ಮೇ 16 ಹಾಗೂ 17ರಂದು ನಡೆಯಲಿರುವ ಕನಕಗಿರಿ ಉತ್ಸವ-2026ಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹೇಳಿದರು.

ಕನಕಗಿರಿ: ಮೇ 16 ಹಾಗೂ 17ರಂದು ನಡೆಯಲಿರುವ ಕನಕಗಿರಿ ಉತ್ಸವ-2026ಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹೇಳಿದರು.

ಸೋಮವಾರ ಇಲ್ಲಿನ ಪಪಂ ಸಭಾಂಗಣದಲ್ಲಿ ಉತ್ಸವ ನಿಮಿತ್ತ ಅಧ್ಯಕ್ಷೆ ತನುಶ್ರೀ ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಉತ್ಸವಕ್ಕೆ ಬರುವ ಜನರಿಗೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಬಸ್ ನಿಲ್ದಾಣ ಹಾಗೂ ಕನಕಾಚಲಪತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಲೀಕರಣ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳ ಜತೆ ಪತ್ರ ವ್ಯವಹಾರ ನಡೆಸಿ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದರು.

ಕೊಪ್ಪಳ, ಕಾರಟಗಿ, ಕುಷ್ಟಗಿ ಹಾಗೂ ಗಂಗಾವತಿ ರಸ್ತೆಗಳಲ್ಲಿನ ಸ್ವಾಗತ ಕಮಾನುಗಳ ನವೀಕರಣಕ್ಕೆ ಮುಂದಾಗಬೇಕು ಎಂದು ಸದಸ್ಯ ರಾಜಸಾಬ ನಂದಾಪುರ ಒತ್ತಾಯಿಸಿದರು. ಸಭೆಯಲ್ಲಿದ್ದ ಬಹುತೇಕ ಸದಸ್ಯರು ಅವರ ಹೇಳಿಕೆ ಬೆಂಬಲಿಸಿ, ಸ್ವಾಗತ ಕಮಾನುಗಳ ನವೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನವೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಕಟ್ಟಿಮನಿ ಪ್ರತಿಕ್ರಿಯಿಸಿದರು.

ಜನರ ಹಿತ ಕಾಪಾಡಿ: ನಗರ ಸೌಂದರ್ಯ ಹೆಚ್ಚಿಸುವುದು, ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಎಪಿಎಂಸಿ ಹೊರಗೋಡೆಯನ್ನು ತೆರವುಗೊಳಿಸಲಾಯಿತು. ಆದರೆ, ವಾಲ್ಮೀಕಿ ವೃತ್ತದಿಂದ ಬಸ್ ನಿಲ್ದಾಣ, ಕನಕಾಚಲಪತಿ ದೇವಸ್ಥಾನಕ್ಕೆ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡುವುದು ಮುಖ್ಯವಾಗಿದೆ. ಬಸ್ ನಿಲ್ದಾಣಕ್ಕೆ ಹೋಗುವ ಬಸ್ಸುಗಳು ಇಕ್ಕಟ್ಟಿನಲ್ಲಿ ಸಾಗುತ್ತಿವೆ. ತಿರುವಿನಲ್ಲಿ ಅನೇಕ ಅಪಘಾತಗಳು ನಡೆದಿವೆ. ಸಾವು-ನೋವುಗಳ ಸಂಭವಿಸುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಮುಂದಾಗಬೇಕು. ಈ ಕುರಿತು ಈಗಾಗಲೇ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರಿಗೆ ಪತ್ರ ಬರೆದು ಈ ಸಮಸ್ಯೆ ನಿವಾರಿಸಿ ಜನರ ಹಿತ ಕಾಪಾಡಬೇಕು ಎಂದು ಸದಸ್ಯರಾದ ಅನಿಲ ಬಿಜ್ಜಳ ಹಾಗೂ ಸಂಗಪ್ಪ ಸಜ್ಜನ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಸದಸ್ಯರು ಹೇಳಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ಉತ್ಸವಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಗಳ ಸಚಿವರು ಪಟ್ಟಣಕ್ಕೆ ಆಗಮಿಸುತ್ತಿದ್ದು, ರಸ್ತೆಗಳನ್ನು ಶುಚಿಗೊಳಿಸಬೇಕು. ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ರಾಜಬೀದಿ ಹಾಗೂ ಪ್ರಮುಖ ವೃತ್ತಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಅಧ್ಯಕ್ಷೆ ತನುಶ್ರೀ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದರು.

ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಅಭಿಷೇಕ ಕಲುಬಾಗಿಲಮಠ, ನೂರಸಾಬ ಗಡ್ಡಿಗಾಲ, ಶರಣೇಗೌಡ, ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ನಂದಿನಿ ರಾಮಾಂಜನೇಯರೆಡ್ಡಿ, ಶೈನಜಾಬೇಗಂ ಗುಡಿಹಿಂದಲ ಇತರರಿದ್ದರು.