ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ವ್ಯಾಪ್ತಿಗೊಳಪಡದ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ಸಂಚಾರ ದಟ್ಟಣೆ ಸೇರಿದಂತೆ ಇತರ ಸಮಸ್ಯೆ ಉದ್ಭವವಾಗುವುದನ್ನು ತಡೆಯಲು ಹೊಸ ರಸ್ತೆ ಜಾಲ (ರೋಡ್ ಗ್ರಿಡ್) ನಿರ್ಮಾಣ ಹಾಗೂ ಸಮರ್ಪಕ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಸ್ಥಳ ಗುರುತಿಸಿ ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂ.ನಗರ ಜಿಲ್ಲೆ ಅಭಿವೃದ್ಧಿಗೆ ಕ್ರಮ: ಸಚಿವ ಕೃಷ್ಣ ಬೈರೇಗೌಡ
ಕನ್ನಡಪ್ರಭ ವಾರ್ತೆ ಬೆಂಗಳೂರುಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ವ್ಯಾಪ್ತಿಗೊಳಪಡದ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ಸಂಚಾರ ದಟ್ಟಣೆ ಸೇರಿದಂತೆ ಇತರ ಸಮಸ್ಯೆ ಉದ್ಭವವಾಗುವುದನ್ನು ತಡೆಯಲು ಹೊಸ ರಸ್ತೆ ಜಾಲ (ರೋಡ್ ಗ್ರಿಡ್) ನಿರ್ಮಾಣ ಹಾಗೂ ಸಮರ್ಪಕ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಸ್ಥಳ ಗುರುತಿಸಿ ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಕಳೆದ 25 ವರ್ಷಗಳಿಂದ ಸೂಕ್ತ ಪೂರ್ವ ಯೋಜನೆ ಹಾಗೂ ಮುಂಜಾಗ್ರತಾ ತಯಾರಿ ಇಲ್ಲದೆ ಬೆಳೆದ ಪರಿಣಾಮವಾಗಿ ಸಂಚಾರ ದಟ್ಟಣೆ ಸಮಸ್ಯೆ, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯಂತಹ ಮೂಲಸೌಕರ್ಯ ಸೌಲಭ್ಯ ನೀಡುಡವುದು ಸೇರಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆ ಪರಿಸ್ಥಿತಿ ಜಿಬಿಎ ವ್ಯಾಪ್ತಿಗೊಳಪಡದ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳಿಗೆ ಬರದಂತೆ ಮಾಡದಂತೆ ಈಗಲೇ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ ಎಂದರು.ಸದ್ಯ ಬೆಂಗಳೂರು ನಗರದ 750 ಚದರ ಕಿಮೀ ವ್ಯಾಪ್ತಿಯು ಈಗಾಗಲೇ ನಗರೀಕರಣವಾಗಿದ್ದು, ಮುಂದಿನ ದಿನಗಳಲ್ಲಿ ಅದು 1800 ಚದರ ಕಿಮೀಗೆ ವಿಸ್ತರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈಗಿನಿಂದಲೇ ಆ ಭಾಗಗಳಲ್ಲಿ ಪೂರ್ವಯೋಜಿತ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿ, ಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಕಳೆದ ವಾರ ಬೆಂಗಳೂರು ನಗರ ಜಿಲ್ಲೆಯ ಪೂರ್ಣಪ್ರಮಾಣವನ್ನು ಜಲಮಂಡಳಿ ವ್ಯಾಪ್ತಿಗೆ ತರಲಾಗಿದೆ. ಜಲಮಂಡಳಿಯು ಹಂತಹಂತವಾಗಿ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಿದೆ ಅದರ ಜತೆಗೆ ಸಂಚಾರ ದಟ್ಟಣೆ ಸಮಸ್ಯೆ ಉದ್ಭವವಾಗದಂತೆ ಮಾಡಲು ಬಿಎಂಆರ್‌ಡಿಎ ಸೇರಿದಂತೆ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳು ಹೊಸ ರೋಡ್ ಗ್ರಿಡ್‌ನ್ನು ಗುರುತಿಸಿದೆ ಎಂದು ಹೇಳಿದರು.
ಈಗಿರುವ ರಸ್ತೆಗಳ ಅಗಲವನ್ನು 30 ಮೀ., 45 ಮೀ., 90 ಮೀ.ಗೆ ಅಗಲೀಕರಣ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಪ್ರಮುಖ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ, ಪೆರಿಫೆರಲ್ ರಿಂಗ್‌ರಸ್ತೆ ಮತ್ತು ಸೆಟಲೈಟ್ ಟೌನ್ ರಿಂಗ್ ರಸ್ತೆಗಳಿಗೆ ಸಂಪರ್ಕಿಸುವಂತೆ ರಸ್ತೆಗಳನ್ನು ಗ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದರು.ಈ ಹೊಸ ಅಧಿಸೂಚನೆಯಲ್ಲಿ ನೂರಾರು ರಸ್ತೆಗಳನ್ನು ಸೇರಿಸಲಾಗಿದ್ದು, ಹಿಂದೆ ಇದ್ದ ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ, ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಿಸಲಾಗುತ್ತದೆ. ಅಧಿಸೂಚಿತ ರಸ್ತೆಗಳ ಸಂಪೂರ್ಣ ನಿರ್ಮಾಣಕ್ಕೆ 5 ರಿಂದ 10 ವರ್ಷ ಬೇಕಾಗಬಹುದು. ಅಧಿಸೂಚಿತ ರಸ್ತೆಗಳಲ್ಲಿನ ಜಾಗದಲ್ಲಿ ಕಟ್ಟಡ, ಲೇಔಟ್ ನಿರ್ಮಾಣಕ್ಕೆ ನಿರ್ಬಂಧ ಹೇರಲಾಗುತ್ತದೆ. ನಿಗದಿತ ಜಾಗವನ್ನು ಬಿಟ್ಟು ಕಟ್ಟಡ ಮತ್ತು ಲೇಔಟ್ ನಿರ್ಮಿಸಲು ಅನುವು ಮಾಡಿಕೊಡಲಾಗುತ್ತದೆ. ಸ್ಥಳೀಯ ಪ್ರಾಧಿಕಾರವು ನಕ್ಷೆ ಮಂಜೂರಾತಿ ನೀಡುವ ಸಂದರ್ಭದಲ್ಲಿಯೇ ಅದನ್ನು ಪರಿಶೀಲಿಸಿ ತಿಳಿಸಲಿದೆ ಎಂದು ವಿವರಿಸಿದರು.
ನೂತನ ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ಬಿಎಂಆರ್‌ಡಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಸಾರ್ವಜನಿಕರು ಆ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ. ಸಾರ್ವಜನಿಕರಿಗೆ ಜಾಗೃತಿಗಾಗಿ ಹಾಲಿ ಇರುವ ಮತ್ತು ಹೊಸ ರಸ್ತೆಗೆ ಮೀಸಲಾದ ಜಾಗದ ವಿಡಿಯೋವನ್ನೂ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಬಿಎಂಆರ್‌ಡಿಎ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಅಧಿಕಾರಿಗಳು ಜಂಟಿಯಾಗಿ ರಸ್ತೆಗಳನ್ನು ಗುರುತಿಸಲಾಗಿದ್ದು, ಅದರ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ನೋಟಿಸ್ ಬೋರ್ಡ್‌ಗಳಲ್ಲೂ ಪ್ರಕಟಿಸಲಾಗುವುದು. ಈ ರಸ್ತೆಗಳ ಅಗಲೀಕರಣ ಸದ್ಯಕ್ಕೆ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ವಾಹನಗಳ ದಟ್ಟಣೆಯನ್ನಾಧರಿಸಿ ಭವಿಷ್ಯದಲ್ಲಿ ಅದನ್ನು ನಿರ್ಮಿಸಲಾಗುವುದು. ಹೀಗೆ ರಸ್ತೆ ನಿರ್ಮಾಣ ವೇಳೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈಗಲೇ ಜಾಗ ಮೀಸಲಿರಿಸಲಾಗುತ್ತಿದೆ ಎಂದರು.ಬಿಎಂಆರ್‌ಡಿಎ ಆಯುಕ್ತ ರಾಜೇಂದ್ರ ಚೋಳನ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಯತೀಶ್, ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಇತರರಿದ್ದರು.