ಸಾರಾಂಶ
ಗುಬ್ಬಿಗಾ ಗ್ರಾಮದ ಸಮುದಾಯ ಭವನದಲ್ಲಿ ಯಾಂತ್ರೀಕೃತ ಭತ್ತದ ಬೇಸಾಯ ತರಬೇತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಯಂತ್ರ ಬಳಸಿ ಭತ್ತದ ಕೃಷಿ ಮಾಡಿದರೆ ಲಾಭವೂ ಜಾಸ್ತಿ ಹಾಗೂ ಖರ್ಚು ಕಡಿಮೆಯಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ತಿಳಿಸಿದರು.ಶುಕ್ರವಾರ ಗುಬ್ಬಿಗ ಗ್ರಾಮದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಎಚ್.ಕೈಮರ ವಲಯ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಯಾಂತ್ರೀಕರಣದ ಮೂಲಕ ಭತ್ತದ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ರೈತರು ಭತ್ತದ ಕೃಷಿ ಬಿಟ್ಟು ಅಡಕೆ ಹಾಗೂ ಇತರ ವಾಣಿಜ್ಯ ಬೆಳೆ ಬೆಳೆಯುವ ಕಡೆ ಗಮನ ನೀಡುತ್ತಿದ್ದಾರೆ. ಆದರೆ, ಆಹಾರ ಬೆಳೆಯಾದ ಭತ್ತವನ್ನು ರೈತರು ಬಿಡಬಾರದು ಎಂದು ಸಲಹೆ ನೀಡಿದರು. ಧ.ಗ್ರಾ.ಯೋಜನೆ ಕೇಂದ್ರ ಕಚೇರಿಯ ಯಂತ್ರಶ್ರೀ ಯೋಜನಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿ, ಧ.ಗ್ರಾ.ಯೋಜನೆ ಅನೇಕ ವರ್ಷಗಳಿಂದ ಭತ್ತದ ಬೇಸಾಯವನ್ನು ಯಾಂತ್ರೀಕರಣ ಗೊಳಿಸಿ ತರಬೇತಿ, ಪ್ರಾತ್ಯಕ್ಷಿಕೆಯೊಂದಿಗೆ ನಡೆಸುತ್ತಾ ಬಂದಿದೆ. ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ ಪ್ರತಿ ವರ್ಷ 500 ಎಕರೆ ಪ್ರದೇಶದಲ್ಲಿ ಯಂತ್ರಶ್ರೀ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಇದರಿಂದ ಅತಿ ಕಡಿಮೆ ಖರ್ಚಿನಲ್ಲಿ ಜಾಸ್ತಿ ಭತ್ತ ಬೆಳೆಯಲು ಸಾಧ್ಯವಾಗುತ್ತಿದೆ ಎಂದರು.ಸಭೆಯಲ್ಲಿ ಧ.ಗ್ರಾ.ಯೋಜನೆ ಕೇಂದ್ರ ಕಚೇರಿ ಕೃಷಿ ವಿಭಾಗದ ಯೋಜನಾಧಿಕಾರಿ ಮಾರುತಿ, ಧ.ಗ್ರಾ.ಯೋಜನೆ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ, ಸಂಜೀವ, ಕೃಷಿ ಅಧಿಕಾರಿ ಹನುಮಂತ, ಪ್ರಬಂಧಕ ದೀಕ್ಷಿತ್, ಕೈಮರ ವಲಯ ಮೇಲ್ವಿಚಾರಕ ತೀರ್ಥ ರಾಜ್, ಸೇವಾ ಪ್ರತಿನಿಧಿಗಳಾದ ಅನ್ನಪೂರ್ಣ, ಶಿಬಿ, ಕೃಷಿಕರಾದ ಪ್ರತೀಕ್, ರಾಘವ ಪೂಜಾರಿ ಹಾಗೂ ಯಂತ್ರಶ್ರೀ ನಾಟಿ ಮಾಡುವ ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.