8,9ಕ್ಕೆ ಕವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಮಾಧ್ಯಮ ಹಬ್ಬ

| Published : Jul 07 2024, 01:25 AM IST

8,9ಕ್ಕೆ ಕವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಮಾಧ್ಯಮ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇ ವರ್ಷಾಚರಣೆ ಅಂಗವಾಗಿ ಜು. 8 ಮತ್ತು 9ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಸಮ್ಮೇಳನ, ಮಾಧ್ಯಮ ಹಬ್ಬ ಹಾಗೂ ಕವಿಪವಿ ಸಮ್ಮೀಲನ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇ ವರ್ಷಾಚರಣೆ ಅಂಗವಾಗಿ ಜು. 8 ಮತ್ತು 9ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಸಮ್ಮೇಳನ, ಮಾಧ್ಯಮ ಹಬ್ಬ ಹಾಗೂ ಕವಿಪವಿ ಸಮ್ಮೀಲನ ಏರ್ಪಡಿಸಲಾಗಿದೆ.

ಈ ಕುರಿತಂತೆ ಪ್ರಕಟಣೆ ಮೂಲಕ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ. ಚಂದುನವರ ಮಾಹಿತಿ ನೀಡಿದ್ದಾರೆ.

ಪತ್ರಿಕೋದ್ಯಮ ವಿಭಾಗದ 40ನೇ ವರ್ಷದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ಈ ಸಮ್ಮೇಳನ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಸಹಯೋಗದಲ್ಲಿ "ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು " ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ, ರಾಜ್ಯ ಮಟ್ಟದ ಮಾಧ್ಯಮ ಹಬ್ಬ “ರೈನ್ ಬೋ-2024” ಹಾಗೂ ಕವಿಪವಿ ಸಮ್ಮಿಲನ – ವಿಭಾಗದ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವು ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ.ಉದ್ಘಾಟನೆ

ಕಾರ್ಯಕ್ರಮದ ಉದ್ಘಾಟನೆಯನ್ನು ಜು. 8ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ನೆರವೇರಿಸಲಿದ್ದಾರೆ. ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಕೊಪ್ಪಳ ವಿವಿಯ ಕುಲಪತಿ ಪ್ರೊ. ಬಿ.ಕೆ. ರವಿ ಹಾಗೂ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ಪ್ರೊ. ಎ.ಎಸ್. ಬಾಲಸುಬ್ರಮಣ್ಯ ಅವರು ‘ಪತ್ರಿಕೋದ್ಯಮದ ಪಲ್ಲಟಗಳು’ ಹಾಗೂ ಹಳೆಯ ವಿದ್ಯಾರ್ಥಿಗಳ ಲೇಖನಗಳ ಸಂಗ್ರಹ ‘ಮಾಧ್ಯಮ ಕ್ಷಿತಿಜ’ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ, ಸಹ ಪ್ರಾಧ್ಯಾಪಕ ಡಾ. ಸಂಜಯ ಕುಮಾರ್ ಮಾಲಗತ್ತಿ, ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಪ್ರಶಾಂತ್ ವೇಣುಗೋಪಾಲ್ ಉಪಸ್ಥಿತರಿರುವರು

ಸಂಜೆ 4ಗಂಟೆಗೆ ಕವಿಪವಿ ಸಮ್ಮಿಲನ ಕಾರ್ಯಕ್ರಮ ಜರುಗಲಿದ್ದು, ವಿಭಾಗದ 45 ಹಳೆಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕವಿಪವಿ ಸಂಘದ ನೂತನ ವೆಬ್‌ಸೈಟ್ ಲೋಕಾರ್ಪಣೆ ನಡೆಯಲಿದೆ. ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವೆಬ್‌ಸೈಟ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕವಿವಿ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಡಾ. ಎಂ. ಗಂಗಾಧರಪ್ಪ ಹಾಗೂ ಡಾ. ನಾಗರಾಜ್ ಹಳ್ಳಿಯವರ, ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಕೆ. ಮರಿಸ್ವಾಮಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ವಿವಿಯ ಕುಲಪತಿ ಪ್ರೊ. ಬಿ.ಕೆ. ಗುಡಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಪವಿ ಬೆಂಗಳೂರು ವಿಭಾಗದ ಅಧ್ಯಕ್ಷ ಪ್ರವೀಣ ಶಿರಿಯಣ್ಣವರ ಹಾಗೂ ಧಾರವಾಡ ವಿಭಾಗದ ಅಧ್ಯಕ್ಷ ಡಾ. ರಾಜು ವಿಜಾಪುರ ಉಪಸ್ಥಿತರಿರುವರು.ಮುಖಾಮುಖಿ- ಪ್ಯಾನೆಲ್ ಚರ್ಚೆ:

ಪತ್ರಿಕೋದ್ಯಮ ಉದ್ಯಮಕ್ಕೆ ವೃತ್ತಿಪರರನ್ನು ಸಿದ್ದಗೊಳಿಸುವ ಕುರಿತು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮದಲ್ಲಿ ಪ್ರಮುಖ ದಿನಪತ್ರಿಕೆಗಳ ಹಾಗೂ ವಿದ್ಯುನ್ಮಾನ ಮತ್ತು ಅಂತರ್ಜಾಲ ಮಾಧ್ಯಮದ ಪ್ರಮುಖರೊಂದಿಗೆ ವಿದ್ಯಾರ್ಥಿಗಳ ಸಂವಾದ ನಡೆಯಲಿದೆ.

ಭಾಷಣಕಾರರಾಗಿ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಹಿರಿಯ ಪತ್ರಕರ್ತ ಸುಭಾಷ್ ಹೂಗಾರ್, ಹುಬ್ಬಳ್ಳಿ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕ ಆನಂದ್ ಯಮನೂರು, ವಿಜಯವಾಣಿ ಡಿಜಿಟಲ್‌ನ ಸಂಪಾದಕ ಸಿದ್ದಪ್ಪ ಕಾಳೋಜಿ, ದಿ.ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಸ್ಥಾನಿಕ ಸಂಪಾದಕ ರಾಮು ಪಾಟೀಲ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಮಾಧ್ಯಮೇತರ ವೃತ್ತಿಪರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಿಆರ್, ಈವೆಂಟ್, ಬಿಟ್ಸ್ಪಾರ್ಟ್ ಪ್ರಾ.ಲಿ.ನ ನಿರ್ದೇಶಕ ಸಯ್ಯದ್ ಸನದಿ, ಬ್ರ್ಯಾಂಡ್-ಕಾಮ್, ಎ ಮ್ಯಾಡಿಸನ್ ವರ್ಲ್ಡ್ ಯೂನಿಟ್‌ನ ಸಿಒಒ ಪ್ರವೀಣ ಶಿರಿಯಣ್ಣವರ, ಅಭಿವೃದ್ಧಿ ಪತ್ರಕರ್ತ ಹರ್ಷವರ್ಧನ ಶೀಲವಂತ, ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ, ಸ್ವತಂತ್ರ ಛಾಯಾಗ್ರಾಹಕ ಸುಧಾಕರ್ ಸುನಿಲ್‌ಕುಮಾರ್, ರಾಜಕೀಯ ವಿಶ್ಲೇಷಕ ಹನುಮೇಶ್ ಯಾವಗಲ್ಲ ಭಾಗವಹಿಸಲಿದ್ದಾರೆ.

ರೈನ್‌ ಬೋ- ಮಾಧ್ಯಮ ಹಬ್ಬ ಹಾಗೂ ರಾಷ್ಟ್ರೀಯ ಸಮ್ಮೇಳನ

ರೈನ್ ಬೋ-2024 ಮಾಧ್ಯಮ ಹಬ್ಬದಲ್ಲಿ, ರಾಜ್ಯದ ವಿವಿಧ ವಿವಿಗಳ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗಾಗಿ ವರದಿಗಾರಿಕೆ, ಮಾಧ್ಯಮ ರಸಪ್ರಶ್ನೆ, ಛಾಯಾಚಿತ್ರ, ದಿನಪತ್ರಿಕೆ ಪುಟ ವಿನ್ಯಾಸ, ನಿರೂಪಣೆ, ರೇಡಿಯೋ ಜಾಕಿ, ಪೀಸ್ ಟು ಕ್ಯಾಮೆರಾ, ಸುದ್ದಿಯ ವಿವರಣೆ ಮೊದಲಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ ಜು. 9ರಂದು ಮಧ್ಯಾಹ್ನ 3ಗಂಟೆಗೆ ಜರುಗಲಿದೆ. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಹುಬ್ಬಳ್ಳಿಯ ಈಶ್ವರಿ ಫೌಂಡೇಶನ್ ಅಧ್ಯಕ್ಷ ಸಂತೋಷ್ ವರ್ಣೇಕರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಬರ್ಟ್ ದದ್ದಾಪುರಿ ಗೌರವ ಅತಿಥಿಗಳಾಗಲಿದ್ದಾರೆ. ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಜೆ. ಎಂ. ಚಂದುನವರ, ಸಹ ಪ್ರಾಧ್ಯಾಪಕ ಡಾ. ಸಂಜಯ ಕುಮಾರ್ ಮಾಲಗತ್ತಿ, ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಬಿ.ಕೆ.ರವಿ, ಕಾರ್ಯದರ್ಶಿ ಡಾ.ಪ್ರಶಾಂತ ವೇಣುಗೋಪಾಲ ಭಾಗವಹಿಸಲಿದ್ದಾರೆ ಎಂದು ಚಂದುನವರ ತಿಳಿಸಿದ್ದಾರೆ.