ಬರ ನಿರ್ವಹಣೆ ಕೈಪಿಡಿ 2020ರ ಮೌಲ್ಯಮಾಪನ ಮಾನದಂಡಗಳ ಪ್ರಕಾರ ಇಂಡಿ, ಚಡಚಣ ಮತ್ತು ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಬರ ನಿರ್ವಹಣೆ ಕೈಪಿಡಿ 2020ರ ಮೌಲ್ಯಮಾಪನ ಮಾನದಂಡಗಳ ಪ್ರಕಾರ ಇಂಡಿ, ಚಡಚಣ ಮತ್ತು ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸೋಮವಾರದೊಳಗೆ ಈ ನಾಲ್ಕು ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಕಾರ್ಯವನ್ನು ಪೂರ್ಣಗೊಳಿಸಿ, ನಾಲ್ಕು ತಾಲೂಕುಗಳ ಅಂತಿಮ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗುವುದು. ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಹಂತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಸಚಿವರು, ನಿರಂತರವಾಗಿ ಮೂರು ವಾರಗಳ ಒಣ ಹವೆ (Dry Spell), ಉಪಗ್ರಹ ದತ್ತಾಂಶ ಮತ್ತು ರಿಮೋಟ್ ಸೆನ್ಸಿಂಗ್ ದತ್ತಾಂಶಗಳ ಆಧಾರಿತ ಪರಿಣಾಮದ ಸೂಚಕಗಳು ಮಾನದಂಡಗಳ ಆಧಾರದ ಮೇಲೆ, ಸರ್ಕಾರದ ಮಟ್ಟದಲ್ಲಿ ಸಮಗ್ರ ಬರ ಮೌಲ್ಯಮಾಪನ (ಮಧ್ಯಮ ಅಥವಾ ತೀವ್ರ ವರ್ಗ) ಮಾಡಿ ಅರ್ಹ ತಾಲೂಕು ಗುರುತಿಸಲಾಗುತ್ತದೆ.
ಅದನ್ನು ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಚಿವ ಸಂಪುಟ ಉಪ-ಸಮಿತಿಯ ಮುಂದೆ ಮಂಡಿಸಲಾಗುತ್ತದೆ. ಉಪ-ಸಮಿತಿಯು ತಾಲೂಕುಗಳ ಪಟ್ಟಿ ಅನುಮೋದಿಸಿ, ಮುಂದಿನ ಹಂತವಾದ ಕ್ಷೇತ್ರ ಪರಿಶೀಲನೆಗೆ (Ground Truthing) ಅಧಿಸೂಚನೆ ಹೊರಡಿಸಲಾಗುತ್ತದೆ. ಅಧಿಸೂಚನೆ ಹೊರಡಿಸಲಾದ ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆಯನ್ನು ಗ್ರೌಂಡ್ ಟ್ರೂಥಿಂಗ್ ಆ್ಯಪ್ ಮೂಲಕ ಮಾಡಲಾಗುತ್ತದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರೌಂಡ್ ಟ್ರೂಥಿಂಗ್ ಆ್ಯಪ್ ನಿಂದ ಯಾದೃಚ್ಛಿಕವಾಗಿ (random) ಆಯ್ಕೆಯಾದ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ನಾಲ್ಕು ದಿನಗಳೊಳಗೆ ಬೆಳೆ ಹಾನಿ ಮೌಲ್ಯಮಾಪನ ನಡೆಸುತ್ತಾರೆ. ಗ್ರೌಂಡ್ ಟ್ರೂಥಿಂಗ್ ವರದಿಯ ಆಧಾರದ ಮೇಲೆ ತಾಲೂಕನ್ನು ಮಧ್ಯಮ ಅಥವಾ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗುತ್ತದೆ. ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅಂತಿಮ ಬರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.ನಮ್ಮ ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿರುವ ತಾಲೂಕುಗಳಾದ ವಿಜಯಪುರ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ, ಬಬಲೇಶ್ವರ, ತಿಕೋಟಾ ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಕಾರ್ಯ ಮುಕ್ತಾಯಗೊಂಡು ಅಂತಿಮವಾಗಿ ತೀವ್ರ ಬರಪೀಡಿತ ತಾಲೂಕುಗಳೆಂದು ಸರ್ಕಾರದಿಂದ ಅಧಿಸೂಚಿಸಲಾಗಿದೆ. ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ಮತ್ತು ಮುದ್ದೇಬಿಹಾಳ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗಾಗಿ ಅಧಿಸೂಚಿಸಲಾಗಿದೆ. ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸೋಮವಾರದೊಳಗೆ ಈ ನಾಲ್ಕು ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಅದರ ಆಧಾರದ ಮೇಲೆ ಈ ನಾಲ್ಕು ತಾಲೂಕುಗಳ ಅಂತಿಮ ಅಧಿಸೂಚನೆಯನ್ನು ಸರ್ಕಾರದಿಂದ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.