ಪುರಸಭೆಯ ಹಿಂದಿನ ಆಡಳಿತ ಮಂಡಳಿಯ ಸದಸ್ಯರ ಸಹೋದರರ ಹೆಸರಲ್ಲಿ ಈ ಅಂಗಡಿಗಳ ಬಾಡಿಗೆ ಇವೆ. ಹೀಗಾಗಿ ಅವರು ಕೂಡಾ ಮೌನಕ್ಕೆ ಶರಣರಾಗಿದ್ದಾರೆ.
ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ಪುರಸಭೆಗೆ ಆದಾಯ ಬರಲಿ, ಜನರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಪಟ್ಟಣದಲ್ಲಿ 2 ದಶಕಗಳ ಹಿಂದೆ ಕಟ್ಟಲಾದ ಪುರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ನಿಯಮಬಾಹಿರ ಚಟುವಟಿಕೆ ನಡೆಯುತ್ತಿವೆ.ಪಟ್ಟಣದ ಪುರಸಭೆಯ ಮಾಲೀಕತ್ವದ ಜಾಗದಲ್ಲಿ 20 ವರ್ಷಗಳ ಹಿಂದೆ ಐಡಿಎಸ್‌ಎಂಟಿ (Integrated Development of Small and Medium Towns) ಯೋಜನೆ ಅಡಿ ಸುಮಾರು 29 ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಿದೆ. ಆದರೆ ಈ ಮಳಿಗೆಗಳಲ್ಲಿ ಮಾಂಸ ಮಾರಾಟ, ಮದ್ಯ ಮಾರಾಟ ಮಾಡುವಂತಿಲ್ಲ ಎನ್ನುವ ಷರತ್ತು ವಿಧಿಸಿ ಬಾಡಿಗೆ ನೀಡಿದೆ. ಈಗ ಐಡಿಎಸ್‌ಎಂಟಿ ಮಳಿಗೆಗಳಲ್ಲಿ ರಾಜಾರೋಷವಾಗಿ ಚಿಕನ್ ಮಾರಾಟ, ಮಾಂಸ ಮಾರಾಟ ಮಾಡಲಾಗುತ್ತಿದೆ.
ಈ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಪಡೆದ ಕೆಲವರು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡಿದ್ದಾರೆ. ಪುರಸಭೆಯ ಸಿಬ್ಬಂದಿಗೆ ಇದು ಗೊತ್ತಿರದ ವಿಷಯಲ್ಲ. ಆದರೆ ನಮಗೇಕೆ ಅದರ ಉಸಾಬರಿ ಎಂದು ಬಾಯಿಮುಚ್ಚಿಕೊಂಡಿದ್ದಾರೆ.ಪುರಸಭೆಯ ಹಿಂದಿನ ಆಡಳಿತ ಮಂಡಳಿಯ ಸದಸ್ಯರ ಸಹೋದರರ ಹೆಸರಲ್ಲಿ ಈ ಅಂಗಡಿಗಳ ಬಾಡಿಗೆ ಇವೆ. ಹೀಗಾಗಿ ಅವರು ಕೂಡಾ ಮೌನಕ್ಕೆ ಶರಣರಾಗಿದ್ದಾರೆ. ಈ ಮಳಿಗೆಗಳಲ್ಲಿ ಚಿಕನ್ ಹಾಗೂ ಮಾಂಸ ಮಾರಾಟ ಮಾಡುವವರು ಮಾಂಸದ ತ್ಯಾಜ್ಯ ಹಾಗೂ ಕಸವನ್ನು ಬಿಸಾಡುತ್ತಾರೆ. ಮಾಂಸದ ಆಸೆಗೆ ಬಂದ ಬೀದಿನಾಯಿಗಳು ಚಿಕ್ಕಮಕ್ಕಳು ಹಾಗೂ ಮಹಿಳೆಯರ ಮೇಲೆ ದಾಳಿ ಮಾಡಿರುವ ಘಟನೆಗಳೂ ಆಗಾಗ ಜರುಗುತ್ತಿವೆ.
ಅಲ್ಲದೆ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳ ಮುಂದೆ ಎಗ್ ರೈಸ್ ಮಾರಾಟ ಮಾಡುವ, ಇಡ್ಲಿ ವಡಾ, ಬಜ್ಜಿ ಮಾರಾಟ ಮಾಡುವ ಕೈಗಾಡಿಯವರು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ.ಆಗ್ರಹ: ಪುರಸಭೆಯ ಐಡಿಎಸ್‌ಎಂಟಿ ಮಳಿಗೆಗಳಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತವೆ. ಕಳೆದ ಹಲವು ವರ್ಷಗಳಿಂದ ಅಂಗಡಿಯ ಬಾಡಿಗೆಗಳನ್ನು ಪರಿಷ್ಕರಣೆ ಮಾಡಿಲ್ಲ. ಹಳೆಯ ಮಾಲೀಕರನ್ನು ಬಿಡಿಸಿ ಹೊಸದಾಗಿ ಟೆಂಡರ್ ಕರೆಯುವ ಮೂಲಕ ಪುರಸಭೆಗೆ ಬರುವ ಆದಾಯ ಹೆಚ್ಚಿಸುವ ಕಾರ್ಯವನ್ನು ಪುರಸಭೆ ಮಾಡಬೇಕು ಎಂದು ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಆಗ್ರಹಿಸಿದರು.