ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕೃತಕ ಬುದ್ಧಿಮತ್ತೆಯ ಈ ಆಧುನಿಕ ಯುಗದಲ್ಲಿ ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಮಾಧ್ಯಮ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಕರ್ನಾಟಕ ಮಾಧ್ಯಮ ಅಕಾಡೆಮಿಯ ಚಿಂತನೆಗೆ ಶೀಘ್ರದಲ್ಲಿ ಕೆಕೆಆರ್‌ಡಿಬಿ ಮುಂದೆ ಪ್ರಸ್ತಾವನೆಯಿಟ್ಟು ಕ್ರಮವಹಿಸಲಾಗುವುದು ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ತಿಳಿಸಿದರು.ಅವರು ಇಲ್ಲಿನ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗಳ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನಾಭಿಪ್ರಾಯ ಮೂಡಿಸಿ ಸೂಕ್ತ ದಾರಿ ತೋರಿಸುವ ಪವಿತ್ರವಾದ ಮಾಧ್ಯಮದ ಈ ಕರ್ತವ್ಯ ಎಲ್ಲೋ ಒಂದು ಕಡೆ ಎಡವುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸುದ್ದಿಯಲ್ಲಿ ನಿಖರತೆ ಹಾಗೂ ಪರಿಣಾಮಕಾರಿ ಸಂವಹನ ಬೇಕು, ಅದಕ್ಕಾಗಿ ಪತ್ರಕರ್ತರು ಹೆಚ್ಚು ಹೆಚ್ಚು ತರಬೇತಿಗಳಲ್ಲಿ ಪಾಲ್ಗೊಳ್ಳಲಿ ಎಂದು ಹೇಳಿದರು.ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದರ ಜೊತೆಗೆ ಈ ಅಂಗಗಳ ನ್ಯೂನ್ಯತೆಯನ್ನು ಎತ್ತಿ ಹಿಡಿಯುವ ಅಷ್ಟೇ ಅಲ್ಲ ಪ್ರಗತಿದಾಯಕ ಕಾರ್ಯ ಮಾಡಿದರೆ ಅವನ್ನು ಪ್ರಶಂಸಿಸುವ ಕಾರ್ಯ ಮಾಧ್ಯಮಗಳು ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಶಾಖಾನಂ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಗುರುದ್ವಾರಾ ಪ್ರಬಂಧಕ ಸಮಿತಿ ಅಧ್ಯಕ್ಷ ಡಾ.ಸರ್ದಾರ ಬಲಬೀರಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಸದಸ್ಯರಾದ ರಶ್ಮಿ, ಅಬ್ಬಾಸ್ ಮುಲ್ಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಹಾಗೂ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಕಲ್ಯಾಣ ಕರ್ನಾಟಕದ ಭಾಗದ ಸುಮಾರು 200ಕ್ಕೂ ಅಧಿಕ ಪತ್ರಕರ್ತರು ತರಬೇತಿಯಲ್ಲಿ ಭಾಗವಹಿಸಿದ್ದರು.
ಹಸಿರು ಹೊದಿಕೆ ಹೆಚ್ಚಳಕ್ಕಾಗಿ 5 ಜಿಲ್ಲೆಗಳಿಗೆ 50 ಕೋಟಿ ರು.ಅಧಿಕ ಡಿಎಂಎಫ್ ನಿಧಿ ಹೊಂದಿರುವ ಬಳ್ಳಾರಿ ಹಾಗೂ ವಿಜಯನಗರ ಹೊರತುಪಡಿಸಿ ಕಲ್ಯಾಣ ಕರ್ನಾಟಕ ಭಾಗದ ಉಳಿದ ಐದು ಜಿಲ್ಲೆಗಳಲ್ಲಿ ಹಸಿರು ಹೊದಿಕೆ ಹೆಚ್ಚಳಕ್ಕಾಗಿ 50ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿ ಕೋಟ್ಯಾಂತರ ಸಸಿಗಳನ್ನು ಬೆಳೆಸುವ ಯೋಜನೆಗೆ ನಿರ್ಧರಿಸಲಾಗಿದೆ. ಮುಂದಿನ ಪೀಳಿಗೆಗೆ ಆಮ್ಲಜನಕದ ಕೊರತೆ ಆಗದಂತೆ ತಡೆಯಲು ರಾಜ್ಯದಲ್ಲಿ 15 ಕೋಟಿ ಸಸಿಗಳನ್ನು ನೆಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 35 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದರು.
ಮಣ್ಣಿನ ಗಣೇಶನ ಕೂರಿಸಿ: ಗಣೇಶ ಚತುರ್ಥಿಗೆ ಪಿಒಪಿ ಗಣೇಶ ಬಳಸದೇ ಮಣ್ಣಿನ ಪರಿಸರ ಸ್ನೇಹಿ ಗಣೇಶ ಕೂರಿಸುವ ಕೆಲಸ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ಉಳ್ಳ ವರು ಸಹ ಅನೇಕ ಜನ ಮಣ್ಣಿನ ಗಣಪತಿ ಬಳಸುತ್ತಾರೆ. ಜನರಿಗೆ ಮಾರಕ ಆಗಿರುವ ಪಿಒಪಿ ಗಣಪತಿ ಬಳಸದೆ ಮಣ್ಣಿನ ಗಣಪತಿ ಕೂರಿಸಿ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.