ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡುವುದರಿಂದ ಎಐಸಿಸಿ ನಾಯಕರನ್ನು ವಿಮಾನನಿಲ್ದಾಣದಿಂದ ಲೋಕಭವನಕ್ಕೆ ಕರೆತರುವವರೆಗೆ...ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಉತ್ಸಾಹ, ಸಂಭ್ರಮದಿಂದ ಓಡಾಡಿದರು.

ನೊಣವಿನಕೆರೆ ಅಜ್ಜಯ್ಯ ನೀಡಿದ ದಿನ

ನೊಣವಿನಕೆರೆ ಅಜ್ಜಯ್ಯ ನೀಡಿದ ದಿನ, ಸಮಯದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಡಿ.ಕೆ.ಶಿವಕುಮಾರ್‌ ರಾಜ್ಯ ರಾಜಕೀಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಮುಖ್ಯಮಂತ್ರಿಯಾಗಿ ತಾವು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ ಅವರಿಗೆ ತಾವೇ ಖುದ್ದು ಆಹ್ವಾನ ನೀಡಿದರು.

ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿ ಆಹ್ವಾನ

ಮೊದಲಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಜತೆಗೂಡಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿ ಪ್ರಮಾನವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದರು. ನಂತರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ಧವಳಗಿರಿ ನಿವಾಸಕ್ಕೆ ಹಾಗೂ ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಲೋಕಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಈ ವೇಳೆ ಎಚ್‌.ಡಿ.ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆದರು.