ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಿಗೆ ಗುರುವಾರ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿದರು. ಅಧಿಕಾರಿಗಳು, ರೈತರಿಂದ ಮಾಹಿತಿ ಪಡೆದರು.
ಕೊಪ್ಪಳ/ಕುಷ್ಟಗಿ: ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಯ ಕೊರತೆಯಿಂದ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಈಗಾಗಲೇ ರಾಜ್ಯದ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರ ನಿರ್ವಹಣೆ ಹಾಗೂ ರೈತರಿಗೆ ನೆರವು ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಗುರುವಾರ ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಿಗೆ ಭೇಟಿ ನೀಡಿದ ಅವರು, ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿ ವೀಕ್ಷಿಸಿದರು. ಸಂಸದ ಕೆ. ರಾಜಶೇಖರ ಹಿಟ್ನಾಳ್, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ದೊಡ್ಡನಗೌಡ ಪಾಟೀಲ್ ಅವರೊಂದಿಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮದಲ್ಲಿ ರೈತ ಶಿವಪ್ಪ ಮುದುಕಪ್ಪ ಗೌಡ್ರ ಅವರ ಜಮೀನಿನಲ್ಲಿ ಮೆಕ್ಕೆಜೋಳ, ತೊಗರಿ ಬೆಳೆ ಪರಿಶೀಲಿಸಿದರು. ಇದೇ ವೇಳೆ ಬಿ. ಕೃಷ್ಣಮೂರ್ತಿ ಹಾಗೂ ಡಿ. ಹೊಸಳ್ಳಿ ಸೀಮಾ ಅವರ ಜಮೀನಿನಲ್ಲಿನ ತೊಗರಿ, ಹುರುಳಿ ಬೆಳೆಗಳ ಸ್ಥಿತಿಯನ್ನೂ ವೀಕ್ಷಿಸಿದರು. ಯಲಬುರ್ಗಾ ತಾಲೂಕಿನ ಗುನ್ನಾಳದಲ್ಲಿ ಮಹೇಶ ಹನುಮಂತಯ್ಯ ಅವರ ತೊಗರಿ ಹಾಗೂ ಚನ್ನಬಸವ್ವ ಈಶಪ್ಪ ಉಳ್ಳಾಗಡ್ಡಿ ಅವರ ಮೆಕ್ಕೆಜೋಳ ಬೆಳೆ ಪರಿಶೀಲಿಸಿದರು.
ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದಲ್ಲಿ ರೈತ ಕರಡೆಪ್ಪ ದಂಡಿನ್ ಅವರ ಜಮೀನಿಗೆ ಭೇಟಿ ನೀಡಿದ ಡಿಸಿಎಂ, ತೊಗರಿ ಬೆಳೆ ಹಾನಿಯನ್ನು ಪರಿಶೀಲಿಸಿ ಕೃಷಿ ಅಧಿಕಾರಿಗಳಿಂದ ಮಳೆ ಪ್ರಮಾಣ, ಬಿತ್ತನೆ ಪ್ರದೇಶ, ಬೆಳೆ ಸ್ಥಿತಿ ಹಾಗೂ ಹಾನಿಯ ಕುರಿತು ಮಾಹಿತಿ ಪಡೆದರು.ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹ: ‘ಸಮರ್ಪಕ ಮಳೆಯಾಗದೆ ಬೆಳೆ ಕೈಕೊಟ್ಟಿದೆ. ಕಾಳು ಕಟ್ಟಿಲ್ಲ. ಹಾಕಿದ ಬಂಡವಾಳವೂ ಮರಳದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ಎರಡೂ ಬೆಳೆಗಳು ವಿಫಲವಾಗಿವೆ. ಹೀಗಾಗಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ರೈತರು ಡಿಸಿಎಂಗೆ ಮನವಿ ಮಾಡಿದರು.
ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವುದರಿಂದ ತಕ್ಷಣ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡಬೇಕು. ಬರ ಪರಿಹಾರ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ, ಅರ್ಹ ರೈತರ ಖಾತೆಗಳಿಗೆ ಪರಿಹಾರ ಮೊತ್ತವನ್ನು ವಿಳಂಬವಿಲ್ಲದೆ ಜಮಾ ಮಾಡಬೇಕು ಎಂದು ರೈತರು ಒತ್ತಾಯಿಸಿದರು.ಶೇ. 98ರಷ್ಟು ಬೆಳೆ ಹಾನಿ: ಬಳಿಕ ನಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ರಾಜ್ಯದಲ್ಲಿ ಅತ್ಯಂತ ಗಂಭೀರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ. 98ರಷ್ಟು ಬೆಳೆ ಹಾನಿಯಾಗಿದ್ದು, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
‘ಕಳೆದ ಒಂದು ವಾರದಲ್ಲಿ ಕೆಲವೆಡೆ ಮಳೆಯಾಗಿರುವುದರಿಂದ ಜಮೀನುಗಳಲ್ಲಿ ಬೆಳೆ ಗಿಡಗಳು ಹಸಿರಾಗಿ ಕಾಣುತ್ತಿವೆ. ಆದರೆ ಇದರಿಂದ ಬೆಳೆ ಬಂದೇ ಬರುತ್ತದೆ ಎಂದರ್ಥವಲ್ಲ. ಬಹುತೇಕ ಕಡೆ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ರೈತರು ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ’ ಎಂದರು.ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಬರ ನಿರ್ವಹಣೆ, ಕುಡಿಯುವ ನೀರು, ರೈತರಿಗೆ ನೆರವು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಒದಗಿಸುವುದಕ್ಕೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಹೇಳಿದರು.
ಬೆಳೆವಿಮೆ ಪರಿಹಾರ ಶೀಘ್ರ: ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಬೆಳೆವಿಮೆ ಪರಿಹಾರವನ್ನು ಶೀಘ್ರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹ ರೈತರಿಗೆ ವಿಮಾ ಪರಿಹಾರ ಸಕಾಲದಲ್ಲಿ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಪರಮೇಶ್ವರ ಭರವಸೆ ನೀಡಿದರು.ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ ₹8,500 ಬೆಳೆ ಪರಿಹಾರ ನಿಗದಿಪಡಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲಿನ ₹2,500 ನೀಡಲಾಗುತ್ತಿದೆ. ಕೇಂದ್ರದ ಪಾಲಿನ ಹಣ ಬಿಡುಗಡೆಯಾದ ಬಳಿಕ ರೈತರಿಗೆ ಪರಿಹಾರ ದೊರೆಯಲಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಬೇಡಿಕೆ ಸಲ್ಲಿಸಲಾಗಿದ್ದು, ಕೇಂದ್ರದ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ ಎಂದರು.
ಬರ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಇದ್ದರು.