ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಸೀನ ಅವರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿದ್ದರಿಂದ ಅವರು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಶೇ. 75ರಷ್ಟು ಅಂಗವೈಕಲ್ಯ ಹೊಂದಿರುವ ಹಸೀನ ಅವರು ಆರೋಗ್ಯ ಸಮಸ್ಯೆಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದರು.ಆರ್ಥಿಕ ಸಮಸ್ಯೆ ಹಾಗೂ ಮಾರ್ಗದರ್ಶನ ಕೊರತೆಯಿಂದ ಚಿಕಿತ್ಸೆ ಪಡೆಯದೆ ಮನೆಯಲ್ಲೇ ದಿನ ಕಳೆಯುತ್ತಿದ್ದರು.ಚಿಕಿತ್ಸೆಗೆ ಸಹಾಯ ಮಾಡುವಂತೆ ಹಸೀನ ಲಿಖಿತವಾಗಿ ಪಾಲಿಬೆಟ್ಟ ಚೆಶ್ಸೆರ್ ಹೋಮ್ ಮುಖ್ಯೋಪಾಧ್ಯಾಯರಾದ ಶಿವರಾಜ್ ಅವರ ಗಮನ ಸೆಳೆದಿದ್ದರು. ಅವರು ಈ ಸಂಬಂಧ ಮಾಧ್ಯಮ ಸ್ಪಂದನ ತಂಡದ ಪುತ್ತಂ ಪ್ರದೀಪ್ ಬಾಲನ್ ಅವರಿಗೆ ಮನವಿ ಮಾಡಿಕೊಂಡಿದ್ದರು.

ಮಾಧ್ಯಮ ಸ್ಪಂದನ ಕೋರಿಕೆ ಅನ್ವಯ ಜೀವ ರಕ್ಷಕ ಚೋಕಂಡ ಸಂಜು ಸುಬ್ಬಯ್ಯ ಮಂಗಳೂರಿನ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.

ವಿರಾಜಪೇಟೆಯಿಂದ ಮಂಗಳೂರು ಆಸ್ಪತ್ರೆಗೆ ಹಸೀನ ಅವರನ್ನು ಕರೆದುಕೊಂಡು ಹೋಗಲು ಎಸ್ ಕೆಎಸ್ಎಸ್ಎಫ್ ಸಿದ್ದಾಪುರ ಶಾಖೆಯಿಂದ ಉಚಿತವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

ಎಸ್ ಕೆಎಸ್ಎಸ್ಎಫ್ ಖಜಾಂಚಿ ಇಂಜಿಲಗೆರೆ ಎನ್.ಎ. ನೌಶಾದ್ ಹೆಚ್ಚಿನ ಮುತುವರ್ಜಿ ವಹಿಸಿ ವಿರಾಜಪೇಟೆಗೆ ಖುದ್ದು ಆಗಮಿಸುವ ಮೂಲಕ ಹಸೀನ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದರು. ಅಲ್ಲದೆ ವೈಯುಕ್ತಿಕ ನೆರವು ಕೂಡ ಒದಗಿಸಿದ್ದರು.


ಮಂಗಳೂರಿಗೆ ಹಸೀನ ಅವರ ಜೊತೆ ಸ್ನೇಹಿತೆ ಭಾಗ್ಯ ಅವರು ತಮ್ಮ ಪತಿಯೊಂದಿಗೆ ತೆರಳಿ ಮಾನವೀಯತೆ ಮೆರೆದಿದ್ದಾರೆ.ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಹಸೀನ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತನ್ನ ಚಿಕಿತ್ಸೆಗೆ ಸಹಕರಿಸಿದ ಚೋಕಂಡ‌ ಸಂಜು ಸುಬ್ಬಯ್ಯ, ಪುತ್ತಂ ಪ್ರದೀಪ್ ಬಾಲನ್, ಇಂಜಿಲಗೆರೆ ನೌಶಾದ್, ಸ್ನೇಹಿತೆ ಭಾಗ್ಯ, ಮಂಗಳೂರಿನ ಆಸ್ಪತ್ರೆ ವೈದ್ಯರು- ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಹಸೀನ‌ ಚಿಕಿತ್ಸೆಗೆ ಅಗತ್ಯ ಸಹಾಯ ಮಾಡಿದ ಎಲ್ಲರಿಗೂ ಟೀಮ್ ಮಾಧ್ಯಮ ಸ್ಪಂದನದ ಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಧನ್ಯವಾದ ಸಲ್ಲಿಸಿದ್ದಾರೆ.