ಮಾಧ್ಯಮಗಳು ಸಮಾಜ ತಿದ್ದುವ ವೈದ್ಯನಿದ್ದಂತೆ

| Published : Jul 02 2024, 01:31 AM IST

ಸಾರಾಂಶ

ಪತ್ರಿಕೋದ್ಯಮದ ಮೌಲ್ಯ ಕಾಪಾಡಿಕೊಳ್ಳಲು ಭಾಷೆಯ ಅಗತ್ಯವಿದೆ, ಪತ್ರಿಕೋದ್ಯಮ ತರಗತಿಗೆ ಬರುವ ಅನೇಕರಿಗೆ ಕನ್ನಡ, ಇಂಗ್ಲಿಷ್ ಬರೊಲ್ಲ ಆದ್ದರಿಂದ ಮೊದಲು ಭಾಷೆ ಕಟ್ಟುವ ಕೆಲಸವಾಗಬೇಕು. ಇತರೆ ಮಾಧ್ಯಮ ದಾರಿ ತಪ್ಪಿದರೂ ಮುದ್ರಣ ಮಾಧ್ಯಮ ದಾರಿ ತಪ್ಪಬಾರದು,

ಕನ್ನಡಪ್ರಭ ವಾರ್ತೆ ಕೋಲಾರಕಾಲಕ್ಕೆ ಎದುರಾಗಿ ಹೋಗುತ್ತಿರುವ ಇತರೆಲ್ಲಾ ಮಾಧ್ಯಮಗಳೊಂದಿಗೆ ಸೆಣಸುವುದು ಮುದ್ರಣ ಮಾಧ್ಯಮಕ್ಕೆ ಸವಾಲಾಗಿದೆ ಮತ್ತು ಯಾರು ಪತ್ರಕರ್ತರು ಎಂಬುದನ್ನು ನಿಷ್ಕರ್ಷೆ ಮಾಡುವ ಕಾಲದಲ್ಲಿರುವ ಸುದ್ದಿ ಮಾಧ್ಯಮ ಇಂದು ಸಂಕಟದಲ್ಲಿದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜಕ್ಕೆ ಒಳಿತು ಮಾಡಬೇಕು

ಪತ್ರಿಕಾದಿನ, ವೈದ್ಯರ ದಿನ, ಲೆಕ್ಕಪರಿಶೋಧಕರ ದಿನ ಎಲ್ಲವೂ ಜು.೧ ಆಗಿದೆ ವೈದ್ಯರು ದೇಹಕ್ಕೆ ಒಳಿತಾಗುವ ಕೆಲಸ ಮಾಡುವಂತೆ ಪತ್ರಕರ್ತರು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಸಮಾಜದ ವೈದ್ಯರು ಎಂದು ಅಭಿಪ್ರಾಯಪಟ್ಟರು.ಸಮಾಜದ ನಾಡಿಮಿಡಿತ ಅರ್ಥಮಾಡಿಕೊಂಡು ಸಾಗಬೇಕಾದ ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಯೂ ಅಗತ್ಯವಿದೆ, ಇಡೀ ಮಾಧ್ಯಮ ಬದಲಾವಣೆ ಹಂತದಲ್ಲಿದ್ದು, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌, ಫೇಸ್‌ಬುಕ್‌ಗಳು ಯಾರ ಹಂಗಿಲ್ಲ ಇವಕ್ಕೆ ಗೇಟ್ ಕೀಪರ್ ಇಲ್ಲ ಆದರೆ ಮುದ್ರಣ ಮಾಧ್ಯಮಕ್ಕೆ ಗೇಟ್ ಕೀಪರ್ ಇದ್ದು, ಈ ಎಲ್ಲದರ ನಡುವೆಯೂ ವಸ್ತುನಿಷ್ಠವಾದ ಸುದ್ದಿಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಎಂದರು.ಪತ್ರಕರ್ತರಿಗೆ ಡಿಪ್ಲೋಮೋ ಕೋರ್ಸ್ಬೆಂಗಳೂರು ಉತ್ತರ ವಿವಿಯಿಂದ ಹಾಲಿ ಪತ್ರಕರ್ತರಿಗಾಗಿಯೇ ಡಿಪ್ಲೋಮೋ ಕೋರ್ಸ್ ತೆರೆಯಲು ತಾವು ಸಿದ್ದರಿದ್ದು, ಶನಿವಾರ,ಭಾನುವಾರವೂ ತರಗತಿ ನಡೆಸುವ ಮೂಲಕ ನೀವು ಸಹಕಾರ ನೀಡಿದರೆ ಪತ್ರಿಕಾ ಭವನದಲ್ಲೇ ತರಗತಿ ನಡೆಸಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.ಭಾಷೆ ಕಟ್ಟುವ ಕೆಲಸವಾಗಬೇಕು

ಪತ್ರಿಕೋದ್ಯಮದ ಮೌಲ್ಯ ಕಾಪಾಡಿಕೊಳ್ಳಲು ಭಾಷೆಯ ಅಗತ್ಯವಿದೆ, ಪತ್ರಿಕೋದ್ಯಮ ತರಗತಿಗೆ ಬರುವ ಅನೇಕರಿಗೆ ಕನ್ನಡ, ಇಂಗ್ಲಿಷ್ ಬರೊಲ್ಲ ಆದ್ದರಿಂದ ಮೊದಲು ಭಾಷೆ ಕಟ್ಟುವ ಕೆಲಸವಾಗಬೇಕು. ಇತರೆ ಮಾಧ್ಯಮ ದಾರಿ ತಪ್ಪಿದರೂ ಮುದ್ರಣ ಮಾಧ್ಯಮ ದಾರಿ ತಪ್ಪಬಾರದು, ಇಂದು ಅಸ್ಥಿತ್ವದ ಪ್ರಶ್ನೆ ಎದುರಾಗಿದ್ದು, ಎಲ್ಲಾ ಸವಾಲು ಮೆಟ್ಟಿನಿಂತು ತಮ್ಮತನ ಉಳಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಖಜಾಂಚಿ ವಾಸುದೇವಹೊಳ್ಳ, ಸದಸ್ಯ ವಿ.ಮುನಿರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಮತ್ತಿತರರು ಇದ್ದರು.