ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಮಾಜ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಮುಖ್ಯ. ಮಾಧ್ಯಮ ಜೀವನದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ, ಮಾಹಿತಿ ವಿತರಣೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.ಅವರು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ದಿ.ಮನೋಹರ ಪ್ರಸಾದ್ ವೇದಿಕೆ, ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ಸಮಾಜದ ದುರ್ಬಲರಿಗೆ ಅಶಕ್ತರಿಗೆ ಶಕ್ತಿ ನೀಡಿದೆ. ಮಾಧ್ಯಮದ ಅತಿರಂಜಿತ ಸುದ್ದಿ, ಸತ್ಯ, ನೈತಿಕತೆಯ ಮರೆತ ಸುಳ್ಳು ಸುದ್ದಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜದ ನೈತಿಕತೆಯನ್ನು ಅಪಹಾಸ್ಯ ಮಾಡುವಂತಿದೆ. ಮಾಧ್ಯಮಗಳ ಸಂಶೋಧನೆ, ಆಳವಾದ ಚಿಂತನೆಯ ಮೂಲಕ ಸಮಾಜವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುವ ಅಗತ್ಯವಿದೆ ಎಂದರು.ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಅವರು ಹಸಿರೇ ಉಸಿರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಮಾಜದ ಒಳಿತಿಗಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪತ್ರಕರ್ತರ ಮಹತ್ವದ ಪಾತ್ರವಿದೆ. ಪತ್ರಕರ್ತರು ಸಮಾಜದ ಕಣ್ಣು ಕಿವಿಗಳಂತೆ ಇರುವವರು. ಸಮಾಜದ ತಪ್ಪುಗಳನ್ನು ಸರಿಪಡಿಸಲು ಮಾಧ್ಯಮ ಮಾರ್ಗದರ್ಶನ ನೀಡುತ್ತಾ ಬಂದಿದೆ ಎಂದರು.
ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಪತ್ರಕರ್ತರು ಸಮರ್ಪಕವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣ ಮಾಡುವಂತಾಗಬೇಕು ಎಂದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಶುಭ ಹಾರೈಸಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಹಿಂದೆ ಮಾಹಿತಿಗಾಗಿ ಪತ್ರಿಕೆಯನ್ನು ಕಾದು ಕುಳಿತು ಓದುತ್ತಿದ್ದರು. ಆದರೆ ಮೂರು ದಶಕಗಳ ಬಳಿಕ ಸುದ್ದಿ ಮನೆಯಲ್ಲಿ ಬದಲಾವಣೆಯಾಗಿದೆ. ತಂತ್ರಜ್ಞಾನದಲ್ಲಿಯೂ ಬದಲಾವಣೆಯಾಗಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರಿನಿಂದ ಆರಂಭವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಪತ್ರಿಕೆಗಳ ಸಂಖ್ಯೆ ಕಡಿಮೆ ಇದ್ದರೂ ಸಮಾಜದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈಗ ಪತ್ರಿಕೆಯ ಸ್ವರೂಪ ಬದಲಾಗಿದೆ. ಪತ್ರಿಕೆಗೆ ಇರುವ ಶಕ್ತಿಯಿಂದ ನೊಂದವರ ಧ್ವನಿಯಾಗಲು, ಸಮಸ್ಯೆ ಪರಿಹರಿಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಹಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಬಹುದಾಗಿದೆ. ಪತ್ರಕರ್ತರು ಸಾಮಾಜಿಕ ಸ್ಪಂದನೆ, ಮಾನವೀಯತೆಯೊಂದಿಗೆ ಸೂಕ್ಷ್ಮ ಸಂವೇದನೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಮಾಧ್ಯಮ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಬೇಕಾಗಿದೆ ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಪತ್ರಕರ್ತ ದಿ. ವೀರೇಶ್ ಸ್ಮರಣಾರ್ಥ ಛಾಯಾಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕುತ್ಲೂರು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಹರಿಹರ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪಾಲಿಕೆ ಉಪ ಆಯುಕ್ತ ಚಂದ್ರಶೇಖರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಮಂಗಳೂರು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಪಡುಬಿದ್ರೆ ಮತ್ತಿತರರಿದ್ದರು.
ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ದಿನೇಶ್ ಇರಾ ನಿರೂಪಿಸಿದರು.ಸತೀಶ್ ಇರಾ, ದಿನೇಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರ್ ಸಿ.ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಯುವಜನತೆ ಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು: ಶಿವಸುಬ್ರಹ್ಮಣ್ಯಪ್ರಸ್ತುತ ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆಯ ಕೊರತೆ ಇದೆ. ಪತ್ರಿಕೋದ್ಯಮ, ಪತ್ರಕರ್ತರು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳದಿದ್ದರೆ ಅಪಾಯವಿದೆ. ಯುವ ಪತ್ರಕರ್ತರು ಬದ್ಧತೆಯೊಂದಿಗೆ, ಜಾತೀಯತೆಗೆ ಒಳಗಾಗದೆ, ಗುಂಪುಗಾರಿಕೆಗೆ ಒಳಗಾಗದೆ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕು. ಯುವ ಜನರಲ್ಲಿ ಪತ್ರಿಕೆ ಓದುವ ಅಭ್ಯಾಸ ಕುಂಠಿತವಾಗಿದ್ದು, ಇದನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಹೇಳಿದ್ದಾರೆ.
ಸಮ್ಮೇಳನಜ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ಡಿಜಿಟಲ್ ಕ್ರಾಂತಿಯಿಂದ ಪತ್ರಕರ್ತರು ನಲುಗಿದ್ದಾರೆ. ಈ ಕ್ರಾಂತಿ ಆತಂಕವನ್ನು ಸೃಷ್ಟಿಸಿದೆ. ಪತ್ರಿಕೋದ್ಯಮ ಒಂದು ಅದ್ಭುತ ಲೋಕ. ಆದರೆ ನಾನು ಪತ್ರಿಕೋದ್ಯಮದ ಕಲುಷಿತ ವಾತಾವರಣ, ಕಳೆದುಕೊಂಡ ಸಂವೇದನೆ, ಗುಂಪುಗಾರಿಕೆ, ಹಣದ ಹಪಹಪಿಕೆಯ ಪತ್ರಕರ್ತರನ್ನು ಕಂಡಿದ್ದೇನೆ. ಪತ್ರಕರ್ತರನ್ನು ವ್ಯವಸ್ಥಿತವಾಗಿ ಮುಗಿಸುವ ವ್ಯವಸ್ಥೆಯಿಂದ ಬೇಸತ್ತು ದೂರ ಉಳಿದಿದ್ದೇನೆ. ಕನ್ನಡ ಪತ್ರಿಕೋದ್ಯಮದ ಅವನತಿಗೆ ಪತ್ರಿಕೆ ನಡೆಸುವವರ ಕೆಲವೊಂದು ಧೋರಣೆಗಳು ಕಾರಣ, ಡಿಜಿಟಲ್ ತಂತ್ರಕ್ಕೆ ಹೆದರಬೇಕಾಗಿಲ್ಲ ಎಂದರು.