ಸಾರಾಂಶ
ರಾಮನಗರ: ಜಿಲ್ಲೆಯ ವೈದ್ಯರು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಆ ಮೂಲಕ ಜಿಲ್ಲೆಯಲ್ಲಿ ತಾಯಿ ಹಾಗೂ ನವಜಾತ ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸುವಲ್ಲಿ ಜಿಲ್ಲೆಯ ವೈದ್ಯರು ಅಗತ್ಯ ಹಾಗೂ ಎಚ್ಚರಿಕೆಯ ಕ್ರಮಗಳನ್ನು ವಹಿಸಬೇಕು. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ 2.29 ರಷ್ಟಿದೆ, ಕಳೆದ ನಾಲ್ಕು ತಿಂಗಳಲ್ಲಿ 7 ಮಕ್ಕಳು ಮರಣ ಹೊಂದಿವೆ. ಜಿಲ್ಲೆಯಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮ ವಹಿಸಬೇಕು ಎಂದರು.ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ದಡಾರ ಮತ್ತು ರುಬೇಲ್ಲಾ ವಾಕ್ಸಿನೇಷನ್ ಕೊಡುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಯಬೇಕು. ಯಾವುದೊಂದು ಅರ್ಹ ಮಗೂವೂ ಈ ಲಸಿಕೆಯಿಂದ ಹೊರಗುಳಿಯಬಾರದು. ದಡಾರ ಮತ್ತು ರುಬೇಲ್ಲಾ ನಿರ್ಮೂಲನಾ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಮಾತನಾಡಿ, ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಮಾಗಡಿ ಹಾಗೂ ರಾಮನಗರ ತಾಲೂಕುಗಳಲ್ಲಿ 5-6 ವರ್ಷದ ಒಟ್ಟು 11,381ರಲ್ಲಿ 3,821 ಮಕ್ಕಳಿಗೆ, ಹತ್ತು ವರ್ಷ ಮೇಲ್ಪಟ್ಟ 13,191 ಮಕ್ಕಳಲ್ಲಿ 5,328 ಮಕ್ಕಳಿಗೆ, 16 ವರ್ಷಕ್ಕೂ ಮೇಲ್ಪಟ್ಟ 14,778 ಮಕ್ಕಳಲ್ಲಿ 5,065 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಉಳಿದ ಮಕ್ಕಳಿಗೆ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.ಪಿಸಿ ಮತ್ತು ಪಿಎನ್‌ಡಿಟಿ ಸಮಿತಿಯ ಸದಸ್ಯರಿಗೆ, ಖಾಸಗಿ ಆಸ್ಪತ್ರೆ ಮಾಲೀಕರಿಗೆ ಮತ್ತು ರೇಡಿಯಾಲಜಿಸ್ಟ್, ಸ್ತ್ರೀರೋಗ ತಜ್ಞರಿಗೆ ಕಾರ್ಯಾಗಾರವೊಂದನ್ನು ನಡೆಸಬೇಕು, ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಪಿಸಿ&ಪಿಎನ್‌ಡಿಟಿ ಕಾಯ್ದೆ ಪುಸ್ತಕವಿರಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಂಜುನಾಥ್, ಆರ್.ಸಿ.ಎಚ್ ಅಧಿಕಾರಿ ಡಾ. ರಾಜು, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಶಶಿಧರ್, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪದ್ಮರಾಜು, ಕಾರ್ಮಿಕ ಅಧಿಕಾರಿ ನಾಗೇಂದ್ರ ಎಚ್.ಆರ್. ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.9ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಅಭಿಯಾನ ಸಭೆ ನಡೆಯಿತು.