದಾರೆ. 2500 ಕಿ.ಮೀ ಉದ್ದಕ್ಕೂ ಮಾನವ ಸರಪಳಿ ನಿರ್ಮಾಣವಾಗಿದ್ದು, ರಾಜ್ಯಾದ್ಯಂತ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ ಹೀಗಾಗಿ ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ದೇಶದ ರಾಜ್ಯವಾದ ನಮ್ಮ ಕರ್ನಾಟಕದ ಸರ್ಕಾರವು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮೂಲಕ 2023 ನೇ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಯಾಗಿ ನಡೆಸಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಪ್ರಜಾಪ್ರಭುತ್ವ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದ್ದು, ಈ ದಿಸೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳು, ಇಡೀ ಮನುಕುಲಕ್ಕೆ ಅವರು ಮಾಡಿರುವ ಮಾರ್ಗದರ್ಶನ, ತೋರಿದ ಉನ್ನತ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ. ಪ್ರಜಾಪ್ರಭುತ್ವ, ಸಂವಿಧಾನದ ಘನತೆ, ಉನ್ನತ ಮೌಲ್ಯಗಳು ಹಾಗೂ ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿಯುವಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆ ಇದೆ. ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಬದ್ಧರಾಗಿ ಒಟ್ಟಾಗಿ ಶ್ರಮಿಸೋಣ ಎಂದು ನುಡಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿ ಹಿಡಿಯಲು ಜಿಲ್ಲೆಯಲ್ಲಿ ಇಂದು 25 ಕಿ.ಮೀ. ಅಂತರದ ಮಾನವ ಸರಪಳಿ ಏರ್ಪಡಿಸಲಾಗಿದೆ. ವಿಶ್ವಸಂಸ್ಥೆ ನಿರ್ಣಯದಂತೆ ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದೇವೆ ಎಂದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ನಗರಸಭಾ ಅಧ್ಯಕ್ಷ ಸುರೇಶ್, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಅಸ್ಗರ್ ಮುನ್ನ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಕವಿತಾ, ಅಬಕಾರಿ ಉಪ ಆಯುಕ್ತ ನಾಗಶಯನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿಂದ್ಯಾ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಇದ್ದರು. ಕಲಾವಿದರಾದ ಬಿ. ಬಸವರಾಜು, ಸಿ.ಎಂ. ನರಸಿಂಹಮೂರ್ತಿ, ರಾಜಪ್ಪ, ಮಂಜುನಾಥ್ ನಾಡಗೀತೆ ಪ್ರಸ್ತುತಪಡಿಸಿದರು. ಬಳಿಕ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ರಾಮಸಮುದ್ರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನಶಿಲ್ಪಿಗೆ ಗೌರವ ಸಲ್ಲಿಸಿದರು.