ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಹೊಟ್ಟೆಪಾಡಿಗಾಗಿ ಊರು ಬಿಡುವುದು ಅನಿವಾರ್ಯವಾಗಿದೆ. ಮಕ್ಕಳ ಶಾಲಾ ಫೀ, ಪುಸ್ತಕ ಕೊಳ್ಳಲು ಹಣವಿಲ್ಲ. ವಾರದ ಸಂತೆಗೂ ಪರದಾಡುವಂತಾಗಿದೆ. ಇದು ಕೇವಲ ಒಬ್ಬ ಕಾರ್ಮಿಕರ ಅಳಲಲ್ಲ. ತಾಲೂಕಿನ ಗ್ರಾಮೀಣ ಪ್ರದೇಶದ ಸಾವಿರಾರು ಕೂಲಿಕಾರರ ದಾರುಣ ಸ್ಥಿತಿಯಿದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದ್ವಂದ್ವ ನೀತಿಗಳ ನಡುವೆ ಸಿಲುಕಿರುವ ಗ್ರಾಮೀಣ ಕೂಲಿಕಾರರು ಅತ್ತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸವೂ ಸಿಗದೆ, ಇತ್ತ ಹೊಸದಾಗಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಿಬಿ-ಜಿ ರಾಮ- ಜಿ ಕಾನೂನಿನ ಸ್ಪಷ್ಟ ಮಾರ್ಗಸೂಚಿಗಳೂ ಇಲ್ಲದೆ ಗ್ರಾಮೀಣ ಭಾಗದಲ್ಲಿ ದುಡಿಯುವ ಕೂಲಿಕಾರರು ಅತಂತ್ರರಾಗಿದ್ದಾರೆ.ಮನರೇಗಾ ಯೋಜನೆ ಗ್ರಾಮೀಣ ಬಡ ಕುಟುಂಬಗಳಿಗೆ ವರ್ಷಕ್ಕೆ ೧೦೦ ದಿನಗಳ ಕೂಲಿ ಉದ್ಯೋಗವನ್ನು ಖಾತರಿ ಪಡಿಸುವ ಯೋಜನೆಯಾಗಿದ್ದು, ಬೇಡಿಕೆ ಆಧರಿತ ಉದ್ಯೋಗ ವ್ಯವಸ್ಥೆಯನ್ನು ಬಿಟ್ಟು ಹೊಸ ವಿಬಿ- ಜಿ ರಾಮ್- ಜಿ ಕಾಯ್ದೆ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ನಡೆಯಿಂದ ಸಧ್ಯ ಕೂಲಿಕಾರರು ಕೆಲಸವಿಲ್ಲದೇ ಪರದಾಡುವ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಸರ್ಕಾರವೇ ಅಗಲಿ, ರಾಜ್ಯ ಸರ್ಕಾರವೇ ಆಗಲಿ ದುಡಿಯುವ ವರ್ಗಕ್ಕೆ ಕೆಲಸ ನೀಡಬೇಕೆಂಬುದು ಬಡ ಜನರ ಕೂಗಾಗಿದೆ.ಅಧಿಕಾರಿಗಳ ನಿರ್ಲಕ್ಷ್ಯ: ಜು. ೧ರಂದು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ರದ್ದಾಗಲಿದೆ. ಇದರ ಬದಲಾಗಿ ವಿಬಿ- ಜಿ ರಾಮ್- ಜಿ ಜಾರಿಗೆ ಬರಲಿದೆ ಎಂದು ಕೇಂದ್ರ ಗ್ರಾಮಿಣಾಭಿವೃದ್ಧಿ ಸಚಿವಾಲಯದಿಂದ ಅಧಿಸೂಚನೆ ಕೂಡ ಹೊರಬಿದ್ದಿದ್ದು, ಮನರೇಗಾ ಯೋಜನೆ ಅಡಿಯಲ್ಲಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಯೋಜನೆ ಅಡಿಯಲ್ಲಿ ಕಳೆದ ೩ ವರ್ಷಗಳ ಕ್ರಿಯಾಯೋಜನೆಯ ಕಾಮಗಾರಿಗಳು ಬಾಕಿ ಉಳಿದಿರುವ ಸ್ಪಷ್ಟ ಮಾಹಿತಿ ಇದೆ.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಲಿ, ಸಧ್ಯ ಗ್ರಾಪಂಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳಾಗಲಿ ಆಸಕ್ತಿ ತೋರದೇ ಇರುವುದರಿಂದ ಹಾಗೂ ಇವರ ನಿರ್ಲಕ್ಷ್ಯತನದಿಂದ ದನದ ದೊಡ್ಡಿ, ಬದು ನಿರ್ಮಾಣ, ಬಾಂದಾರ ನಿರ್ಮಾಣ, ವಸತಿ ನಿರ್ಮಾಣದಂತಹ ಕಾಮಗಾರಿಗಳು ಅಪೂರ್ಣಗೊಂಡಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡದೇ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಗಂಭೀರ ಆರೋಪಗಳು ಗ್ರಾಮೀಣ ಕೂಲಿಕಾರರಿಂದ ಕೇಳಿಬರುತ್ತಿದೆ.ಇತ್ತ ರಾಜ್ಯ ಸರ್ಕಾರ ತನ್ನ ಪಾಲಿನ ಶೇ. ೪೦ ಅನುದಾನವನ್ನು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಿದೆ. ತಾಲೂಕು ಪಂಚಾಯಿತಿ ವತಿಯಿಂದ ಕ್ರಿಯಾಯೋಜನೆ ಕೂಡ ಸಿದ್ಧವಾಗಿ ಅನುದಾನ ಬಳಕೆ ಮಾಡಿಕೊಂಡು ಅಪೂರ್ಣ ಕಾಮಗಾರಿ ಮಾಡಲಾಗಿದೆ. ಸಧ್ಯ ಸ್ಪಷ್ಟ ಮಾಹಿತಿ ಬಂದಿಲ್ಲ ಎಂದು ನೆಪ ಹೇಳುತ್ತಾ ಇದ್ದ ಅನುದಾನದಡಿ ಕೆಲಸ ನೀಡಲು ತಾಲೂಕು ಪಂಚಾಯಿತಿ ಇಒ ಆಸಕ್ತಿ ತೋರುತ್ತಿಲ್ಲ. ಇದರಿಂದ ಗ್ರಾಮಗಳಲ್ಲಿ ಉದ್ಯೋಗವಿಲ್ಲದೆ ಜನರು ಕೆಲಸ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ.ಮಾಹಿತಿ ನೀಡದ ಅಧಿಕಾರಿ

ಈ ಕುರಿತು ಮಾಹಿತಿ ಕೇಳಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮೂರ್ನಾಲ್ಕು ಬಾರಿ ಸಂಪರ್ಕಿಸಿದರೂ ಮೀಟಿಂಗ್‌ನಲ್ಲಿದ್ದೇನೆ ಎಂದು ಮೆಸೇಜ್ ಕಳಿಸಿದರೆ ವಿನಾ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಕೂಲಿಕಾರರ ಆರೋಪಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಮನರೇಗಾ ಯೋಜನೆ ಅಡಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ನೆಪವೊಡ್ಡಿ ಕೂಲಿಕಾರರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ್ದು, ತಾಲೂಕು ಪಂಚಾಯಿತಿ ಅಧಿಕಾರಿ ಗೊತ್ತಿದ್ದೂ ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ಜಲ್ಲಿಗೇರಿ ತಾಂಡಾದ ಕೂಲಿಕಾರ ವೀರೇಶ ಲಮಾಣಿ ಆರೋಪಿಸಿದ್ದಾರೆ.